ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಬಿಜೆಪಿಯನ್ನು ಬೆಂಬಲಿಸಿ: ಸಂಸದ ಜಿ.ಎಂ.ಸಿದ್ದೇಶ್ವರ ಮನವಿ

Update: 2019-06-02 17:15 GMT

ದಾವಣಗೆರೆ: ಅಭಿವೃದ್ಧಿಯಲ್ಲಿ ಸ್ಥಳೀಯ ಸಂಸ್ಥೆಗಳ ಪಾತ್ರ ಹೆಚ್ಚಿದ್ದು, ಲೋಕಸಭಾ ಚುನಾವಣೆಯಲ್ಲಿ ಬೆಂಬಲ ನೀಡಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಬಿಜೆಪಿಯನ್ನು ಬೆಂಬಲಿಸಬೇಕೆಂದು ಸಂಸದ ಜಿ.ಎಂ.ಸಿದ್ದೇಶ್ವರ ಜನತೆಗೆ ಮನವಿ ಮಾಡಿದರು

ರವಿವಾರ ನಗರದ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಕಲ್ಯಾಣಮಂಟಪದಲ್ಲಿ ಲೋಕಸಭಾ ಚುನಾವಣೆ ಗೆಲುವಿಗಾಗಿ ಶ್ರಮಿಸಿದ ಕಾರ್ಯಕರ್ತರು, ಮತದಾರರು ಹಾಗೂ ಅಭಿಮಾನಿ ಬಂಧುಗಳಿಗೆ ಬಿಜೆಪಿ ಜಿಲ್ಲಾ ಘಟಕದಿಂದ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಜಿಲ್ಲೆಯ ಪಾಲಿಕೆ, ನಗರಸಭೆ, ಪುರಸಭೆ, ಪಪಂ ಜಿಪಂ, ತಾಪಂ ಹೀಗೆ ಎಲ್ಲಾ ಕಡೆ ಬಿಜೆಪಿ ಗೆಲುವು ಸಾಧಿಸಿದರೆ ಅಭಿವೃದ್ಧಿಗೆ ವೇಗ ದೊರೆಯಲಿದೆ ಎಂದ ಅವರು, ಕೆಲವೇ ದಿನಗಳಲ್ಲಿ ದಾವಣಗೆರೆ ಪಾಲಿಕೆ ಚುನಾವಣೆಗೆ ದಿನಾಂಕ ಘೋಷಣೆಯಾಗಲಿದೆ. ಪಾಲಿಕೆಯಲ್ಲಿ ಬಿಜೆಪಿ ಅಧಿಕಾರ ಹಿಡಿದರೆ ಅಭಿವೃದ್ಧಿ ಕಾಮಗಾರಿಗಳಿಗೆ ವೇಗ ಸಿಗಲಿದೆ. ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಳಲ್ಲಿ ಕೆಲ ಗೊಂದಲ, ಲೋಪ-ದೋಷವಿರುವುದರಿಂದ ತೊಂದರೆಯಾಗುತ್ತಿದೆ. ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಸ್ಮಾರ್ಟ್ ಸಿಟಿ ಕೆಲಸಗಳನ್ನೂ ಚುರುಕುಗೊಳಿಸಲಾಗುವುದು ಎಂದರು.

ಸ್ಮಾರ್ಟ್ ಸಿಟಿ ಸಮಿತಿಯಲ್ಲಿ ಪಾಲಿಕೆ ಮೇಯರ್, ಆಯುಕ್ತರು, ಚುನಾಯಿತ ಪ್ರತಿನಿಧಿಗಳು, ಸ್ಥಳೀಯರು, ನಿರ್ದೇಶಕರು, ವ್ಯವಸ್ಥಾಪಕ ನಿರ್ದೇಶಕರು ಮಾತ್ರ ಸದಸ್ಯತ್ವ ಹೊಂದಿದ್ದಾರೆ. ಸ್ಮಾರ್ಟ್ ಸಿಟಿ ಸಭೆಗಳಿಗೆ ಶಾಸಕರು, ಸಂಸದರು ಹೋಗಬಹುದಾದರೂ ಕಮಿಟಿಯಲ್ಲಿ ಸ್ಥಾನವಿರುವುದಿಲ್ಲ. ಆದ್ದರಿಂದ ಸ್ಮಾರ್ಟ್ ಸಿಟಿ ಅಧಿಕಾರಿಗಳು ನಮ್ಮ ಮಾತು ಕೇಳುತ್ತಿಲ್ಲ. ಇದರಿಂದಾಗಿ ಸ್ಮಾರ್ಟ್ ಸಿಟಿಯೋಜನೆಯಡಿ ಅಭಿವೃದ್ಧಿ ಕೆಲಸಗಳು ನಿಧಾನಗತಿಯಲ್ಲಿ ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ ಎಂದ ಅವರು, ಜಿಲ್ಲೆಯಲ್ಲೆಡೆ ಕುಡಿಯುವ ನೀರಿನ ಹಾಹಾಕಾರವಿದೆ. ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆಗೆ ಕೆಲವೇ ದಿನಗಳಲ್ಲಿ ಚಾಲನೆ ದೊರೆಯಲಿದೆ. ಹರಿಹರದಲ್ಲಿ ಸಮಗ್ರ ಕುಡಿಯುವ ನೀರಿನ ಯೋಜನೆಗಾಗಿ ಕೊಂಡಜ್ಜಿ ಕೆರೆ ತುಂಬಿಸುವುದು, ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಶುದ್ಧ ಕುಡಿಯುವ ನೀರು ಪೂರೈಕೆಗೆ ಹೆಚ್ಚಿನ ಒತ್ತು ನೀಡಬೇಕಿದ್ದು, ಇದಕ್ಕೆ ಸ್ಥಳೀಯ ಶಾಸಕರು ಸಹಕಾರ ಕೊಡಬೇಕು. ಇನ್ನುಳಿದಂತೆ, ಆನಗೋಡು ಸಮೀಪದ ಇಂದಿರಾ ಪ್ರಿಯದರ್ಶಿನಿ ಪ್ರಾಣಿ ಸಂಗ್ರಾಲಯಕ್ಕೆ 10 ಕೋಟಿ ರೂ. ಹಣ ಬಿಡುಗಡೆಗೊಳಿಸಲು ಪ್ರಯತ್ನ ನಡೆದಿದೆ ಎಂದರು.

ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ಕಾರ್ಯಕರ್ತರ ಶ್ರಮದಿಂದ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಜಿ.ಎಂ.ಸಿದ್ದೇಶ್ವರ್ ಅತ್ಯಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ರಾಜ್ಯದಲ್ಲೂ ಬಿಜೆಪಿಗೆ ಅಧಿಕ ಸ್ಥಾನಗಳು ಸಿಕ್ಕಿವೆ. ಕೇಂದ್ರ ಸಂಪುಟದಲ್ಲಿ ಕರ್ನಾಟಕಕ್ಕೆ ಇನ್ನಷ್ಟು ಸಚಿವ ಸ್ಥಾನ ಸಿಗಬೇಕಿದ್ದು, ಸಿದ್ದೇಶ್ವರ್ ಗೆ ಕೂಡ ಸಚಿವ ಸ್ಥಾನ ನೀಡಬೇಕೆಂದರು. ಕಾರ್ಯಕ್ರಮದಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ್ ದಂಪತಿಯನ್ನು ಸನ್ಮಾನಿಸಲಾಯಿತು.

ಶಾಸಕರಾದ ಎಸ್.ಎ.ರವೀಂದ್ರನಾಥ, ಪ್ರೊ.ಎನ್.ಲಿಂಗಣ್ಣ, ಮಾಡಾಳ್ ವಿರುಪಾಕ್ಷಪ್ಪ, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ.ಎ.ಹೆಚ್. ಶಿವಯೋಗಿಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್, ಮಾಜಿ ಶಾಸಕ ಎಂ.ಬಸವರಾಜ ನಾಯ್ಕ, ಮುಖಂಡರಾದ ಕೊಂಡಜ್ಜಿ ಜಯಪ್ರಕಾಶ್,ರಾಜನಹಳ್ಳಿ ಶಿವಕುಮಾರ್, ಬಿ.ರಮೇಶ ನಾಯ್ಕ, ಹೆಚ್.ಎನ್. ಶಿವಕುಮಾರ್,ಮುಕುಂದಪ್ಪ, ಅಣಬೇರು ಜೀವನಮೂರ್ತಿ, ಧನಂಜಯ್ ಕಡ್ಲೇಬಾಳ್, ಲೋಕಿಕೆರೆ ನಾಗರಾಜ, ಪ್ರಭು ಕಲಬುರ್ಗಿ, ಹೆಚ್.ಆನಂದಪ್ಪ, ಕೆ.ಹೇಮಂತ ಕುಮಾರ, ಡಾ.ಮಂಜುನಾಥ ಗೌಡ್ರು, ಮೆಳ್ಳೆಕಟ್ಟೆ ನಾಗರಾಜ್, ಟಿ.ಗುರುಸಿದ್ಧನಗೌಡ, ಎಲ್.ಡಿ.ಗೋಣೆಪ್ಪ, ಟಿಪ್ಪು ಸುಲ್ತಾನ್, ಸೊಕ್ಕೆ ನಾಗರಾಜ್, ಗಾಯತ್ರಿ ಸಿದ್ದೇಶ್, ಹೆಚ್.ಸಿ.ಜಯಮ್ಮ, ಶೈಲಜಾ ಬಸವರಾಜ್, ಮಮತಾ ಮಲ್ಲೇಶಪ್ಪ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News