ಒತ್ತಡ ನಿವಾರಣೆಗಾಗಿ ಸಾಹಿತ್ಯ ರಚಿಸುತ್ತೇನೆ: ಇನ್ಫೋಸಿಸ್ ಮುಖ್ಯಸ್ಥೆ ಸುಧಾಮೂರ್ತಿ

Update: 2019-06-02 15:07 GMT

ಬೆಂಗಳೂರು, ಜೂ.2: ನಾನು ಹಣ ಹಾಗೂ ಜನಪ್ರಿಯ ಆಗುವುದಕ್ಕಾಗಿ ಬರೆಯುವುದಿಲ್ಲ. ನನ್ನೊಳಗಿನ ಒತ್ತಡಗಳನ್ನು ನಿವಾರಣೆಗಾಗಿ ಸಾಹಿತ್ಯ ರಚಿಸುತ್ತೇನೆಂದು ಹಿರಿಯ ಸಾಹಿತಿ ಹಾಗೂ ಇನ್ಫೋಸಿಸ್ ಪ್ರತಿಷ್ಟಾನದ ಅಧ್ಯಕ್ಷೆ ಸುಧಾ ಮೂರ್ತಿ ತಿಳಿಸಿದರು.

ರವಿವಾರ ಕರ್ನಾಟಕ ಲೇಖಕಿಯರ ಸಂಘ ನಗರದ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 2019ರ ಅನುಪಮಾ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಅವರು, ಬರೆಯಲು ಕೂತಾಗ ನನ್ನ ಮನಸು ನಿರಾಳವಾಗುತ್ತದೆ. ಸಮಾಜದಲ್ಲಿ ನಡೆಯುವ ಘಟನೆಗಳೆ ನನ್ನ ಬರವಣಿಗೆಗೆ ವಸ್ತು ವಿಷಯಗಳಾಗಿರುತ್ತವೆಂದು ತಿಳಿಸಿದರು.

ಇನ್ಫೋಸಿಸ್ ಪ್ರತಿಷ್ಠಾನ ಸ್ಥಾಪಿಸುವುದಕ್ಕೂ ಮೊದಲು ನನ್ನ ಅನುಭವ ಸೀಮಿತವಾಗಿತ್ತು. ಆದರೆ, ಪ್ರತಿಷ್ಠಾನ ಪ್ರಾರಂಭಗೊಂಡ ನಂತರ ನಾನು ಸಿನೆಮಾ ತಾರೆಯರು, ರಾಜಕಾರಣಿಗಳು, ದೇವದಾಸಿಯರು, ದೀನ ದಲಿತರು, ಅನಾರೋಗ್ಯ ಪೀಡಿತರನ್ನು ತೀರ ಹತ್ತಿರದಿಂದ ನೋಡಲು ಸಾಧ್ಯವಾಯಿತು. ಇವರೊಂದಿಗೆ ಬೆರೆತು ಕಂಡುಂಡ ಅನುಭವಗಳೆ ಬರವಣಿಗೆಗೆ ಪ್ರೇರಣೆ ನೀಡಿದವು ಎಂದು ಅವರು ಹೇಳಿದರು.

ನಾನು ಕನ್ನಡ ಹಾಗೂ ಇಂಗ್ಲಿಷ್ ಎರಡಲ್ಲೂ ಸಾಹಿತ್ಯ ರಚಿಸುತ್ತೇನೆ. ಆದರೆ, ನನ್ನ ಹೃದಯ ಭಾಷೆ ಕನ್ನಡ. ನನ್ನ ಆಲೋಚನೆಗಳೆಲ್ಲೂ ಕನ್ನಡದಲ್ಲೇ ರೂಪಗೊಳ್ಳುತ್ತವೆ. ಹೀಗಾಗಿ ಕನ್ನಡದಲ್ಲಿ ಬರೆದ ನಂತರ ಅದನ್ನೇ ಇಂಗ್ಲಿಷ್ ಅನುವಾದಿಸುತ್ತೇನೆ. ಇಂಗ್ಲಿಷ್‌ನಲ್ಲಿ ಕೃತಿ ಬಿಡುಗಡೆಯಾದ ಕೇವಲ ಮೂರು ತಿಂಗಳಿನಲ್ಲಿಯೆ ದೇಶದ ಇತರೆ 13 ಭಾಷೆಗಳಿಗೆ ಅನುವಾದವಾಗುತ್ತವೆ. ಇದರಿಂದ ನನ್ನ ಓದುಗರ ಸಂಖ್ಯೆಯು ಹೆಚ್ಚಿದೆ ಎಂದು ಅವರು ಹೇಳಿದರು.

ನಾಡಿನ ಹಿರಿಯ ಲೇಖಕಿಯರಾಗಿ ಮಹಿಳಾ ಸಮುದಾಯದ ಅಸ್ಮಿತೆಯನ್ನು ಎತ್ತಿ ಹಿಡಿದ ಅನುಪಮಾ, ತ್ರಿವೇಣಿ, ಎಂ.ಕೆ.ಇಂದಿರಾ ಸೇರಿದಂತೆ ಹಲವು ಲೇಖಕಿಯರು ನನ್ನ ಬರವಣಿಗೆ ಹಾಗೂ ಆಲೋಚನೆಗಳಿಗೆ ಸ್ಫೂರ್ತಿಯಾಗಿದ್ದಾರೆ. ಆಗಿನ ಕಾಲದಲ್ಲಿ ಯಾವುದೆ ಸೌಲಭ್ಯಗಳು ಇಲ್ಲದಿದ್ದರೂ ಹಲವು ಸವಾಲುಗಳನ್ನು ಎದುರಿಸಿ ಕೃತಿಗಳನ್ನು ರಚಿಸುವ ಮೂಲಕ ಈಗಿನ ತಲೆಮಾರಿಗೆ ಮಾದರಿಯಾಗಿದ್ದಾರೆ. ಹೀಗಾಗಿ ಅನುಪಮಾ ಹೆಸರಿನಲ್ಲಿ ಪ್ರಶಸ್ತಿ ಸ್ವೀಕರಿಸುತ್ತಿರುವುದು ಹೆಮ್ಮೆಯ ವಿಷಯವೆಂದು ಅವರು ಹೇಳಿದರು.

ಕವಯತ್ರಿ ಡಾ.ಟಿ.ಸಿ.ಪೂರ್ಣಿಮಾ ಮಾತನಾಡಿ, ಹಿರಿಯ ಸಾಹಿತಿ ಅನುಪಮಾ ಸಾಹಿತ್ಯ ಆಶಯಗಳಿಗೂ ಸುಧಾಮೂರ್ತಿರವರ ಸಾಹಿತ್ಯ ಚಿಂತನೆಗಳ ನಡುವೆ ಹತ್ತಿರದ ಸಾಮ್ಯತೆ ಇದೆ. ಹೀಗಾಗಿ ಅವರನ್ನು ಅನುಪಮಾ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.

ಕನ್ನಡ ಸಾಹಿತ್ಯ ಕ್ಷೇತ್ರ ಲೇಖಕಿಯರನ್ನು ಮುಖ್ಯಧಾರೆಯ ಸಾಹಿತಿಗಳಾಗಿ ಗುರುತಿಸಲು ಈಗಲೂ ಹಿಂದೇಟು ಹಾಕುತ್ತಿದೆ. ಹಾಗೆ ನೋಡಿದರೆ ಲೇಖಕಿ ಸುಧಾಮೂರ್ತಿರವರ ಸಾಹಿತ್ಯ ಯಾವುದಕ್ಕೂ ಕಡಿಮೆ ಇಲ್ಲ. ಅವರ ಕೃತಿಗಳು ದೇಶ, ವಿದೇಶಿ ಭಾಷೆಗಳಿಗೆ ಅನುವಾದಗೊಂಡು ಲಕ್ಷಾಂತರ ಪ್ರತಿಗಳು ಮಾರಾಟವಾಗಿವೆ. ಆದರೆ, ಕನ್ನಡ ಸಾಹಿತ್ಯ ಕ್ಷೇತ್ರ ಮಾತ್ರ ಅವರನ್ನು ಒಬ್ಬ ಸಾಹಿತಿಯಾಗಿ ಗುರುತಿಸುವಲ್ಲಿ ವಿಫಲವಾಗಿದೆ ಎಂದು ಅವರು ವಿಷಾದಿಸಿದರು.

ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ವನಮಾಲಾ ಸಂಪನ್ನಕುಮಾರ್ ಮಾತನಾಡಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತವಾಗಿರುವ ನಾಡಿನ ಶ್ರೇಷ್ಟ ಸಾಹಿತಿ ಡಾ.ಸುಧಾಮೂರ್ತಿ ಸಾಹಿತ್ಯ, ಸಾಮಾಜಿಕ, ಸಾಂಸ್ಕೃತಿಕ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಚಿರಪರಿಚಿತ ಹೆಸರು. ಅವರು ಕನ್ನಡ ಹಾಗೂ ಕನ್ನಡ ಭಾಷೆಯಲ್ಲಿ ಸಾಹಿತ್ಯ ಕೃಷಿಯಲ್ಲಿ ತೊಡಗಿ ಸುಮಾರು 30ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.

ಸುಧಾಮೂರ್ತಿರವರ ಕೃತಿಗಳು ದೇಶದ ಎಲ್ಲ ಪ್ರಾದೇಶಿಕ ಭಾಷೆಗಳಿಗೂ ಅನುವಾದಗೊಂಡಿವೆ. ಇಲ್ಲಿಯವರಿಗೂ ಸುಮಾರು 26ಲಕ್ಷ ಪುಸ್ತಕಗಳು ದೇಶದಾದ್ಯಂತ ಮಾರಾಟವಾಗಿವೆ. ಅಂತಹ ಮೇರು ಸಾಹಿತಿ ಸುಧಾಮೂರ್ತಿಗೆ ಅನುಪಮಾ ಪ್ರಶಸ್ತಿ ಪ್ರದಾನ ಮಾಡುತ್ತಿರುವುದಕ್ಕೆ ಕರ್ನಾಟಕ ಲೇಖಕಿಯರ ಸಂಘ ಹೆಮ್ಮೆ ಪಡುತ್ತದೆ ಎಂದು ಅವರು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಮನು ಬಳಿಗಾರ್ ಪ್ರಶಸ್ತಿ ಪ್ರದಾನ ಮಾಡಿದರು. ಈ ವೇಳೆ ಲೇಖಕಿಯರ ಸಂಘದ ಕಾರ್ಯದರ್ಶಿ ನಾಗರತ್ನ ಚಂದ್ರಶೇಖರ, ಸಹ ಕಾರ್ಯದರ್ಶಿ ಜಿ.ವಿ.ನಿರ್ಮಲಾ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News