ರಾಮನಹಳ್ಳಿ ಪೊಲೀಸ್ ತರಬೇತಿ ಕೇಂದ್ರದಲ್ಲಿ ಯುವತಿ ಆತ್ಮಹತ್ಯೆ

Update: 2019-06-02 17:45 GMT

ಚಿಕ್ಕಮಗಳೂರು, ಜೂ.2: ನಗರದ ರಾಮನಹಳ್ಳಿ ಪೊಲೀಸ್ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿದ್ದ ಯುವತಿಯೊಬ್ಬಳು ಕೇಂದ್ರದ ಅಡುಗೆ ಕೋಣೆಯಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ರವಿವಾರ ನಗರದಲ್ಲಿ ವರದಿಯಾಗಿದೆ.

ತರಬೇತಿ ಕೇಂದ್ರದಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವ ಯುವತಿಯನ್ನು ಕವಿತಾ (26) ಎಂದು ಗುರುತಿಸಲಾಗಿದ್ದು, ಈಕೆ ಮೂಲತಃ ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ತಳಕಲ್ ಗ್ರಾಮದವಳೆಂದು ತಿಳಿದು ಬಂದಿದೆ.

ಇತ್ತೀಚೆಗೆ ಕವಿತಾ ಅವರು ಬೆಂಗಳೂರಿನಲ್ಲಿ ಪೊಲೀಸ್ ಇಲಾಖೆಯ ಹುದ್ದೆಗೆ ನೇಮಕಗೊಂಡಿದ್ದು, ಚಿಕ್ಕಮಗಳೂರು ನಗರದ ರಾಮನಹಳ್ಳಿ ಪೊಲೀಸ್ ತರಬೇತಿ ಕೇಂದ್ರದಲ್ಲಿ 9 ತಿಂಗಳಿಂದ ಪೊಲೀಸ್ ತರಬೇತಿ ಪಡೆಯುತ್ತಿದ್ದರೆಂದು ತಿಳಿದು ಬಂದಿದೆ. ತರಬೇತಿಗೆ ಬಂದಾಗಿನಿಂದಲೂ ನನಗೆ ಹೆದರಿಕೆಯಾಗುತ್ತಿದೆ. ಕೆಲಸ ಮಾಡಲು ಸಾಧ್ಯವಾಗುತ್ತದೆಯೋ, ಇಲ್ಲವೋ, ಏನಾದರೂ ಮಾಡಿಕೊಳ್ಳಬೇಕು ಎನಿಸುತ್ತದೆ ಎಂದು ಹೇಳುತ್ತಿದ್ದಳು. ಮಾನಸಿಕ ಖಿನ್ನತೆಗೊಳಗಾಗಿ ಕವಿತಾ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಆಕೆಯ ಸ್ನೇಹಿತೆಯರು ತಿಳಿಸಿದ್ದಾರೆಂದು ಪೊಲೀಸ್ ಇಲಾಖೆ ಮೂಲಗಳು ತಿಳಿಸಿವೆ.

ತರಬೇತಿ ಸಂದರ್ಭದಲ್ಲಿ ನಡೆಸುವ ಅರ್ಧವಾರ್ಷಿಕ ಪರೀಕ್ಷೆಯಲ್ಲಿ ಆಕೆ ಅನುರ್ತೀಣಳಾಗಿದ್ದು, ಈ ಫಲಿತಾಂಶದಿಂದ ನೊಂದಿದ್ದ ಕವಿತಾ ಯಾರೊಂದಿಗೂ ಹೆಚ್ಚಾಗಿ ಮಾತನಾಡುತ್ತಿರಲ್ಲಿಲ್ಲ, ಇದನ್ನು ಗಮನಿಸಿದ್ದ ಪೊಲೀಸರು ಆಗಾಗ್ಗೆ ಆಕೆಗೆ ಧೈರ್ಯ ತುಂಬಿದ್ದರು. ಆದರೂ ಯಾವುದೇ ಪ್ರಯೋಜನವಾಗಿರಲಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿದ್ದು, ಶನಿವಾರ ಕವಿತಾ ಹಾಗೂ ಕೆಲವು ತರಬೇತಿಗೆ ಬಂದಿದ್ದ ಯುವತಿಯರ ಹುಟ್ಟುಹಬ್ಬವಿತ್ತು. ರಾತ್ರಿ 12 ಗಂಟೆವರೆಗೂ ಹುಟ್ಟುಹಬ್ಬ ಆಚರಿಸಿದ್ದು, ಈ ವೇಳೆ ಆಕೆಯೂ ಪಾಲ್ಗೊಂಡಿದ್ದಳು. ಆ ನಂತರ ಎಲ್ಲರೂ ಮಲಗಿದ್ದು, ಬೆಳಗ್ಗೆ  ಎದ್ದು ನೋಡಿದಾಗ ಕವಿತಾ ತರಬೇತಿ ಕೇಂದ್ರದ ಅಡುಗೆ ಕೋಣೆಯಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಕಂಡಿದೆ ಎಂದು ಕವಿತಾ ಸ್ನೇಹಿತೆಯರು ಪೊಲೀಸರಿಗೆ ತಿಳಿಸಿದ್ದಾರೆಂದು ತಿಳಿದು ಬಂದಿದೆ. 

ತರಬೇತಿಯು ಜೂ.7ರಂದು ಪೂರ್ಣಗೊಳ್ಳಲಿದ್ದು ಆ ನಂತರ ಕವಿತಾ ಬೆಂಗಳೂರಿಗೆ ತೆರಳಿ ಕರ್ತವ್ಯಕ್ಕೆ ಹಾಜರಾಗಬೇಕಿತ್ತು. ಈ ಸಂಬಂಧ ಬಸವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಾಸಕ ಸಿ.ಟಿ.ರವಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರೀಶ್ ಪಾಂಡೆ ತರಬೇತಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿ, ತರಬೇತಿದಾರರು ಹಾಗೂ ಆಕೆಯ ಸ್ನೇಹಿತರಿಂದ ಮಾಹಿತಿ ಕಲೆ ಹಾಕಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News