ಬಿಜೆಪಿ ಶಾಸಕ ಬಸವರಾಜ್ ಜತೆ ಕುಮಾರಸ್ವಾಮಿ ಸಮಾಲೋಚನೆ: ಫೋಟೋ ವೈರಲ್

Update: 2019-06-02 15:55 GMT

ಬೆಂಗಳೂರು, ಜೂ. 2: ಮೈತ್ರಿ ಸರಕಾರ ಅಸ್ಥಿರಗೊಳಿಸಲು ಆಪರೇಷನ್ ಕಮಲದ ಮೊರೆ ಹೊಕ್ಕ ಬಿಜೆಪಿಗೆ ತಿರುಗೇಟು ನೀಡಲು ಸಿಎಂ ಕುಮಾರಸ್ವಾಮಿ ಮುಂದಾಗಿದ್ದು, ಕನಕಗಿರಿ ಕ್ಷೇತ್ರದ ಬಿಜೆಪಿ ಶಾಸಕ ಬಸವರಾಜ್ ದಡೇಸುಗೂರು ಅವರೊಂದಿಗೆ ಚರ್ಚೆ ನಡೆಸಿರುವುದು ರಾಜಕೀಯ ಕುತೂಹಲ ಸೃಷ್ಟಿಸಿದೆ.

ಪಶುಸಂಗೋಪನಾ ಸಚಿವ ವೆಂಕಟರಾವ್ ನಾಡಗೌಡ ಅವರೊಂದಿಗೆ ಶಾಸಕ ಬಸವರಾಜ್ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅವರು ಬಿಜೆಪಿಗೆ ರಾಜೀನಾಮೆ ನೀಡಲಿದ್ದಾರೆಂಬ ಸುದ್ದಿ ಹರಿದಾಡುತ್ತಿದೆ.

ಕಾಂಗ್ರೆಸ್‌ನ ಅತೃಪ್ತ ಶಾಸಕರನ್ನು ಆಪರೇಷನ್ ಕಮಲದ ಮೂಲಕ ತಮ್ಮತ್ತ ಸೆಳೆದು ಮೈತ್ರಿ ಸರಕಾರಕ್ಕೆ ಅಸ್ಥಿರಕ್ಕೆ ಬಿಜೆಪಿ ನಾಯಕರು ತೆರೆ ಮರೆಯಲ್ಲೆ ಕಸರತ್ತು ನಡೆಸಿದ್ದಾರೆ. ಆದರೆ, ಇದಕ್ಕೆ ತಿರುಗೇಟು ನೀಡಲು ಮೈತ್ರಿ ಮುಖಂಡರು ಮುಂದಾಗಿದ್ದಾರೆಂಬುದು ಇದೀಗ ಶಾಸಕ ಬಸವರಾಜ್ ಮತ್ತು ಸಿಎಂ ಭೇಟಿಯಿಂದ ಬಹಿರಂಗವಾಗಿದೆ.

ಈ ಮಧ್ಯೆ ಪಕ್ಷೇತರ ಶಾಸಕರಿಗೆ ಸಚಿವ ಸ್ಥಾನ ನೀಡಲು ಮೈತ್ರಿ ಮುಖಂಡರು ನಿರ್ಧರಿಸಿದ್ದು, ಅತೃಪ್ತ ಶಾಸಕರಿಗೂ ಸಂಪುಟದಲ್ಲಿ ಸ್ಥಾನ ನೀಡುವ ಸಂಬಂಧ ಚರ್ಚೆ ನಡೆಸಿದ್ದಾರೆ. ಇದರ ಜತೆಗೆ ಬಿಜೆಪಿಯ ನಾಲ್ಕೈದು ಶಾಸಕರನ್ನು ಸೆಳೆಯಲು ಪ್ರಯತ್ನ ನಡೆಸಲಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಆಪರೇಷನೂ ಇಲ್ಲ, ಡೆಲಿವೆರಿನೂ ಇಲ್ಲ: ‘ನಾನು ಆಪರೇಷನ್‌ಗೂ ಒಳಗಾಗಿಲ್ಲ, ಯಾವುದೇ ಡೆಲಿವೆರಿನೂ ಇಲ್ಲ. ಕಾಂಗ್ರೆಸ್ ಸೇರ್ಪಡೆಯಾಗಿದ್ದೇನೆ ಎಂಬುದು ಅಕ್ಷರಶಃ ಸುಳ್ಳು ಸುದ್ಧಿ’ ಎಂದು ಕನಕಗಿರಿ ಕ್ಷೇತ್ರದ ಬಿಜೆಪಿ ಶಾಸಕ ಬಸವರಾಜ್ ದಡೇಸುಗೂರು ಸ್ಪಷ್ಟನೆ ನೀಡಿದ್ದಾರೆ.

2018ರ ಆಗಸ್ಟ್‌ನಲ್ಲಿ ನಾನು ಮತ್ತು ಸಚಿವ ವೆಂಕಟರಾವ್ ನಾಡಗೌಡರ ಜೊತೆಗೆ ಹೋಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದ ಫೋಟೋ ಇದೀಗ ವೈರಲ್ ಆಗಿದೆ. ಕ್ಷೇತ್ರಕ್ಕೆ ಸಮರ್ಪಕ ವಿದ್ಯುತ್ ಪೂರೈಕೆ ಸಂಬಂಧ ಸಿಎಂ ಭೇಟಿ ಮಾಡಿದ್ದೆ ಎಂದು ಸ್ಪಷ್ಟಪಡಿಸಿದರು.

ಸ್ನೇಹಿತನ ಜೊತೆ ಮೈಸೂರಿಗೆ ಹೋಗಿ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದು ಎರಡು ದಿನದ ಹಿಂದೆ ಬೆಂಗಳೂರಿಗೆ ಬಂದು ಕ್ಷೇತ್ರದ ಅಭಿವೃದ್ಧಿಯ ಕೆಲಸಗಳಿಗೆ ಸಂಬಂಧಿಸಿದಂತೆ ಕಚೇರಿಯಿಂದ ಕಚೇರಿಗೆ ತಿರುಗಾಡುತ್ತಿದ್ದೇನೆ. ಯಾವ ನಾಯಕರು ನನ್ನನ್ನು ಸಂಪರ್ಕಿಸಿಲ್ಲ. ಒಂದು ವೇಳೆ ಸಂಪರ್ಕಿಸಿದರೂ ನಾನು ಬಿಜೆಪಿ ಬಿಡುವುದಿಲ್ಲ ಎಂದರು.

ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಸಿಎಂ, ಸಚಿವರನ್ನು ಭೇಟಿಯಾಗುತ್ತೇನೆ. ಇದಕ್ಕೆ ಬೇರೆ ಅರ್ಥ ಕಲ್ಪಿಸುವುದು ಸರಿಯಲ್ಲ. ಕ್ಷೇತ್ರದ ವಿದ್ಯುತ್ ಪೂರೈಕೆ ಮತ್ತು ಅನುದಾನ ನೀಡುವ ಸಂಬಂಧ ಸಿಎಂಗೆ ಮನವಿ ಮಾಡಿದ್ದೇನೆ ಎಂದ ಅವರು, ನಾನು ಯಾವುದೇ ಕಾರಣಕ್ಕೂ ಪಕ್ಷ ಬಿಡುವುದಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News