ಮುಳ್ಳೂರು-ಕೋಟಿ ಅಗಲಿಕೆಯಿಂದ ನಾವಿಂದು ರೆಕ್ಕೆ ಮುರಿದ ಹಕ್ಕಿಯಂತಾಗಿದ್ದೇವೆ: ಡಾ.ಬಂಜಗೆರೆ ಜಯಪ್ರಕಾಶ್
ಮೈಸೂರು,ಜೂ.2: ಸಾಹಿತಿ ಮುಳ್ಳೂರು ನಾಗರಾಜ ಮತ್ತು ರಾಜಶೇಖರ ಕೋಟಿ ಅವರ ಅಗಲಿಕೆಯಿಂದ ನಾವಿಂದು ರೆಕ್ಕೆ ಮುರಿದ ಹಕ್ಕಿಯಂತಾಗಿದ್ದೇವೆ ಎಂದು ಸಂಸ್ಕೃತಿ ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್ ಸ್ಮರಿಸಿದರು.
ನಗರದ ಕಲಾಮಂದಿರುದ ಕಿರುರಂಗಮಂದಿರದಲ್ಲಿ ರಂಗವಾಹಿತಿ-ಚಾಮರಾಜನಗರ, ನೆಲೆ-ಹಿನ್ನಲೆ ಹಾಗೂ ರಾಮಮನೋಹರ ಲೋಹಿಯಾ ಟ್ರಸ್ಟ್ ಸಹಯೋಗದಲ್ಲಿ ರವಿವಾರ ಆಯೋಜಿಸಲಾಗಿದ್ದ ಮುಳ್ಳೂರು ನಾಗರಾಜ ರಾಜ್ಯಮಟ್ಟದ 9ನೇ ವರ್ಷದ ಕಾವ್ಯ ಪ್ರಶಸ್ತಿ ಪ್ರಧಾನ ಹಾಗೂ ರಾಜಶೇಖರ ಕೋಟಿ ನೆನಪು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮುಳ್ಳೂರು ಉರಿಯುವ ಕಾಲಘಟ್ಟದ ಕವಿ. ಅವಮಾನ, ಹಸಿವು, ಬಡತನದಲ್ಲಿ ನಿತ್ಯದ ಸಾವು ಅನುಭವಿಸಿದರು. ಅಮಾನವೀಯತೆ ವಿರುದ್ಧ ಸದಾ ಜಾಗೃತರಾಗಿದ್ದರು. ದಲಿತ ಹೋರಾಟ ಅವರ ಉಸಿರಿನ ಭಾಗವಾಗಿತ್ತು. ಆಕ್ರೋಶವನ್ನು ಕಾವ್ಯಮಯವಾಗಿ ಶಾಂತಚಿತ್ತದಿಂದ ಹೇಳಿದರು. ಆದರೆ ಅವರಿಗೆ ಮಾನ್ಯತೆ ಸಿಗಲಿಲ್ಲ. ಯುವ ತಲೆಮಾರು ಮುಳ್ಳೂರರ ಸಾಹಿತ್ಯವನ್ನು ಮತ್ತೆ ಕಟ್ಟಬೇಕಿದೆ ಎಂದು ಹೇಳಿದರು.
ಸಾಹಿತಿ ಮುಳ್ಳೂರು ನಾಗರಾಜ ಮತ್ತು ಪತ್ರಿಕೋದ್ಯಮಿ ರಾಜಶೇಖರ ಕೋಟಿ ಅವರು ನಾವು ಕಳೆದುಕೊಂಡ ಗತಕಾಲದ ತಾರೆಗಳು, “ಆಂದೋಲನ” ದಿನಪತ್ರಿಕೆ ನಮ್ಮ ಚಳವಳಿಗಳಿಗೆ ಪ್ರಧಾನ ವೇದಿಕೆಯಾಗಿತ್ತು. ಕೋಟಿ ಅವರು ಪತ್ರಿಕೋದ್ಯಮದಲ್ಲಿ ಬದ್ಧತೆ ಮರೆದರು. ಆವರ ಆಶಯವನ್ನು ಸಮಾಜವಾದಿ ಹಿನ್ನೆಲೆಯಲ್ಲಿ ಗ್ರಹಿಸುತ್ತಿದ್ದ ಅವರಲ್ಲಿ ಮೌಲ್ಯ ಪ್ರಜ್ಞೆಯಿತ್ತು. ಅವರು ಹೋರಾಟಗಾರ ಪತ್ರಿಕೋದ್ಯಮಿಯಾಗಿದ್ದರು. ಆದ್ದರಿಂದ ದೇಶದಲ್ಲಿ ಉದ್ಯಮಿ ಪತ್ರಿಕೋದ್ಯಮಿಗಳು ಹೆಚ್ಚಿದ್ದಾರೆ. ಲಾಭಕ್ಕಾಗಿ ವಿಧ್ವಂಸಕಾರಿ, ಅಡ್ಡ ಪರಿಣಾಮ ಬೀರುವ ಸುದ್ದಿಗಳನ್ನು ವಿದ್ಯುನ್ಮಾನ ಮಾಧ್ಯಮ ಹೆಚ್ಚು ಪ್ರಚುರಪಡಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಅಬ್ಬರದ ಭಾಷಣಗಳು ಮೌಲ್ಯ ತೀರ್ಮಾನ ಮಾಡುತ್ತಿವೆ. ದೇಶದ ಜನರ ಹೊಟ್ಟೆಪಾಡಿನ ಪ್ರಶ್ನೆಗಿಂತ, ಅವರನ್ನು ಕಂಟಕಕ್ಕೆ ಸಿಕ್ಕಿಸಬಹುದಾದ ಧ್ವನಿಗಳೇ ಹೆಚ್ಚಾಗಿವೆ. ಶೂನ್ಯವಾದ ದೇಶಾಭಿಮಾನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿಪಾದನೆಯಾಗುತ್ತಿದೆ. ದೇಶ ಭಾಷೆಗಳ ಪರಿಸ್ಥಿತಿ ದುಸ್ತರವಾಗಿದೆ. ಎರಡೂವರೆ ಸಾವಿರ ವರ್ಷಗಲ ಇತಿಹಾಸವಿರುವ ಕನ್ನಡ ಭಾಷೆ, ವ್ಯಾಪಾರಿ ಭಾಷೆ ಇಂಗ್ಲೀಷ್ ಎದುರು ಮಂಡಿಯೂರಿ ಕೂತಿದೆ. ಕನ್ನಡ ಕಲಿಯುವ ಮಕ್ಕಳಿಲ್ಲದಿದ್ದಾಗ ಕನ್ನಡ ಕವಿಗಳನ್ನು ಓದುವುದು ಹೇಗೆ? ಭವಿಷ್ಯದಲ್ಲಿ ನರ್ಸರಿ ರೈಮ್ಸ್‍ಗಳೇ ವಿಶ್ವದ ಶ್ರೇಷ್ಠ ಕಾವ್ಯಗಳಾಗಬಹುದು ಎಂದರು.
ರಾಜಕಾರಣ ಮೌಲ್ಯ ಕಳೆದುಕೊಂಡು ಅಕ್ರಮ ಹಣ ಸಂಪಾದಿತರ ಆಡಂಬರ ಆಗಿದೆ. ಆವರನ್ನು ವಿಂಗಡಿಸಿ ಗೋಡೆ ಕಟ್ಟುವವರಿಂದು ಮಹಾನೇತಾರರು. “ಗಾಂಧೀಜಿ ಇಂದು ರಾಷ್ಟ್ರಪಿತರಲ್ಲ. ಐದು ಸಾವಿರ ವರ್ಷಕ್ಕೂ ಮುನ್ನ ಇದ್ದ ಭರತಖಂಡಕ್ಕೆ ವೇದವ್ಯಾಸರೇ ರಾಷ್ಟ್ರಪಿತ” ಎಂದು ಸ್ವಾಮೀಜಿಯೊಬ್ಬರು ಹೇಳಿದ್ದಾರೆ. ಶೂದ್ರಕುಲದಿಂದ ಬಂದ ವ್ಯಾಸರು ಮಹಾಕವಿಗಳು ನಿಜ. ಅವರು ಕಾವ್ಯ ಸಂಸ್ಕೃತಿ, ಪರಂಪರೆ ಪಿತ ಎಂದು ಹೇಳಿದ್ದರೆ ಸಮಂಜಸವಾಗುತ್ತಿತ್ತು. ಆದರೂ, ಜನ ಸ್ವಾಮೀಜಿ ಮಾತನ್ನು ಒಪ್ಪಿದ್ದಾರೆ. ಎಲ್ಲಾ ಅಸಹ್ಯಗಳು ಇಂದು ಸಹ್ಯವಾಗಿವೆ ಎಂದು ವಿಷಾದಿಸಿದರು.
ಮಹಿಳಾ ಪೊಲೀಸ್ ತರಬೇತಿ ಶಾಲೆಯ ಪ್ರಾಂಶುಪಾಲರಾದ ಡಾ.ಧರಣಿದೇವಿ ಮಾಲಗತ್ತಿ ಮಾತನಾಡಿ, ನಂಜನ್ನು ನುಂಗುವ ನಂಜುಂಡರು ಸೃಷ್ಟಿಯಾಗಬೇಕಿದೆ. ನಂಜಿಲ್ಲದ ಪ್ರಪಂಚ, ದೇಶ, ಬದುಕು, ಸಮಾಜ ಎಲ್ಲರ ಕನಸು. ಆ ಕನಸು ಗಗನ ಕುಸುಮದಂತೆ. ಸಮಾಜದಲ್ಲಿ ಸೃಷ್ಟಿಯಾಗುವ ನಂಜನ್ನು ಒಮ್ಮೆಲೆ ನುಂಗದೇ, ಇಷ್ಟಿಷ್ಟೇ ಪ್ರಮಾಣದಲ್ಲಿ ಔಷಧಿಯಂತೆ ತೆಗೆದುಕೊಂಡು ಸಾಮಾಜಿಕ ಪರಿವರ್ತನೆ ಮಾಡಬೇಕು ಎಂದು ಹೇಳಿದರು.
“ಮುಳ್ಳೂರು ಮತ್ತು ಕೋಟಿ” ಕುರಿತು ನೆನಪಿನ ನುಡಿಗಳನ್ನಾಡಿದ ಮೈಸೂರು ವಿಶ್ವವಿದ್ಯಾನಿಲಯ ವ್ಯವಹಾರ ನಿರ್ವಹಣ ಅಧ್ಯಯನ ವಿಭಾಗದ ಪ್ರೊ.ಡಿ.ಆನಂದ್, ಮುಳ್ಲೂರು-ಕೋಟಿ ಅವರು ತಮ್ಮ ಬಗ್ಗೆ ಅಂದುಕೊಂಡಂತೆ ಬದುಕಿ ಸಾಧಿಸಿದರು ಎಂದು ನೆನಪು ಮಾಡಿಕೊಂಡರು.
ಕಾರ್ಯಕ್ರಮದಲ್ಲಿ ರಂಗವಾಹಿನಿ ಅಧ್ಯಕ್ಷ ಸಿ.ಎಂ.ನರಸಿಂಹಮೂರ್ತಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪತ್ರಕರ್ತ ಮುಳ್ಳೂರು ರಾಜು ನಿರೂಪಿಸಿದರು. ಪ್ರೊ.ಹಿ.ಶಿ.ರಾಮಚಂದ್ರೇಗೌಡ, ಸಾಹಿತಿ ಚ.ಸರ್ವಮಂಗಳಾ, ಪ್ರೊ.ಪಂಡಿತಾರಾಧ್ಯ, ಲೇಖಕರಾದ ಬನ್ನೂರು ಕೆ.ರಾಜು, ಲಕ್ಷ್ಮಣ ಹೊಸಕೋಟೆ, ಪತ್ರಕರ್ತರಾದ ಅಂಶಿ ಪ್ರಸನ್ನಕುಮಾರ್, ಪಿ.ಓಂಕಾರ್, ಕೆ.ದೀಪಕ್, “ಆಂದೋಲನ” ದಿನಪತ್ರಿಕೆ ಸಂಪಾದಕ ರವಿ ಕೋಟಿ, ಪ್ರಶಸ್ತಿ ಪುರಸ್ಕೃತ ಕವಿ ಎನ್.ರವಿಕುಮಾರ್ ಟೆಲೆಕ್ಸ್ ಅವರ ಪತ್ನಿ ಶಶಿಕಲಾ, ಸೋದರಿ ಸೌಭಾಗ್ಯ, ಪುತ್ರರಾದ ವರುಣ್, ಆಕಾಶ್, ಸಿ.ಹರಕುಮಾರ್, ಜಿಲ್ಲಾ ಪಂಚಾಯತ್ ಸದಸ್ಯೆ ಪುಷ್ಪಾ ನಾಗೇಶ್‍ರಾಜ್, ನಂಜನಗೂಡು ತಾ.ಪಂ. ಮಾಜಿ ಅಧ್ಯಕ್ಷ ಬಿ.ಎಂ.ನಾಗೇಶ್ ರಾಜ್, ಕೃಷ್ಣ ದೇವನೂರು, ಜನಾರ್ಧನ್ ಜನ್ನಿ, ಕೆ.ಆರ್.ಗೋಪಾಕೃಷ್ಣ, ಮುಳ್ಳೂರು ಕೃಷ್ಣ, ಎಸ್.ಮಹದೇವಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.