ಉದ್ಘಾಟನೆಗೆ ಸಿದ್ಧಗೊಂಡಿದೆ ಕೊಡಗು ಜಿ.ಪಂ. ಕಚೇರಿ ಸಂಕೀರ್ಣ: 26 ಕೋಟಿ ರೂ. ವೆಚ್ಚದ ಕಟ್ಟಡಕ್ಕೆ ಅಂತಿಮ ಸ್ಪರ್ಷ
ಮಡಿಕೇರಿ ಜೂ.2 : ನಗರದ ಹೊರ ವಲಯದ ಕರ್ಣಂಗೇರಿ ಕೆ. ಬಾಡಗದಲ್ಲಿ 1.60 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಳ್ಳುತ್ತಿರುವ ಕೊಡಗು ಜಿಲ್ಲಾ ಪಂಚಾಯತ್ ನ ನೂತನ ಭವನದ ಕಾಮಗಾರಿ ಅಂತಿಮ ಹಂತದಲ್ಲಿದೆ. ಸುಮಾರು 26 ಕೋಟಿ ರೂ. ವೆಚ್ಚದ ಕಟ್ಟಡ ಸಧ್ಯದಲ್ಲಿಯೇ ಉದ್ಘಾಟನೆಗೊಳ್ಳಲಿದೆ.
ಕಳೆದ ಅನೇಕ ವರ್ಷಗಳಿಂದ ಕೋಟೆ ಆವರಣದಲ್ಲಿ ಹಾಗೂ ವಿವಿಧ ಖಾಸಗಿ ಕಟ್ಟಡಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಜಿಲ್ಲಾ ಪಂಚಾಯತ್ ನ ಸುಮಾರು 29 ಇಲಾಖಾ ಕಚೇರಿಗಳು ನಗರದಿಂದ ಅಂದಾಜು 5 ಕಿ.ಮೀ. ದೂರದಲ್ಲಿ ನಿರ್ಮಾಣಗೊಳ್ಳುತ್ತಿರುವ ಜಿಲ್ಲಾ ಪಂಚಾಯತ್ ಭವನಕ್ಕೆ ಇದೇ ವರ್ಷ ಸ್ಥಳಾಂತರಗೊಳ್ಳಲಿದೆ.
ಕರ್ನಾಟಕ ಗೃಹ ಮಂಡಳಿ ಮೂಲಕ ಬೆಂಗಳೂರಿನ ಗಾದಿ ರಾಜು ಕನ್‍ಸ್ಟ್ರಕ್ಷನ್ ಪ್ರೈವೆಟ್ ಲಿಮಿಟೆಡ್ ಕಾಮಗಾರಿಯ ಗುತ್ತಿಗೆಯನ್ನು ಪಡೆದು ನಿರ್ಮಾಣ ಕಾರ್ಯವನ್ನು ಅಂತಿಮಗೊಳಿಸಿದೆ. ಉಡುಪಿಯ ಎ.ಜಿ. ಅಸೋಸಿಯೇಟ್ಸ್ ಕಟ್ಟಡ ವಿನ್ಯಾಸ ಮಾಡಿದ್ದು, ಜಿಲ್ಲಾಡಳಿತದ ಭವನ ಮಾದರಿಯಲ್ಲೇ ಬೃಹತ್ ಕಟ್ಟಡ ನಿರ್ಮಾಣಗೊಂಡಿದೆ. ನೂತನ ಭವನದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು, ಉಪ ಕಾರ್ಯದರ್ಶಿಗಳು, ಸ್ಥಾಯಿ ಸಮಿತಿ ಅಧ್ಯಕ್ಷರುಗಳ ಕಚೇರಿ ಸೇರಿದಂತೆ ಜಿ.ಪಂ ಸಭಾಂಗಣ ಹಾಗೂ ವಿವಿಧ ಇಂಜಿನಿಯರಿಂಗ್ ಇಲಾಖೆಗಳು, ಯೋಜನಾ ಇಲಾಖೆ, ಕೃಷಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ರೇಷ್ಮೆ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆಹಾರ ಇಲಾಖೆ ಸೇರಿದಂತೆ 29 ಇಲಾಖೆಗಳ ಕಚೇರಿಗಳು ಕಾರ್ಯ ನಿರ್ವಹಿಸಲಿವೆ.
ನೆಲ ಅಂತಸ್ತು ಸೇರಿದಂತೆ ವಾಹನಗಳ ನಿಲುಗಡೆ, ರಸ್ತೆ ಸಂಪರ್ಕ, ತಡೆಗೋಡೆ, ಮಹಾದ್ವಾರ ಸಹಿತ ವಿಶಾಲ ಆವರಣವನ್ನು ಕಟ್ಟಡ ಹೊಂದಿದೆ. ವಿದ್ಯುತ್, ನೀರು, ಸುಸಜ್ಜಿತ ಶೌಚಾಲಯದ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಕಚೇರಿ ದಾಖಲಾತಿಗಳ ನಿರ್ವಹಣಾ ಕೊಠಡಿ, ಭದ್ರತಾ ಕೊಠಡಿ ಕೂಡ ಇದೆ. ಜಿಲ್ಲೆಯ ಜನಪ್ರತಿನಿಧಿಗಳೊಂದಿಗೆ ಅಧಿಕಾರಿಗಳ ಸಭೆ ನಡೆಸಲು 170 ರಿಂದ 200 ಮಂದಿ ಆಸೀನರಾಗಬಹುದಾದ ಸುಸಜ್ಜಿತ ಸಭಾಂಗಣವನ್ನು ನಿರ್ಮಿಸಲಾಗಿದೆ.
ಈ ಸಭಾಂಗಣದ ಕೆಳ ಅಂತಸ್ತಿನಲ್ಲಿ ಮತ್ತೊಂದು ಮಿನಿ ಸಭಾಂಗಣವನ್ನು ನಿರ್ಮಿಸಲಾಗಿದ್ದು, ಅದರಲ್ಲಿ ಭೋಜನಕ್ಕೆ ಅನುಕೂಲವಾಗುವಂತೆ ವ್ಯವಸ್ಥೆಗಳನ್ನು ಮಾಡಲಾಗಿದೆ. ಕಟ್ಟಡದ ಪ್ರವೇಶ ದ್ವಾರದಿಂದಲೇ ಆಧುನಿಕ ವ್ಯವಸ್ಥೆ ಕಲ್ಪಿಸಿದ್ದು, ಹಿರಿಯರು ಅಥವಾ ಅಸಹಾಯಕರು ಕಚೇರಿ ವ್ಯವಹಾರಗಳಿಗೆ ಬಂದು ಹೋಗಲು ಎರಡು ಪ್ರತ್ಯೇಕ ಲಿಫ್ಟ್‍ಗಳನ್ನು ಅಳವಡಿಸಲಾಗಿದೆ.
ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸೇರಿದಂತೆ ಆಯಾ ಇಲಾಖಾ ಅಧಿಕಾರಿಗಳಿಗೆ ಪ್ರತ್ಯೇಕ ಕಚೇರಿ, ಜಿ.ಪಂ. ಅಧ್ಯಕ್ಷರು, ಉಪಾಧ್ಯಕ್ಷರ ಸಹಿತ ಮೂವರು ಸ್ಥಾಯಿ ಸಮಿತಿ ಅಧ್ಯಕ್ಷರುಗಳ ಕೊಠಡಿ ಮತ್ತು ಸಿಬ್ಬಂದಿಗೆ ಪ್ರತ್ಯೇಕ ಕೊಠಡಿಯ ವ್ಯವಸ್ಥೆ ಹಾಗೂ ಸಂದರ್ಶಕರಿಗಾಗಿ ಪ್ರತ್ಯೇಕ ಆಸನದ ವ್ಯವಸ್ಥೆಯನ್ನು ಮಾಡಲಾಗಿದೆ. ಅಲ್ಲದೇ, ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರು, ಇಬ್ಬರು ಮೇಲ್ಮನೆ ಸದಸ್ಯರುಗಳಿಗೆ ಪ್ರತ್ಯೇಕ ಕೊಠಡಿಯೊಂದಿಗೆ ಸಿಬ್ಬಂದಿ ಕೊಠಡಿಯೂ ಇದೆ.
ಇತ್ತೀಚೆಗೆ ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಅವರು ಅಂತಿಮ ಹಂತದಲ್ಲಿರುವ ನೂತನ ಜಿ.ಪಂ ಭವನದ ಕಾಮಗಾರಿಯನ್ನು ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ನೂತನ ಕಟ್ಟಡದ ಕಾಮಗಾರಿ ಶೀಘ್ರ ಪೂರ್ಣಗೊಳ್ಳಲು ಹೆಚ್ಚಿನ ಆಸಕ್ತಿ ವಹಿಸಿದ್ದ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಲಕ್ಷ್ಮೀಪ್ರಿಯ ಅವರು ಭವನ ಶೀಘ್ರ ಲೋಕಾರ್ಪಣೆಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ಪ್ರಸ್ತುತ ಜಿಲ್ಲಾ ಪಂಚಾಯತ್ ಗೆ ಸಂಬಂಧಿಸಿದ ವಿವಿಧ ಕಚೇರಿಗಳು ನಗರದ ವಿವಿಧೆಡೆ ಚದುರಿದ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಇದರಿಂದ ಸಾರ್ವಜನಿಕರ ಕೆಲಸ ಕಾರ್ಯಗಳು ವಿಳಂಬವಾಗುತ್ತಿತ್ತು. ಆದರೆ, ನೂತನ ಭವನದಲ್ಲಿ ಎಲ್ಲಾ ಕಚೇರಿಗಳು ಒಂದೆಡೆ ಕಾರ್ಯ ನಿರ್ವಹಿಸುವುದರಿಂದ ಗ್ರಾಮೀಣ ಜನರಿಗೆ ಹೆಚ್ಚಿನ ರೀತಿಯಲ್ಲಿ ಅನುಕೂಲವಾಗಲಿದೆ. ಆದರೆ, 5 ಕಿ.ಮೀ. ದೂರದಲ್ಲಿ ಜಿಲ್ಲಾ ಪಂಚಾಯತ್ ಭವನ ನಿರ್ಮಾಣಗೊಂಡಿರುವುದರಿಂದ ಇಲ್ಲಿಗೆ ಆಗಮಿಸಲು ಗ್ರಾಮಸ್ಥರು ದುಬಾರಿ ಪ್ರಯಾಣ ವೆಚ್ಚವನ್ನು ಭರಿಸಬೇಕಾಗುತ್ತದೆ ಎನ್ನುವುದಷ್ಟೇ ಕೊರತೆ.
ನಗರ ವ್ಯಾಪ್ತಿಯ ವಿಸ್ತರಣೆಯ ದೃಷ್ಟಿಯಿಂದ ಮತ್ತು ನಗರದ ಬೆಳವಣಿಗೆಯ ಹಿನ್ನೆಲೆಯಲ್ಲಿ ಜಿ.ಪಂ ಭವನ ನಗರದ ಹೊರ ಭಾಗದಲ್ಲಿ ನಿರ್ಮಾಣಗೊಳ್ಳುತ್ತಿರುವುದನ್ನು ನಗರದ ಜನತೆ ಸ್ವಾಗತಿಸಿದ್ದಾರೆ.
ಖಾಲಿಯಾಗಲಿದೆ ಕೋಟೆ
ಇಲ್ಲಿಯವರೆಗೆ ಜಿ.ಪಂ ಕಚೇರಿಗಳಿಂದ ಚಟುವಟಿಕೆಯ ಕೇಂದ್ರವಾಗಿದ್ದ ಕೋಟೆ ಆವರಣ ಸಧ್ಯದಲ್ಲಿಯೇ ಖಾಲಿಯಾಗಲಿದೆ. ನೂತನ ನ್ಯಾಯಾಲಯ ಸಂಕೀರ್ಣದ ಕಟ್ಟಡ ಕೂಡ ನಗರದ ಹೊರ ವಲಯದಲ್ಲಿ ಉದ್ಘಾಟನೆಗೆ ಸಿದ್ಧವಾಗಿದ್ದು, ನ್ಯಾಯಾಲಯವೂ ಸ್ಥಳಾಂತರಗೊಂಡರೆ ಕೋಟೆ ಜನ ಸಂಚಾರವಿಲ್ಲದೆ ಸ್ತಬ್ಧವಾಗಲಿದೆ. ಪುರಾತತ್ವ ಇಲಾಖೆ ಕೋಟೆ ಕಟ್ಟಡ ಸಂರಕ್ಷಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳದಿದ್ದಲ್ಲಿ ಸರ್ಕಾರಿ ಕಚೇರಿಗಳಿಲ್ಲದ ಇತಿಹಾಸದ ಕಟ್ಟಡ ಶಿಥಿಲಗೊಳ್ಳುವ ಎಲ್ಲಾ ಸಾಧ್ಯತೆಗಳಿದೆ.