×
Ad

ತಾಕತ್ತಿದ್ದರೆ ಕಾಂಗ್ರೆಸ್ ಸಂಪರ್ಕದಲ್ಲಿರುವ ಬಿಜೆಪಿ ಶಾಸಕರ ಹೆಸರು ಬಹಿರಂಗಪಡಿಸಿ: ಬಿ.ಶ್ರೀರಾಮುಲು ಸವಾಲು

Update: 2019-06-03 18:37 IST

ಬಳ್ಳಾರಿ, ಜೂ. 3: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ಅಸ್ಥಿರಕ್ಕೆ ಯಾವುದೇ ಕಾರಣಕ್ಕೂ ಪ್ರಯತ್ನಿಸಬಾರದು ಎಂದು ರಾಷ್ಟ್ರೀಯಾಧ್ಯಕ್ಷ ಅಮಿತ್ ಶಾ ಸೂಚನೆ ನೀಡಿದ್ದು, ಹೀಗಾಗಿ ಆ ಬಗ್ಗೆ ನಾವು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಬಿಜೆಪಿ ಉಪಾಧ್ಯಕ್ಷ ಬಿ.ಶ್ರೀರಾಮುಲು ಸ್ಪಷ್ಟಪಡಿಸಿದ್ದಾರೆ.

ಸೋಮವಾರ ಬಳ್ಳಾರಿ ಸಂಸದ ದೇವೇಂದ್ರಪ್ಪ ಅವರ ಕಚೇರಿ ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಕೆಲ ಮುಖಂಡರು ಬಿಜೆಪಿ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆಂದು ಹೇಳುತ್ತಿದ್ದು, ತಾಕತ್ತಿದ್ದರೆ ಅವರ ಹೆಸರು ಬಹಿರಂಗಪಡಿಸಲು ಎಂದು ಸವಾಲು ಹಾಕಿದರು.

ಬಿಜೆಪಿ 105 ಮಂದಿ ಶಾಸಕರ ಪೈಕಿ ಒಬ್ಬೇ ಒಬ್ಬ ಶಾಸಕನೂ ಕೂಡ ಪಕ್ಷ ಬಿಡುವುದಿಲ್ಲ. ನಾವೆಲ್ಲರೂ ಒಗ್ಗಟ್ಟಿನಿಂದ ಇದ್ದೇವೆ ಎಂದ ಅವರು, ಮೈತ್ರಿ ಸರಕಾರ ಅಸ್ಥಿರಕ್ಕೆ ನಾವು ಯಾವುದೇ ಪ್ರಯತ್ನ ಮಾಡುವುದಿಲ್ಲ. ಬದಲಿಗೆ ಅವರ ಕಚ್ಚಾಟದಿಂದ ಸರಕಾರ ಉರುಳಲಿದೆ ಎಂದರು.

ಮುಖ್ಯಮಂತ್ರಿ ಕುಮಾರಸ್ವಾಮಿ ಗ್ರಾಮ ವ್ಯಾಸ್ತವ್ಯ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ. ಗ್ರಾಮ ವ್ಯಾಸ್ತವ್ಯದೊಂದಿಗೆ ಕುಮಾರಸ್ವಾಮಿ ಅವರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಬಿ.ಶ್ರೀರಾಮುಲು ಇದೇ ಸಂದರ್ಭದಲ್ಲಿ ಮನವಿ ಮಾಡಿದರು.

‘ಬಳ್ಳಾರಿ ಜಿಲ್ಲೆಯ ಸಮಗ್ರ ಅಭಿವೃದ್ಧಿಯೇ ನಮ್ಮ ಮುಖ್ಯಗುರಿಯಾಗಿದ್ದು, ಕ್ಷೇತ್ರದಲ್ಲಿ ನೆನೆಗುದಿಗೆ ಬಿದ್ದ ಕಾಮಗಾರಿಗಳಿಗೆ ಚಾಲನೆ ನೀಡುತ್ತೇವೆ. ಅಲ್ಲದೆ, ರಾಜ್ಯ ಸರಕಾರದ ಜತೆ ಸಮಾಲೋಚನೆ ನಡೆಸಿ ಜಿಲ್ಲೆಯ ಅಭಿವೃದ್ಧಿ ಕಾರ್ಯಕ್ಕೆ ಅಗತ್ಯ ಸಹಕಾರ ನೀಡುತ್ತೇವೆ’

-ದೇವೇಂದ್ರಪ್ಪ, ನೂತನ ಸಂಸದ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News