ವಿದ್ಯಾರ್ಥಿಗಳ ಬ್ಯಾಗ್ ತೂಕ ಇಳಿಕೆ ಸಂಬಂಧ ಆದೇಶ ಹೊರಡಿಸಿದ ಶಿಕ್ಷಣ ಇಲಾಖೆ

Update: 2019-06-01 16:18 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜೂ.1: ಬೇಸಿಗೆ ರಜೆಗಳು ಮುಗಿದಿದ್ದು, ಶಾಲೆಗಳು ಪುನರಾರಂಭಗೊಂಡ ಎರಡು ದಿನಗಳ ಬಳಿಕ ಶಿಕ್ಷಣ ಇಲಾಖೆ ಮಕ್ಕಳ ಬ್ಯಾಗ್‌ನ ತೂಕ ವಿದ್ಯಾರ್ಥಿಗಳ ದೇಹದ ಸರಾಸರಿ ಶೇ.10 ರಷ್ಟು ಮೀರಬಾರದು ಎಂದು ಸೂಚಿಸಿ ಆದೇಶ ಹೊರಡಿಸಿದೆ.

ಇತ್ತೀಚಿಗಷ್ಟೇ ರಾಜ್ಯ ಸರಕಾರ ಮಕ್ಕಳ ಬ್ಯಾಗ್ ತೂಕದ ಸಂಬಂಧ ನಿಯಮ ರೂಪಿಸಿ, ಸುತ್ತೋಲೆ ಹೊರಡಿಸಿತ್ತು. ಇದೀಗ ಮತ್ತೊಂದು ಬಾರಿ ಶಾಲೆಗಳ ಗಮನಕ್ಕೆ ತಂದಿರುವ ಶಿಕ್ಷಣ ಇಲಾಖೆ ಬ್ಯಾಗ್ ಭಾರದ ಮಿತಿ ಮೀರಬಾರದು ಎಂದು ಹೇಳಿದೆ.

1 ರಿಂದ 2ನೇ ತರಗತಿಯಲ್ಲಿ ಓದುತ್ತಿರುವ ಮಕ್ಕಳಿಗೆ ಹೋಂವರ್ಕ್ ನೀಡುವಂತಿಲ್ಲ. ಪ್ರತಿ ತಿಂಗಳ ಮೂರನೇ ಶನಿವಾರ ಬ್ಯಾಗ್ ರಹಿತ ದಿನಾಚರಣೆಯನ್ನು ಕಡ್ಡಾಯವಾಗಿ ಆಚರಿಸಬೇಕೆಂದು ಆದೇಶದಲ್ಲಿ ಹೇಳಲಾಗಿದೆ. ಅಲ್ಲದೆ, ಮಕ್ಕಳು ನೀರಿನ ಬಾಟಲ್ ತರುವುದನ್ನು ತಪ್ಪಿಸಲು ಶಾಲೆಯಲ್ಲೇ ನೀರಿನ ವ್ಯವಸ್ಥೆಯನ್ನು ಕಡ್ಡಾಯವಾಗಿ ಮಾಡಬೇಕು. 100 ಹಾಳೆಗಳು ಮೀರದ ಪುಸ್ತಕವನ್ನೇ ಮಕ್ಕಳಿಗೆ ನೀಡಬೇಕು. ಬ್ಯಾಗ್ ತೂಕದ ಬಗ್ಗೆ ಪೋಷಕರಿಗೆ ಜಾಗೃತಿ ಮೂಡಿಸುವ ಕೆಲಸ ಶಾಲೆಗಳು ಮಾಡಬೇಕು. ಮಕ್ಕಳಿಗೆ ಆಯಾ ದಿನದ ವೇಳಾಪಟ್ಟಿಗನುಗುಣವಾಗಿ ಪುಸ್ತಕವನ್ನು ತರಲು ಮುಂಚಿತವಾಗಿಯೇ ಸೂಚಿಸಬೇಕು. ಮಕ್ಕಳಿಗೆ ಅಗತ್ಯ ಕಲಿಕಾ ಸಾಮಗ್ರಿಗಳನ್ನು ಶಾಲೆಗಳಲ್ಲೇ ಸಂಗ್ರಹಿಸುವ ವ್ಯವಸ್ಥೆ ಮಾಡಬೇಕು ಎಂದೂ ಹೇಳಲಾಗಿದೆ.

ತೂಕ ಎಷ್ಟಿರಬೇಕು: 1-2ನೇ ತರಗತಿಗೆ 1.5 ರಿಂದ 2 ಕೆಜಿ, 3ರಿಂದ 5ನೇ ತರಗತಿಗೆ 2 ರಿಂದ 3 ಕೆಜಿ, 6 ರಿಂದ 8ನೇ ತರಗತಿವರೆಗೆ 3 ರಿಂದ 4 ಕೆಜಿ, 9 ರಿಂದ 10ನೇ ತರಗತಿಗೆ 4 ರಿಂದ 5 ಕೆಜಿ ಇರಬೇಕೆಂದು ಆದೇಶದಲ್ಲಿ ಸೂಚಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News