ಮೈತ್ರಿ ಸರಕಾರ ಪತನವಾಗುವುದು ನಿಶ್ಚಿತ, ಬೇಕಾದರೆ ರಕ್ತದಲ್ಲಿ ಬರೆದು ಕೊಡುವೆ: ಶಾಸಕ ರೇಣುಕಾಚಾರ್ಯ

Update: 2019-06-02 17:11 GMT

ದಾವಣಗೆರೆ: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನವಾಗುವುದು ನಿಶ್ಚಿತ. ಬೇಕಾದರೆ ರಕ್ತದಲ್ಲಿ ಬರೆದು ಕೊಡುವೆ ಎಂದು ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ವೇಳೆ ಸಮ್ಮಿಶ್ರ ಸರ್ಕಾರ ಬೀಳದಿದ್ದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಆದರೆ, ನಾವಾಗಿಯೇ ಈ ಸರ್ಕಾರ ಅಸ್ಥಿರ ಮಾಡಲ್ಲ. ಆಪರೇಷನ್ ಕಮಲ ಸಹ ಮಾಡಲ್ಲ. ತನ್ನಿಂದ ತಾನೇ ಮೈತ್ರಿ ಸರ್ಕಾರ ಪತನವಾಗುವುದೂ ಸೂರ್ಯ, ಚಂದ್ರರಿರುವಷ್ಟೇ ಸತ್ಯ. ಅತೃಪ್ತ ಕಾಂಗ್ರೆಸ್ಸಿಗರಿಂದಲೇ ಸಮ್ಮಿಶ್ರ ಸರ್ಕಾರ ಬೀಳುವುದು ಖಚಿತ ಎಂದರು.

ಕುಮಾರಸ್ವಾಮಿಯನ್ನು ಸಿಎಂ ಸ್ಥಾನದಿಂದ ಇಳಿಸಲು ಕಾಂಗ್ರೆಸ್ಸಿನ ಪ್ರಬಲ ಗುಂಪಿನ ಶಾಸಕರು, ಜೆಡಿಎಸ್‍ನ ಕೆಲ ಅತೃಪ್ತ ಶಾಸಕರು ಸ್ಕೆಚ್ ಹಾಕಿದ್ದಾರೆ. ಕಾಂಗ್ರೆಸ್, ಬಿಜೆಪಿ ಶಾಸಕರಿಗೆ ನಿಮ್ಮ ಕಾಲು, ಕೈಗಳನ್ನು ಹಿಡಿಯುತ್ತೇವೆಂದು, ಬಿಜೆಪಿಯವರು ನಿಮ್ಮನ್ನು ಬಳಸಿಕೊಳ್ಳುತ್ತಿದ್ದಾರೆಂದು ಗುಮ್ಮ ಬಿಡುವ ಕೆಲಸವನ್ನು ಮೈತ್ರಿ ಪಕ್ಷಗಳ ನಾಯಕರು ಮಾಡುತ್ತಿದ್ದಾರೆ. ರಾಣೆಬೆನ್ನೂರಿನ ಶಾಸಕರ ಶಂಕರ್ ರನ್ನು ಕುಮಾರಸ್ವಾಮಿ, ಡಾ.ಪರಮೇಶ್ವರ್, ಸಿದ್ದರಾಮಯ್ಯ ಇತರರು ಓಲೈಸುತ್ತಿದ್ದು ಇದೊಂದು ದೊಡ್ಡ ನಾಟಕವಷ್ಟೇ. ಅತೃಪ್ತರು ಯಾರೂ ಮೈತ್ರಿ ಸರ್ಕಾರದಲ್ಲಿ ಉಳಿಯುವ ಆಸಕ್ತಿ ಹೊಂದಿಲ್ಲ. ಮೈತ್ರಿ ಸರ್ಕಾರ ಇರಬಾರದೆಂದು ನಮ್ಮ ಬಳಿಯೇ ಕಾಂಗ್ರೆಸ್-ಜೆಡಿಎಸ್ ಶಾಸಕರು ಮಾತನಾಡುತ್ತಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News