×
Ad

ಸಂಸತ್ ಸುಗಮ ಕಲಾಪಕ್ಕೆ ವಿಪಕ್ಷಗಳ ಸಹಕಾರ ಅಗತ್ಯ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

Update: 2019-06-02 18:38 IST

ಬೆಂಗಳೂರು, ಜೂ. 2: ದೇಶದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಂಸತ್‌ನಲ್ಲಿ ಗುಣಾತ್ಮಕ ಚರ್ಚೆಗಳಾಗಬೇಕು. ಇದಕ್ಕೆ ಎಲ್ಲ ವಿಪಕ್ಷಗಳ ಸಹಕಾರ ಅಗತ್ಯ ಎಂದು ಕೇಂದ್ರ ಸಂಸದೀಯ ವ್ಯವಹಾರ, ಗಣಿ ಮತ್ತು ಕಲ್ಲಿದ್ದಲು ಖಾತೆ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ರವಿವಾರ ಕೇಂದ್ರ ಸಚಿವರಾದ ಬಳಿಕ ಮೊದಲ ಬಾರಿಗೆ ಹುಬ್ಬಳ್ಳಿಗೆ ಆಗಮಿಸಿದ ಅವರು ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಜೂನ್ 17ರಿಂದ ಸಂಸತ್ ಅಧಿವೇಶನ ಆರಂಭಗೊಳ್ಳಲಿದ್ದು, ಜುಲೈ 26ರ ವರೆಗೆ ನಡೆಯಲಿದೆ. ಸುದೀರ್ಘ 40 ದಿನಗಳ ಕಾಲ ಅಧಿವೇಶನ ನಡೆಯಲಿದೆ ಎಂದರು.

ದೇಶದ ಜನರ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂಬ ನಿರೀಕ್ಷೆ ಇದೆ. ಇದಕ್ಕೆ ವಿಪಕ್ಷಗಳ ಸಹಕಾರವೂ ಅತ್ಯಗತ್ಯ. ಯಾವುದೇ ವಿಷಯದ ಬಗ್ಗೆ ಚರ್ಚೆ ನಡೆಸಲು ಸರಕಾರ ಸಿದ್ದವಿದೆ. ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್ ಸೇರಿದಂತೆ ಎಲ್ಲ ಪಕ್ಷಗಳ ಹಿರಿಯ ಮುಖಂಡರನ್ನು ಖುದ್ಧು ಭೇಟಿಯಾಗಿ ಸಹಕಾರಕ್ಕೆ ಮನವಿ ಮಾಡುತ್ತೇನೆ ಎಂದರು.

ಸಿಎಂ ಜತೆ ಚರ್ಚೆ: ಮಹದಾಯಿ ನದಿ ನೀರು ಹಂಚಿಕೆ ಸಂಬಂಧ ಕಾನೂನು ತಜ್ಞರೊಂದಿಗೆ ಚರ್ಚಿಸಲಾಗುವುದು. ಅಲ್ಲದೆ, ಮುಖ್ಯಮಂತ್ರಿ, ಜಲಸಂಪನ್ಮೂಲ ಸಚಿವರು ದಿಲ್ಲಿಗೆ ಬಂದರೆ ಅಧಿಕಾರಿಗಳು ಮತ್ತು ಕಾನೂನು ತಜ್ಞರ ಜತೆ ಚರ್ಚಿಸಿ ಸಮಸ್ಯೆ ಇತ್ಯರ್ಥಕ್ಕೆ ಅಗತ್ಯ ಸಹಕಾರ ನೀಡಲಾಗುವುದು ಎಂದರು.

ಅತಿ ಹೆಚ್ಚು ಕಲ್ಲಿದ್ದಲು ಮೀಸಲು ಹೊಂದಿರುವ ವಿಶ್ವದ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತಕ್ಕೆ ಎರಡನೆ ಸ್ಥಾನವಿದೆ. ಆದರೆ, ನೀತಿ ನಿರೂಪಣೆಯಲ್ಲಿಯ ಲೋಪದಿಂದಾಗಿ ದೇಶದಲ್ಲಿ ಒಟ್ಟು 2 ಲಕ್ಷ ಮಿಲಿಯನ್ ಟನ್ ಕಲ್ಲಿದ್ದಲಿನ ಕೊರತೆ ಇದೆ. ಕಲ್ಲಿದ್ದಲು ಕೊರತೆ ನಿವಾರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. 

‘ಮಹಾರಾಷ್ಟ್ರದ ಕೊಯ್ನ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಹರಿಸುವ ಸಂಬಂಧ ಮಹಾರಾಷ್ಟ್ರ ಸಿಎಂ ಜೊತೆ ಮಾತನಾಡುವೆ. ಸಚಿವ ಡಿ.ಕೆ.ಶಿವಕುಮಾರ್ ಆಗಮಿಸುವುದಾದರೆ, ಮಹಾರಾಷ್ಟ್ರ ಸಿಎಂ ಅವರನ್ನು ಭೇಟಿ ಮಾಡಿಸುವೆ. ಈ ವಿಚಾರದ ಬಗ್ಗೆ ಚರ್ಚಿಸಿ ಸೂಕ್ತ ಪರಿಹಾರ ಕಂಡುಕೊಳ್ಳಬೇಕಿದೆ. ಇದಕ್ಕೆ ನಮ್ಮ ಎಲ್ಲ ಸಹಕಾರ ನೀಡಲು ಸಿದ್ಧ’

-ಪ್ರಹ್ಲಾದ್ ಜೋಶಿ ಕೇಂದ್ರ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News