ಸಂತ್ರಸ್ತರಿಗೆ ಶೀಘ್ರ ಮನೆ ಹಸ್ತಾಂತರ: ಕೊಡಗು ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಭರವಸೆ

Update: 2019-06-01 17:47 GMT

ಮಡಿಕೇರಿ, ಜೂ.1 : ಕರ್ಣಂಗೇರಿ, ಮದೆನಾಡು, ಜಂಬೂರು ಗ್ರಾಮಗಳಲ್ಲಿ ಪ್ರಕೃತಿ ವಿಕೋಪದ ಸಂತ್ರಸ್ತರಿಗೆ ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು, ಮನೆಗಳ ನಿರ್ಮಾಣ ಕಾಮಗಾರಿ ವಿವಿಧ ಹಂತದಲ್ಲಿದ್ದು, ಮನೆಗಳನ್ನು ಶೀಘ್ರ ಸಂತ್ರಸ್ತರಿಗೆ ಹಸ್ತಾಂತರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಸಾ.ರಾ.ಮಹೇಶ್ ಅವರು ತಿಳಿಸಿದ್ದಾರೆ.  

ಪ್ರಕೃತಿ ವಿಕೋಪದ ಸಂತ್ರಸ್ತರಿಗೆ ನಿರ್ಮಿಸಲಾಗುತ್ತಿರುವ ಜಂಬೂರು ಮತ್ತು ಕರ್ಣಂಗೇರಿಗೆ ಶನಿವಾರ ಭೇಟಿ ನೀಡಿ ಮನೆಗಳನ್ನು ವೀಕ್ಷಿಸಿದ ಬಳಿಕ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಜಂಬೂರಿನಲ್ಲಿ 313 ಮನೆಗಳು, ಕರ್ಣಂಗೇರಿಯಲ್ಲಿ 35 ಹಾಗೂ ಮದೆನಾಡು ಗ್ರಾಮದ ಬಳಿ 80 ಮನೆಗಳು ಒಟ್ಟು 428 ಮನೆಗಳ ಕಾಮಗಾರಿ ಪ್ರಥಮ ಹಂತದಲ್ಲಿ ಪೂರ್ಣಗೊಳ್ಳುವ ಹಂತದಲ್ಲಿದೆ ಎಂದು ಸಚಿವರು ಮಾಹಿತಿ ನೀಡಿದರು.  

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ನುಡಿದಂತೆ ನಡೆದಿದ್ದಾರೆ. ಆ ನಿಟ್ಟಿನಲ್ಲಿ 9.85 ಲಕ್ಷ ರೂ. ವೆಚ್ಚದಲ್ಲಿ ಮನೆಗಳ ನಿರ್ಮಾಣ ನಡೆದಿದೆ. ಜೊತೆಗೆ ಬಾಡಿಗೆ ರೂಪದಲ್ಲಿ 10 ಸಾವಿರ ರೂ. ನೀಡಲಾಗುತ್ತಿದೆ ಎಂದರು. ಸದ್ಯದಲ್ಲೇ ಮುಂಗಾರು ಆರಂಭವಾಗಲಿದೆ. ಆದ್ದರಿಂದ ಶೀಘ್ರ ಮನೆ ಹಸ್ತಾಂತರ ಮಾಡಬೇಕಿದೆ. ಸಮಾರೋಪಾದಿಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದು ಸಚಿವರು ನುಡಿದರು. 

ಮಡಿಕೇರಿ ನಗರದ ಹಳೇ ಖಾಸಗಿ ಬಸ್ ನಿಲ್ದಾಣವನ್ನು ಪ್ರವಾಸಿ ತಾಣವನ್ನಾಗಿ ಮಾಡುವ ನಿಟ್ಟಿನಲ್ಲಿ ನೀಲ ನಕಾಶೆ ಸಿದ್ಧವಾಗಿದ್ದು, ಕಾಮಗಾರಿ ಶೀಘ್ರ ಆರಂಭಿಸಲಾಗುವುದು. ಹಾಗೆಯೇ ಹೊಸ ಖಾಸಗಿ ಬಸ್ ನಿಲ್ದಾಣಕ್ಕೆ ಶೀಘ್ರ ಚಾಲನೆ ನೀಡಲಾಗುವುದು ಎಂದು ಸಾ.ರಾ.ಮಹೇಶ್ ಅವರು ತಿಳಿಸಿದರು. 
ಕಳೆದ ವರ್ಷದ ನಾಡಹಬ್ಬ ದಸರಾಗೆ ಹಣ ಬಿಡುಗಡೆಯಾಗಿಲ್ಲ ಎಂಬ ಬಗ್ಗೆ ಗಮನ ಸೆಳೆದಾಗ, ಈಗಾಗಲೇ ಹಣ ಬಿಡುಗಡೆಯಾಗಿದೆ ಎಂದು ಸಚಿವರು ನುಡಿದರು.  

ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪೆನ್ನೇಕರ್, ಜಿ.ಪಂ. ಸಿಇಒ ಕೆ.ಲಕ್ಷ್ಮಿಪ್ರಿಯಾ, ಉಪ ವಿಭಾಗಾಧಿಕಾರಿ ಟಿ.ಜವರೇಗೌಡ, ಡಿವೈಎಸ್‍ಪಿ ಸುಂದರರಾಜ್, ಲೋಕೋಪಯೋಗಿ ಇಲಾಖೆ ಇಇ ಇಬ್ರಾಹಿಂ, ಭೂ ದಾಖಲೆಗಳ ಸಹಾಯಕ ನಿರ್ದೇಶಕರಾದ ಸಂಶುದ್ದೀನ್, ಪೌರಾಯುಕ್ತರಾದ ರಮೇಶ್ ಇತರರು ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News