ಸಿಎಂ ಕುಮಾರಸ್ವಾಮಿ ರಾಜೀನಾಮೆ ನೀಡುವುದು ಒಳಿತು: ಕೇಂದ್ರ ಸಚಿವ ಸುರೇಶ್ ಅಂಗಡಿ
ಬೆಳಗಾವಿ, ಜೂ. 2: ‘ರಾಜ್ಯದಲ್ಲಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಬಹಳ ದಿನ ಇರುವುದಿಲ್ಲ. ಹೀಗಾಗಿ ಮುಖ್ಯಮಂತ್ರಿ ಕುಮಾರಸ್ವಾಮಿಯವರೇ ರಾಜೀನಾಮೆ ನೀಡುವುದು ಒಳಿತು’ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಹೇಳಿದ್ದಾರೆ.
ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವಿಧಾನಸಭೆ ಚುನಾವಣೆಯಲ್ಲಿ ಜನರು ಕಾಂಗ್ರೆಸ್-ಜೆಡಿಎಸ್ ಅನ್ನು ತಿರಸ್ಕರಿಸಿದ್ದರು. ಆದರೂ, ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು, ಬಿಎಸ್‌ವೈ ಮತ್ತೆ ಸಿಎಂ ಆಗಬಾರದೆಂದು ಕಾಂಗ್ರೆಸ್-ಜೆಡಿಎಸ್ ಅಪವಿತ್ರ ಮೈತ್ರಿ ಮಾಡಿಕೊಂಡು ಸರಕಾರ ರಚನೆ ಮಾಡಿದ್ದಾರೆಂದು ಟೀಕಿಸಿದರು.
ಸರಕಾರದಲ್ಲಿನ ಮುಖಂಡರ ನಡುವಿನ ವೈಮನಸ್ಸಿನಿಂದ ಶೀಘ್ರವೇ ಮೈತ್ರಿ ಸರಕಾರ ಪತನಗೊಳ್ಳಲಿದೆ. ವಿಪಕ್ಷ ನಾಯಕರೂ ಆಗಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗುವುದು ನಿಶ್ಚಿತ ಎಂದು ಸುರೇಶ್ ಅಂಗಡಿ ಭರವಸೆ ವ್ಯಕ್ತಪಡಿಸಿದರು.
ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಜನತೆ ಬಿಜೆಪಿಯ 25 ಮಂದಿಯನ್ನು ಆಯ್ಕೆ ಮಾಡಿದ್ದಾರೆ. ಈ ಮೂಲಕ ಮೈತ್ರಿ ಸರಕಾರವನ್ನು ಸಂಪೂರ್ಣ ತಿರಸ್ಕರಿಸಿದ್ದಾರೆ. ಜನರ ಒಲವು ನಮ್ಮ ಪರವಿದೆ ಎಂಬ ಸಂದೇಶ ಸಾರಿದ್ದಾರೆ. ಹೀಗಾಗಿ, ಇಲ್ಲೂ ನಮ್ಮ ಸರಕಾರ ಬರಬೇಕು ಎಂದು ಅವರು ಆಶಯ ವ್ಯಕ್ತಪಡಿಸಿದರು.
‘ಅಖಂಡ ಕರ್ನಾಟಕವನ್ನು ಒಡೆಯುವ ಅಪಸ್ವರ ಎಲ್ಲಿಯೂ ಕೇಳಿಬರಬಾರದು. ಅನೇಕ ಹಿರಿಯರು ಹೋರಾಟ ಮಾಡಿ ಕರ್ನಾಟಕವನ್ನು ರಚಿಸಿದ್ದಾರೆ. ಯಾವುದೇ ಕಾರಣಕ್ಕೂ ರಾಜ್ಯವನ್ನು ವಿಭಜನೆ ಕೂಗು ಕೇಳಿಸದಂತೆ ಎಲ್ಲ ಭಾಗಕ್ಕೂ ಸರಕಾರ ಸೌಲಭ್ಯ ಕಲ್ಪಿಸಬೇಕು’
-ಸುರೇಶ್ ಅಂಗಡಿ, ಕೇಂದ್ರ ಸಚಿವ