51 ರೂ. ಗಾಗಿ ಕಸ್ಟಮರ್ ಕೇರ್ ಗೆ ಕರೆ ಮಾಡಿದ ವ್ಯಕ್ತಿಯ 71 ಸಾವಿರ ರೂ. ಲಪಟಾಯಿಸಿದರು !

Update: 2019-06-01 17:25 GMT
ಸಾಂದರ್ಭಿಕ ಚಿತ್ರ

ಹರಿಹರ, ಜೂ.1: ಮೊಬೈಲ್‍ಗೆ ಗೂಗಲ್ ಪೇ ಮೂಲಕ 199 ರೂ. ಕರೆನ್ಸಿ ಹಾಕಿಸಿಕೊಂಡ ನಂತರ ತಮಗೆ ಬರಬೇಕಾದ 51 ರೂ. ಕ್ಯಾಶ್ ಬ್ಯಾಕ್ ಬಂದಿಲ್ಲವೆಂದು ಕಸ್ಟಮರ್ ಕೇರ್ ಗೆ ಕರೆ ಮಾಡಿದ್ದ ಅತಿಥಿ ಉಪನ್ಯಾಸಕರೊಬ್ಬರ ಖಾತೆಯಿಂದ 71,899 ರು. ಆನ್‍ಲೈನ್ ಮೂಲಕವೇ ಲಪಟಾಯಿಸಿದ ಘಟನೆ ಹರಿಹರ ನಗರದಲ್ಲಿ ವರದಿಯಾಗಿದೆ.

ಹರಿಹರದ ವಿದ್ಯಾನಗರ 1ನೇ ಕ್ರಾಸ್ ಸಿ ಬ್ಲಾಕ್ ನಿವಾಸಿ, ಅತಿಥಿ ಉಪನ್ಯಾಸ ಟಿ.ಜಿ.ರಾಘವೇಂದ್ರ ಆನ್‍ಲೈನ್ ವಂಚಕರ ಮಾತಿಗೆ ಕಿವಿಗೊಟ್ಟು ತಮ್ಮ ಖಾತೆಯಿಂದ 71,899 ರೂ. ಕಳೆದುಕೊಂಡ ವ್ಯಕ್ತಿ.

ಮೇ 27ರ ರಾತ್ರಿ 9.20 ರ ವೇಳೆ ರಾಘವೇಂದ್ರ ಗೂಗಲ್ ಪೇ ಮೂಲಕ ತಮ್ಮ ಮೊಬೈಲ್‍ಗೆ 199 ರೂ. ಕರೆನ್ಸಿ ಹಾಕಿಸಿಕೊಂಡಿದ್ದಾರೆ. ಹೀಗೆ ವ್ಯವಹರಿಸಿದ್ದರಿಂದ ತಮಗೆ 50 ರೂ. ಕ್ಯಾಶ್ ಬ್ಯಾಕ್ ಬರಬೇಕಾಗಿದ್ದು, ಅದು ಬಂದಿಲ್ಲವೆಂದು ಗೂಗಲ್‍ನಲ್ಲಿ ಕಸ್ಟಮರ್ ಕೇರ್ ನಂಬರ್ ಹುಡುಕಿ ಕರೆ ಮಾಡಿದ್ದಾರೆ. ತಕ್ಷಣಕ್ಕೆ ಯಾರೂ ಕರೆ ಸ್ವೀಕರಿಸಿಲ್ಲ. ಸ್ವಲ್ಪ ಸಮಯದ ನಂತರ ಅದೇ ನಂಬರ್ ನಿಂದ ರಾಘವೇಂದ್ರರ ಮೊಬೈಲ್‍ಗೆ ಕರೆ ಬಂದಿದೆ. ಕರೆ ಸ್ವೀಕರಿಸಿದ ರಾಘವೇಂದ್ರ ಕ್ಯಾಶ್ ಬ್ಯಾಕ್‍ನ 51 ರೂ. ಬಗ್ಗೆ ವಿಚಾರಿಸಿದಾಗ ಆ್ಯಪ್‍ವೊಂದನ್ನು ಡೌನ್ ಲೋಡ್ ಮಾಡಿಕೊಳ್ಳಲು ಕರೆ ಮಾಡಿದ್ದ ವ್ಯಕ್ತಿ ಸೂಚಿಸಿದ್ದಾರೆ.

ಅದರಂತೆ ರಾಘವೇಂದ್ರ ಅವರು ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳುತ್ತಿದ್ದಂತೆಯೇ ಕೆಲ ಮೆಸೇಜ್ ಗಳು ಬಂದಿವೆ. ನಂತರ ಕರೆ ಮಾಡಿದ ಆ ವ್ಯಕ್ತಿ ಎರಡು ನಂಬರ್ ಗಳನ್ನು ನೀಡಿ, ನಿಮ್ಮ ಮೊಬೈಲ್‍ಗೆ ಬಂದ ಮೆಸೇಜ್ ಗಳನ್ನು ತಾನು ಕಳುಹಿಸಿದ ನಂಬರ್ ಗೆ ಕಳಿಸಲು ತಿಳಿಸಿದ್ದಾರೆ. ಅದರಂತೆ ರಾಘವೇಂದ್ರ ಮಾಡಿದ್ದಾರೆ. ಅಲ್ಲದೆ, ಡೆಬಿಟ್ ಕಾರ್ಡ್ ನಂಬರ್ ಸಹ ನೀಡಿದ್ದಾರೆ. ಅದಾದ ಸ್ವಲ್ಪ ಹೊತ್ತಿನ ನಂತರ ರಾಘವೇಂದ್ರರ ಎಸ್‍ಬಿಐ ಬ್ಯಾಂಕ್ ಖಾತೆಯಿಂದ ಮೊದಲು 49,999 ರೂ. ಮತ್ತು ಬಳಿಕ 21,900 ರೂ. ಕಡಿತವಾದ ಬಗ್ಗೆ ಸಂದೇಶ ಬಂದಿದೆ. ಈ ವೇಳೆ ರಾಘವೇಂದ್ರ ಅವರು ಅದೇ ಸಂಖ್ಯೆಗೆ ಮತ್ತೆ ಕರೆ ಮಾಡಿದ್ದು, ಆದರೆ ಮೊಬೈಲ್‍ಗಳು ಸ್ವಿಚ್ ಆಫ್ ಆಗಿತ್ತು.

ಘಟನೆ ಬಗ್ಗೆ ರಾಘವೇಂದ್ರ ಅವರು ಮೇ 28ರಂದು ಬ್ಯಾಂಕ್‍ಗೆ ಹೋಗಿ ವಿಚಾರಿಸಿ, ಡೆಬಿಟ್ ಕಾರ್ಡ್ ಬ್ಲಾಕ್ ಮಾಡಿಸಿದ್ದು, ಬಳಿಕ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಇನ್ಸ್ ಪೆಕ್ಟರ್ ಟಿ.ವಿ.ದೇವರಾಜ ಆನ್ ಲೈನ್ ವಂಚಕರಿಗಾಗಿ ಜಾಲ ಬೀಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News