7 ಸ್ಥಳೀಯ ಸಂಸ್ಥೆಗಳ ಫಲಿತಾಂಶ: ಮತ್ತೊಮ್ಮೆ ಕಾಂಗ್ರೆಸ್ ಮೇಲುಗೈ
ಬೆಂಗಳೂರು, ಜೂ.3: ರಾಜ್ಯದ ಶಿವಮೊಗ್ಗ ಜಿಲ್ಲೆ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ 7 ನಗರ ಸ್ಥಳೀಯ ಸಂಸ್ಥೆಗಳ 140 ವಾರ್ಡ್‌ಗಳ ಮತ ಎಣಿಕೆ ಪೂರ್ಣಗೊಂಡಿದ್ದು, ಇದರಲ್ಲಿಯೂ ಕಾಂಗ್ರೆಸ್ ಮೇಲುಗೈ ಸಾಧಿಸಿದ್ದು, ಬಿಜೆಪಿ ಮತ್ತು ಜೆಡಿಎಸ್‌ಗೆ ಹಿನ್ನೆಡೆಯಾಗಿದೆ.
ಎರಡು ಜಿಲ್ಲೆಗಳ 1 ನಗರಸಭೆ, 3 ಪುರಸಭೆ ಹಾಗೂ 3 ಪಟ್ಟಣ ಪಂಚಾಯತ್ ಗಳಿಗೆ ನಡೆದ ಚುನಾವಣಾ ಮತ ಎಣಿಕೆ ಮುಕ್ತಾಯಗೊಂಡಿದೆ. ಒಟ್ಟು 140 ವಾರ್ಡ್‌ಗಳ ಪೈಕಿ 53 ವಾರ್ಡ್‌ಗಳಲ್ಲಿ ಕಾಂಗ್ರೆಸ್, 40 ವಾರ್ಡ್‌ಗಳಲ್ಲಿ ಬಿಜೆಪಿ, 28 ವಾರ್ಡ್‌ಗಳಲ್ಲಿ ಜೆಡಿಎಸ್, 1 ರಲ್ಲಿ ಬಿಎಸ್ಪಿ ಹಾಗೂ 18 ವಾರ್ಡ್‌ಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಗೆದ್ದಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಾಗರ ನಗರಸಭೆಯಲ್ಲಿ 31 ವಾರ್ಡ್‌ಗಳಿಗೆ ಚುನಾವಣೆ ನಡೆದಿದ್ದು, 16 ಬಿಜೆಪಿ ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಸ್ಪಷ್ಟ ಬಹುಮತ ಪಡೆದುಕೊಂಡಿದೆ. ಉಳಿದಂತೆ 9 ಕಾಂಗ್ರೆಸ್, 1 ಜೆಡಿಎಸ್, 5 ಪಕ್ಷೇತರರು ಗೆದ್ದಿದ್ದಾರೆ. ಶಿಕಾರಿಪುರ ಪುರಸಭೆಯಲ್ಲಿ 23 ಸ್ಥಾನಗಳಲ್ಲಿ 12 ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ್ದು, ಬಹುಮತ ಪಡೆದಿದ್ದರೆ, ಬಿಜೆಪಿ 8 ಹಾಗೂ ಪಕ್ಷೇತರರು 5 ಕಡೆ ಗೆಲುವು ಸಾಧಿಸಿದ್ದಾರೆ.
ಶಿರಾಳಕೊಪ್ಪ ಪ.ಪಂ.ಯಲ್ಲಿ 17 ಸ್ಥಾನಗಳಲ್ಲಿ ಕಾಂಗ್ರೆಸ್ 7, ಬಿಜೆಪಿ 2, ಜೆಡಿಎಸ್ 3 ಹಾಗೂ 5 ರಲ್ಲಿ ಪಕ್ಷೇತರರು ಗೆದ್ದಿದ್ದಾರೆ. ಹೊಸನಗರ ಪ.ಪಂ.ನಲ್ಲಿನ 11 ಸ್ಥಾನಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ತಲಾ 4 ಸ್ಥಾನ, ಜೆಡಿಎಸ್ 3 ಸ್ಥಾನಗಳಲ್ಲಿ ಗೆದ್ದಿದ್ದಾರೆ. ಸೊರಬ ಪ.ಪಂ.ನಲ್ಲಿನ 12 ಸ್ಥಾನಗಳಲ್ಲಿ 4 ಕಾಂಗ್ರೆಸ್, 6 ಬಿಜೆಪಿ, 1 ಜೆಡಿಎಸ್ ಹಾಗೂ 1 ಪಕ್ಷೇತರರು ಗೆಲುವು ಸಾಧಿಸಿದ್ದು, ಎಲ್ಲಿಯೂ ಯಾರಿಗೂ ಸ್ಪಷ್ಟ ಬಹುಮತ ಸಿಕ್ಕಿಲ್ಲ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪುರಸಭೆಯಲ್ಲಿನ 23 ಸ್ಥಾನಗಳಲ್ಲಿ 10 ಕಾಂಗ್ರೆಸ್, 2 ಬಿಜೆಪಿ, 7 ಜೆಡಿಎಸ್, 1 ಬಿಎಸ್ಪಿ ಹಾಗೂ 3 ಪಕ್ಷೇತರರು ಗೆದ್ದಿದ್ದು, ಯಾರಿಗೂ ಬಹುಮತ ಸಿಕ್ಕಿಲ್ಲ. ನೆಲಮಂಗಲ ಪುರಸಭೆಯಲ್ಲಿನ 23 ವಾರ್ಡ್‌ಗಳ ಪೈಕಿ ಜೆಡಿಎಸ್ 13 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಸಂಪೂರ್ಣ ಬಹುಮತ ಪಡೆದಿದೆ. ಕಾಂಗ್ರೆಸ್ 7, ಬಿಜೆಪಿ 2 ಸ್ಥಾನಗಳಲ್ಲಿ ಹಾಗೂ ಪಕ್ಷೇತರರು 1 ರಲ್ಲಿ ಗೆಲುವು ಸಾಧಿಸಿದ್ದಾರೆ.
ಸ್ಥಳೀಯ ಸಂಸ್ಥೆವಾರು ಫಲಿತಾಂಶ:
ದೇವನಹಳ್ಳಿ: ಕಾಂಗ್ರೆಸ್-10, ಬಿಜೆಪಿ-2, ಜೆಡಿಎಸ್-7, ಬಿಎಸ್ಪಿ-1, ಪಕ್ಷೇತರರು-3
ನೆಲಮಂಗಲ: ಕಾಂಗ್ರೆಸ್-7, ಬಿಜೆಪಿ-2, ಜೆಡಿಎಸ್-13, ಪಕ್ಷೇತರರು-1
ಸಾಗರ: ಕಾಂಗ್ರೆಸ್- 9, ಬಿಜೆಪಿ-16, ಜೆಡಿಎಸ್-1, ಪಕ್ಷೇತರರು-5
ಶಿಕಾರಿಪುರ: ಕಾಂಗ್ರೆಸ್-12, ಬಿಜೆಪಿ 8, ಪಕ್ಷೇತರರು-3
ಶಿರಾಳಕೊಪ್ಪ: ಕಾಂಗ್ರೆಸ್-7, ಬಿಜೆಪಿ-2, ಜೆಡಿಎಸ್-3, ಪಕ್ಷೇತರರು-5
ಹೊಸನಗರ: ಕಾಂಗ್ರೆಸ್-4, ಬಿಜೆಪಿ-4, ಜೆಡಿಎಸ್-3
ಸೊರಬ: ಕಾಂಗ್ರೆಸ್-4, ಬಿಜೆಪಿ-6, ಜೆಡಿಎಸ್-1, ಪಕ್ಷೇತರರು-1