×
Ad

ಕೇಂದ್ರದ ಹಿಂದಿ ಹೇರಿಕೆ ವಿರುದ್ಧ ಭಾರೀ ಆಕ್ರೋಶ: ಇಲ್ಲಿವೆ ಗಣ್ಯರ ಪ್ರತಿಕ್ರಿಯೆಗಳು....

Update: 2019-06-03 20:16 IST

ಅಗತ್ಯವಿದ್ದವರು ಕಲಿಯುತ್ತಾರೆ, ಹೇರಬೇಡಿ

ಕನ್ನಡ ಮತ್ತು ಕರ್ನಾಟಕಕ್ಕೆ ತನ್ನದೇ ಆದ ಸಾವಿರಾರು ವರ್ಷಗಳ ಪರಂಪರೆ ಮತ್ತು ಇತಿಹಾಸ ಇದೆ. ಯಾವುದೇ ಒಂದು ಭಾಷೆಯ ಮೇಲೆ ಅಥವಾ ಪರಭಾಷಿಕರ ನೆಲ ಮತ್ತು ಜನವರ್ಗದ ಮೇಲೆ ಅವಲಂಬಿತರಾಗದೆ ಸ್ವಾವಲಂಬಿಯಾಗಿ ಶತಮಾನಗಳ ಕಾಲ ಇಲ್ಲಿ ಜನ ಬದುಕಿ ಬಾಳಿದ್ದಾರೆ, ಬಾಳುತ್ತಿದ್ದಾರೆ. ಅದೇ ತರಹಕ್ಕೆ ಯಾವುದಾದರೂ ಆಧುನಿಕವಾದ ಜ್ಞಾನ ಮತ್ತು ವಿಚಾರ ಇನ್ನೊಂದು ಭಾಷೆಯಲ್ಲಿ ಬಂದಿದೆ ಎಂದು ತಿಳಿದಾಗ ಅದನ್ನು ಕಲಿತು ಅದನ್ನು ಎಲ್ಲಾ ಕನ್ನಡ ಭಾಷಿಕರಿಗೆ ಕನ್ನಡದಲ್ಲಿ ಹಂಚಿದ್ದಾರೆ. ಆದರೆ ಕಳೆದ ನಾಲ್ಕೈದು ದಶಕಗಳಲ್ಲಿ ಇದಕ್ಕೆ ಹಿನ್ನಡೆಯಾಗಿರುವುದೂ ಸಹ ಸತ್ಯ. ಆದರದು ತಾತ್ಕಾಲಿಕ ಮಾತ್ರ.

ಪ್ರಪಂಚದಲ್ಲಿ ನಮ್ಮ ರಾಜ್ಯಕ್ಕಿಂತ ಚಿಕ್ಕದಿರುವ ರಾಷ್ಟ್ರಗಳು ಮತ್ತು ಕಡಿಮೆ ಜನಸಂಖ್ಯೆ ಇರುವ ಭಾಷಿಕರು ನಮಗಿಂತಲೂ ಹೆಚ್ಚು ಸ್ವಾಭಿಮಾನಿಗಳಾಗಿದ್ದಾರೆ, ಸ್ವಾವಲಂಬಿಗಳಾಗಿದ್ದಾರೆ, ಹಾಗೂ ತಮ್ಮ ಪರಂಪರೆಯ ಬಗ್ಗೆ ಗೌರವ ಇಟ್ಟುಕೊಂಡು ಘನತೆಯಿಂದ ಬದುಕುತ್ತಿದ್ದಾರೆ; ವಿಶೇಷವಾಗಿ ಯುರೋಪಿನಲ್ಲಿ. ಅದು ಭಾರತದಲ್ಲಿ ಅಸಾಧ್ಯ ಎನ್ನುವವರು ಅಖಂಡ ಭಾರತದ ಕಲ್ಪನೆಗೆ ಮತ್ತು ಸ್ಪೂರ್ತಿಗೆ ವಿರುದ್ಧವಾಗಿರುವವರು. ಭಾರತ ಗಣತಂತ್ರದ ವಿರೋಧಿಗಳು.

ಭಾಷೆಯ ಆಧಾರದ ಮೇಲೆ ದಕ್ಷಿಣ ಭಾರತೀಯರ ಮೇಲೆ ಸವಾರಿ ಮಾಡಬಯಸುವ ಜನ ದ್ರಾವಿಡ ಭಾಷಿಕರ ಆತ್ಮಗೌರವ ಮತ್ತು ಸ್ವಾಭಿಮಾನವನ್ನು ಸರಿಯಾಗಿ ಅರ್ಥೈಸಿಕೊಂಡಿಲ್ಲ. ಅವರಿಗೆ ಭಾರತ ಗಣತಂತ್ರದ ಬಗ್ಗೆ ಗೌರವವೂ ಇಲ್ಲ, ಇತಿಹಾಸದ ಅರಿವೂ ಇಲ್ಲ. ಆಯಾಯ ರಾಜ್ಯಗಳಲ್ಲಿ ಅವರ ನಾಡಭಾಷೆಯೇ ಸಾರ್ವಭೌಮ. ಇರಬೇಕಿರುವುದೂ ಒಂದೇ, ಆಗಬೇಕಿರುವುದೂ ಒಂದೇ.

ಇತ್ತೀಚಿನ ದಶಕಗಳಲ್ಲಿ ಭ್ರಷ್ಟ ಮತ್ತು ಸ್ವಾರ್ಥ ಮನಃಸ್ಥಿತಿಯ ಅಪ್ರಬುದ್ಧ ಹಾಗೂ ಅಯೋಗ್ಯ ರಾಜಕಾರಣಿಗಳು ಮುನ್ನೆಲೆಗೆ ಬಂದ ಮಾತ್ರಕ್ಕೆ ಈ ಭಾಗದ ಜನರಿಗೆ ತಮ್ಮ ಪರಂಪರೆ ಮತ್ತು ನಾಡನುಡಿಯ ಬಗ್ಗೆ ಒಲವು ಮತ್ತು ಗೌರವ ಕಮ್ಮಿಯಾಗಿದೆ ಎಂದು ಯಾರೂ ಭಾವಿಸಬಾರದು.

’ಸಂವೇದನೆಗಳಿಲ್ಲದ ಅಧಿಕಾರದ ಅಮಲು ಒಮ್ಮೊಮ್ಮೆ ಮಾರು ಸುಟ್ಟು ಮನೆಯನ್ನೂ ಸುಡುತ್ತದೆ, ಎಚ್ಚರ’ ಎಂದಷ್ಟೇ ನಾವು ಈ ಸಂದರ್ಭದಲ್ಲಿ ಕೆಲವರಿಗೆ ಹೇಳಬಹುದಾದ ಹಿತನುಡಿ. ಅಗತ್ಯವಿದ್ದವರು ಕಲಿಯುತ್ತಾರೆ. ಹೇರಬೇಡಿ. ಹಾಗೆಯೇ, ಈ ಭಾಗಕ್ಕೆ ವಾಸಿಸಲು ಬಂದಾಗ ಇಲ್ಲಿಯ ಭಾಷೆಯನ್ನೂ ಕಲಿಯಿರಿ.

-ರವಿಕೃಷ್ಣಾ ರೆಡ್ಡಿ, ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ಅಧ್ಯಕ್ಷ

ಇದು ನಿಜಕ್ಕೂ ಅಪಾಯಕಾರಿ. ತ್ರಿಭಾಷಾ ಸೂತ್ರವನ್ನು ಕೇಂದ್ರ ಸರಕಾರ ಹಿಂಪಡೆಯಲೇಬೇಕು.

-ವಿಜಯರಾಘವನ್, ಲೇಖಕರು, ಚೀಫ್ ಮ್ಯಾನೇಜರ್ ಕೃಷ್ಣಾ ಗ್ರಾಮೀಣ ಬ್ಯಾಂಕ್

ನೀವು ಕನ್ನಡ ಕಲಿತಿದ್ದೀರಾ?

ನಾವೆಲ್ಲರೂ ಕೇಳುತ್ತಿರುವುದು ಒಂದೇ ಪ್ರಶ್ನೆ- ನಾವು ನಮ್ಮ ಶಾಲೆಯಲ್ಲಿ ಹಿಂದಿ ಕಲಿತಿದ್ದೇನೆ. ಹಿಂದಿಯವರು ನಮ್ಮ ಭಾಷೆ ಕಲಿತಿದ್ದಾರಾ? ಹಿಂದಿ ಕಲಿತ ಕಾರಣಕ್ಕೆ ಕರ್ನಾಟಕದ ಎಷ್ಟು ಜನರಿಗೆ ಹಿಂದಿ ರಾಜ್ಯದಲ್ಲಿ ಕೆಲಸ ಸಿಕ್ಕಿದೆ? ಕನ್ನಡ ಕಲಿಯದ ಎಷ್ಟು ಹಿಂದಿ ಭಾಷಿಕರಿಗೆ ಕರ್ನಾಟಕದಲ್ಲಿ ಕೆಲಸ ಸಿಕ್ಕಿದೆ? ಕನ್ನಡಿಗ ಹಿಂದಿ ಕಲಿಯುವ ಮೂಲಕ ಹಿಂದಿ ಭಾಷಿಕರಿಗೆ ಕರ್ನಾಟಕದಲ್ಲಿ ಕೆಲಸ ಪಡೆದುಕೊಳ್ಳಲು ಉಪಯೋಗ ಮಾಡಿಕೊಟ್ಟಿದ್ದಾನೆಯೇ ಹೊರತು ಕನ್ನಡಿಗರಿಗೆ ಉಪಯೋಗವಾಗಿಲ್ಲ. ಕರ್ನಾಟಕದ ಹಿಂದುವೊಬ್ಬನಿಗೆ ಕನ್ನಡದಲ್ಲಿ ಕೇಂದ್ರ ಸರಕಾರದ ಸೇವೆಗಳು ಸಿಗದಿದ್ದಾಗ, ಕರ್ನಾಟಕದ ಹಿಂದೂ ಯುವಕನೊಬ್ಬ ಕೇಂದ್ರ ಸರಕಾರದ ಹುದ್ದೆಗಳಿಗೆ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ಸಿಗದಿದ್ದಾಗ, ಬ್ಯಾಂಕಿಗೆ ಹೋದಾಗ ಬಡ ಹಿಂದೂ ಒಬ್ಬ ತನ್ನ ಭಾಷೆ ಕನ್ನಡದಲ್ಲಿ ಸೇವೆ ಸಿಗದೆ ಒದ್ದಾಡುವಾಗ ಹಿಂದುತ್ವವಾದಿಗಳು ಯಾಕೆ ಮಾತನಾಡುವುದಿಲ್ಲ? ಎಲ್ಲಿ ಅವಿತು ಕುಳಿತಿರುತ್ತಾರೆ ಇವರೆಲ್ಲಾ? ಗುರುವಾರ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಸಿದ್ಧತೆ ನಡೆಯುತ್ತಿದೆ.

-ಅರುಣ್ ಜಾವಗಲ್, ಕನ್ನಡ ಗ್ರಾಹಕರ ಕೂಟ, ಬನವಾಸಿ ಬಳಗ

ಹಿಂದಿ ಹೇರಿಕೆ ಸಹಿಸಲ್ಲ

ಹಿಂದಿ ಹೇರಿಕೆಯನ್ನು ಸಹಿಸಲಾಗದು. ಕನ್ನಡ ಬಿಟ್ಟು ಇತರ ಯಾವುದೇ ಭಾಷೆ ನಮ್ಮ ಆಯ್ಕೆಯಾಗಿರಬೇಕೇ ವಿನಃ ಹೇರಿಕೆ ಸಲ್ಲ. ನಮ್ಮ ನಾಡು ವಿವಿಧತೆಯಲ್ಲಿ ಏಕತೆಯಿಂದ ಕೂಡಿದೆ. ಸಮಾಜಕ್ಕೆ ಶಾಂತಿಯುತ ಸಹಬಾಳ್ವೆ ಮತ್ತು ಸಾಮರಸ್ಯದ ಅಗತ್ಯವಿದೆ. ಕನ್ನಡ ನಮ್ಮ ಅಸ್ಮಿತೆ. ಇತರ ಯಾವುದೇ ಭಾಷೆಯನ್ನು ಕಲಿಯುವುದು ನಮ್ಮ ಆಯ್ಕೆಯಾಗಿರಬೇಕೇ ವಿನಃ ಹೇರಿಕೆಯಾಗಬಾರದು. ಶಿಕ್ಷಣದಲ್ಲಿ ಮಾತೃಭಾಷೆಯಲ್ಲದ ಭಾಷೆ ಐಚ್ಛಿಕವಾಗಿರಬೇಕೇ ಹೊರತು ಕಡ್ಡಾಯವಾಗಬಾರದು. ಇದು ಇನ್ನೊಂದು ಭಾಷೆಯ ಒತ್ತಾಯಪೂರ್ವಕ ಹೇರಿಕೆಯಂತಾಗಿ ಮಗುವಿನ ಕಲಿಕೆಯ ಶಕ್ತಿಯನ್ನು ಕುಂಠಿತಗೊಳಿಸುತ್ತದೆ. ಹಿಂದಿ ಭಾಷಿಕರಲ್ಲದವರ ಮೇಲೆ ಹಿಂದಿ ಹೇರಿಕೆ ಮಾಡಲು ಹೊರಟಿರುವುದು ಭಾರತದ ಒಕ್ಕೂಟ ವ್ಯವಸ್ಥೆಗೆ ಮಾರಕವಾಗಿದೆ.

-ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ

ಕೇಂದ್ರವು ಸಂವೇದನಾಶೀಲ ನಿರ್ಧಾರ ತೆಗೆದುಕೊಳ್ಳಲಿ

ಭಾರತೀಯ ಸಂವಿಧಾನದ 8ನೇ ಪರಿಚ್ಛೇದದ ಪ್ರಕಾರ ಕನ್ನಡವೂ ಸೇರಿ ಉಳಿದ 21 ಭಾಷೆಗಳಂತೆ ಹಿಂದಿ ಕೂಡ ಒಂದು ಅಧಿಕೃತ ಭಾಷೆಯಷ್ಟೇ. ಹಾಗಾಗಿ ರಾಷ್ಟ್ರೀಯ ಶಿಕ್ಷಣ ನೀತಿ ಹೆಸರಲ್ಲಿ ಹಿಂದಿಯನ್ನು ಹೇರುವುದು ಖಂಡನೀಯವಾಗಿದ್ದು, ಕೇಂದ್ರ ಸರಕಾರವು ಭಾಷಾವಾರು ವೈವಿಧ್ಯತೆಯನ್ನು ಗೌರವಿಸಿ ಸಂವೇದನಾಶೀಲ ನಿರ್ಧಾರ ತೆಗೆದುಕೊಳ್ಳಬೇಕು.

-ಎಂ.ಬಿ.ಪಾಟೀಲ್, ಗೃಹ ಸಚಿವ

ಬೃಹತ್ ಜನಾಂದೋಲನ

ಭಾರತವ ವೈವಿಧ್ಯತೆಯುಳ್ಳ ದೇಶ, ಒಂದು ಭಾಷೆಯಾಗಲಿ, ಧರ್ಮವಾಗಲಿ ಹೇರಿಕೆ ಮಾಡುವುದು ಸರಿಯಲ್ಲ. ದಕ್ಷಿಣ ಭಾರತದ ರಾಜ್ಯಗಳಲ್ಲಿ ಪ್ರಾದೇಶಿಕ ಭಾಷೆಗಳಿಗೆ ಒತ್ತು ನೀಡಬೇಕಾದ ಕೇಂದ್ರ ಸರಕಾರ ದಿಢೀರ್, ಕಾಯ್ದೆಗಳ ಮೂಲಕ ಹಿಂದಿ ಹೇರಿಕೆ ಮಾಡುವುದು ಸೂಕ್ತವಲ್ಲ. ಇದರ ವಿರುದ್ಧ, ಬೃಹತ್ ಜನಾಂದೋಲನ ನಡೆಸುತ್ತೇವೆ

-ಚೇತನ್, ನಟ, ಹೋರಾಟಗಾರ

ಸರ್ವಪಕ್ಷಗಳ ಸಭೆ ಸೂಕ್ತ

ರಾಷ್ಟ್ರೀಯ ಶಿಕ್ಷಣ ನೀತಿನಲ್ಲಿ ತ್ರಿಭಾಷಾ ಸೂತ್ರವನ್ನು ಪ್ರತಿಪಾದಿಸಲಾಗಿದೆ. ಇದಕ್ಕೆ ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಅಧ್ಯಯನ ಮಾಡಿ ಅಭಿಪ್ರಾಯವನ್ನು ಕೇಂದ್ರಕ್ಕೆ ತಿಳಿಸಲಾಗುವುದು. ಆದರೆ, ಈ ವಿಚಾರದ ಬಗ್ಗೆ ಚರ್ಚೆ ಮಾಡಲು ಸರ್ವಪಕ್ಷಗಳ ಸಭೆಯನ್ನು ಕರೆಯುವುದು ಸೂಕ್ತ. ಯಾವುದೇ ವ್ಯಕ್ತಿಯ ವೈಯಕ್ತಿಕ ಅಭಿಪ್ರಾಯವನ್ನು ತೆಗೆದುಕೊಳ್ಳುವುದಕ್ಕಿಂತ ಸರ್ವಪಕ್ಷಗಳ ಸಭೆಯಲ್ಲಿ ಚರ್ಚಿಸಿ ಸೂಕ್ತ ತಿರ್ಮಾನವನ್ನು ಕೇಂದ್ರಕ್ಕೆ ಕಳುಹಿಸುವುದು ಸೂಕ್ತ.

-ಎಚ್.ಕೆ.ಪಾಟೀಲ್, ಮಾಜಿ ಸಚಿವ

ಒಂದು ಭಾಷೆ, ಒಂದು ಸಂಸ್ಕೃತಿಯ ಹೆಸರಲ್ಲಿ ಅನಿವಾರ್ಯವಲ್ಲದ ಹಿಂದಿ ಭಾಷೆಯನ್ನು ಮೋದಿ ನೇತೃತ್ವದ ಕೇಂದ್ರ ಸರಕಾರ ದಕ್ಷಿಣ ಭಾರತೀಯರ ಮೇಲೆ ಹೇರುತ್ತಿರುವುದು ಖಂಡನೀಯ. ಮೋದಿ ಸರಕಾರ ಹಿಂದಿ ಭಾಷಿಗರ ಸರಕಾರದಂತೆ ವರ್ತಿಸುವುದನ್ನು ನಿಲ್ಲಿಸಲಿ. ಬಹುಭಾಷೆ, ಬಹು ಸಂಸ್ಕೃತಿಯ ವೈವಿಧ್ಯತೆಯನ್ನು ಗೌರವಿಸಲಿ.

-ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ

ಕನ್ನಡದಲ್ಲಿ ಶಿಕ್ಷಣ ನೀಡಬೇಕು, ಕನ್ನಡ ಭಾಷೆ ಮಾತ್ರ ಕಲಿತರೆ ಸಾಕು. ಹಿಂದಿ ಮತ್ತು ಇಂಗ್ಲಿಷ್ ಹೇರಿಕೆ ಕನ್ನಡಿಗರು ಶಿಕ್ಷಣದಲ್ಲಿ ಮುಂದುವರಿಯಲು ಮತ್ತು ವಿಷಯವನ್ನು ಅರ್ಥ ಮಾಡಿಕೊಳ್ಳಲು ಕಷ್ಟ ಎಂದು ರಾಷ್ಟ್ರ ಕವಿ ಕುವೆಂಪು ಹೇಳಿದ್ದಾರೆ. ಆದರೆ, ಇಂದು ಕೇಂದ್ರ ಸರಕಾರ ಪ್ರಾದೇಶಿಕ ಭಾಷೆಗಳ ಕತ್ತನ್ನು ಹಿಸುಕಿ ಹಿಂದಿ ಹೇರುವ ಪ್ರಯತ್ನ ಮಾಡುತ್ತಿದೆ. ಶಿಕ್ಷಣದಲ್ಲಿ ಹಿಂದಿ ಹೇರಿಕೆ ಮಾತ್ರವಲ್ಲದೆ ಕೇಂದ್ರ ಸರಕಾರ ತನ್ನ ಹಿಡಿತದಲ್ಲಿರುವ ಎಲ್ಲ ಸಂಸ್ಥೆಗಳ ಮೂಲಕವೂ ಬಲವಂತವಾಗಿ ಭಾಷೆಯನ್ನು ತೂರಿಸಲಾಗುತ್ತಿದೆ. ಈಗಾಗಲೇ ಬ್ಯಾಂಕ್ ಹಾಗೂ ಅಂಚೆ ಕಚೇರಿ ಸೇರಿದಂತೆ ಹಲವು ಕಡೆ ಹೇರಿದ್ದಾರೆ. ರಾಜ್ಯದ ಸಂಸ್ಥೆಗಳಲ್ಲಿ ಉತ್ತರ ಭಾರತದ ಅಧಿಕಾರಗಳ ನೇಮಕದಿಂದ ವ್ಯವಹರಿಸಲು ಕಷ್ಟವಾಗುತ್ತದೆ.ಅಲ್ಲದೆ, ಉದ್ಯೋಗಗಳಲ್ಲಿ ಕನ್ನಡಿಗರಿಗೆ ದೊಡ್ಡ ಪ್ರಮಾಣದ ತಾರತಮ್ಯವಾಗುತ್ತಿದೆ.

ಹಿಂದಿಯ ಜತೆಗೆ ಸಂಸ್ಕೃತವನ್ನೂ ಪ್ರಾಥಮಿಕ ಹಂತದಲ್ಲಿ ವಿದ್ಯಾರ್ಥಿಗಳಿಗೆ ಕಲಿಸುವ ಯೋಜನೆಯಿದೆ. ಈ ಎಲ್ಲವೂ ಕನ್ನಡದ ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಮೇಲೆ ಬರಲು ದೊಡ್ಡ ತಡೆಯುಂಟಾಗುತ್ತದೆ. ಅದರಲ್ಲಿಯೂ ಗ್ರಾಮೀಣ ಪ್ರದೇಶದ ದಲಿತ, ಹಿಂದುಳಿದ ಜಾತಿಗಳ ವಿದ್ಯಾರ್ಥಿಗಳಿಗೆ, ಬಾಲಕಿಯರಿಗೆ ಬಹುದೊಡ್ಡ ಪೆಟ್ಟು ಬೀಳಲಿದೆ. ಸಾಮಾಜಿಕವಾಗಿ ಹಿಂದುಳಿದವರು ಬದುಕು ಕಟ್ಟಿಕೊಳ್ಳಲು ಅಡ್ಡಿಯುಂಟಾಗಲಿದೆ. ಕೇಂದ್ರ ಸರಕಾರ ತಮ್ಮ ಸ್ವಹಿತಾಸಕ್ತಿಗಾಗಿ ಹಿಂದಿ ಹೇರಿಕೆ ಮುಂದುವರಿಸಿದರೆ ಸಿಪಿಎಂ ಎಲ್ಲೆಡೆ ತೀವ್ರ ಹೋರಾಟ ಕೈಗೊಳ್ಳುತ್ತದೆ.

-ಜಿ.ಎನ್.ನಾಗರಾಜ್, ಸಿಪಿಎಂ ಮುಖಂಡರು

ರಾಷ್ಟ್ರ ಪ್ರಮುಖ 22 ಭಾಷೆಗಳಲ್ಲಿ ಹಿಂದಿಯೂ ಒಂದು ಭಾಷೆಯಾಗಿದೆ. ಅಲ್ಲದೆ, ಆಯಾ ರಾಜ್ಯಗಳಲ್ಲಿ ಪ್ರಾದೇಶಿಕ ಭಾಷೆಗಳಿವೆ. ಹೀಗಿರುವಾಗ ಕೇಂದ್ರ ಸರಕಾರ ಹಿಂದಿಗೆ ವಿಶೇಷವಾದ ಸ್ಥಾನ ನೀಡಿ, ಮೂರನೇ ಭಾಷೆಯಾಗಿ ಕಲಿಯಬೇಕು ಎನ್ನುತ್ತಿರುವುದು ಸರಿಯಲ್ಲ. ಕೇಂದ್ರ ಸರಕಾರ ವ್ಯವಸ್ಥಿತವಾಗಿ ಹಿಂದಿ ಸಂಸ್ಕೃತವನ್ನು ಬಿತ್ತಲು ಮುಂದಾಗಿದೆ. ಕನ್ನಡ, ಇಂಗ್ಲಿಷ್ ಪ್ರಥಮ ಹಾಗೂ ದ್ವಿತೀಯ ಭಾಷೆಯಾಗಿರಲಿ. ಉಳಿದಂತೆ ಹಿಂದಿ ಹೇರಿಕೆಗೆ ನಾವು ಬೆಂಬಲಿಸುವುದಿಲ್ಲ. ಅಲ್ಲದೆ, ರಾಜ್ಯದಲ್ಲಿ ಈಗಾಗಲೇ ತ್ರಿಭಾಷ ಸೂತ್ರವಿದ್ದು, ಇಲ್ಲಿನ ವಿದ್ಯಾರ್ಥಿಗಳು ತೃತೀಯ ಭಾಷೆಯಾಗಿ ಹಿಂದಿ ಕಲಿಯುತ್ತಿದ್ದಾರೆ. ಕೇಂದ್ರ ಸರಕಾರ ಅನಗತ್ಯವಾಗಿ ಹಿಂದಿ ಹೇರಿಕೆಗೆ ಮುಂದಾದರೆ ಭಾರತ ವಿದ್ಯಾರ್ಥಿ ಫೆಡರೇಷನ್‌ನಿಂದ ತೀವ್ರ ಹೋರಾಟ ನಡೆಸುತ್ತೇವೆ.

-ವಿ.ಅಂಬರೀಶ್, ಎಸ್‌ಎಫ್‌ಐ ರಾಜ್ಯಾಧ್ಯಕ್ಷ

ದಕ್ಷಿಣ ಭಾರತೀಯರು ಉತ್ತರದವರಿಗೂ ಅರ್ಥವಾಗುವ ಭಾಷೆ ಕಲಿಯಲಿ

ಬೆಂಗಳೂರಿನಲ್ಲಿ ಜನ ಕನ್ನಡವೇ ಮಾತನಾಡುವುದಿಲ್ಲ. ರಾಜ್ಯ ಸರಕಾರ ಮೊದಲು ಕನ್ನಡಕ್ಕೆ ಆದ್ಯತೆ ಕೊಡಲಿ. ಕೇವಲ ಹಿಂದಿ ಭಾಷೆ ಹೇರಿಕೆ ಮಾಡ್ತಾರೆ ಅಂದುಕೊಂಡರೆ ಕನ್ನಡದ ಅಭಿವೃದ್ಧಿ ಆಗಲ್ಲ. ಭಾಷೆ ಕಲಿಯಲು ವಿರೋಧ ಬೇಡ. ನಾನು ದಿಲ್ಲಿಗೆ ಹೋಗಿ ಕನ್ನಡದಲ್ಲಿ ಮಾತನಾಡಿದರೆ ಅಧಿಕಾರಿಗಳಿಗೆ ಅರ್ಥವಾಗಲ್ಲ. ಲೋಕಸಭೆಯಲ್ಲಿ ಬೇರೆ ರಾಜ್ಯಗಳ ಸಂಸದರಿಗೂ ಅರ್ಥವಾಗುವುದಿಲ್ಲ. ದಕ್ಷಿಣ ಭಾರತೀಯರು ಉತ್ತರದವರಿಗೂ ಅರ್ಥವಾಗುವ ಭಾಷೆ ಕಲಿಯಬೇಕು. ಯಾರು ಬೇಕಾದರೂ ವಿರೋಧಿಸಲಿ, ಎಲ್ಲರೂ ಕಲಿಯೋಣ. ಕನ್ನಡಕ್ಕೆ ಆದ್ಯತೆ ಕೊಡೋಣ.

-ಶೋಭಾ ಕರಂದ್ಲಾಜೆ, ಸಂಸದೆ

ತ್ರಿಭಾಷಾ ಸೂತ್ರ ಒಪ್ಪಲು ಸಾಧ್ಯವಿಲ್ಲ

ಕೇಂದ್ರ ಸರಕಾರ ಜಾರಿ ಮಾಡಲು ಹೊರಟಿರುವ ತ್ರಿಭಾಷಾ ಸೂತ್ರವನ್ನು ಯಾವುದೆ ಕಾರಣಕ್ಕೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ರಾಜ್ಯದಲ್ಲಿ ಮೂರನೆ ಭಾಷೆಯಾಗಿ ಹಿಂದಿಯನ್ನು ಕಡ್ಡಾಯಗೊಳಿಸುವ ಪ್ರಶ್ನೆಯೆ ಇಲ್ಲ. ಈ ಸಂಬಂಧ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಿ ಕೂಡಲೆ ಕೇಂದ್ರ ಸಂಪನ್ಮೂಲ ಇಲಾಖೆಗೆ ಪತ್ರ ಬರೆಯಲಾಗುವುದು.

-ಜಿ.ಟಿ.ದೇವೇಗೌಡ, ಉನ್ನತ ಶಿಕ್ಷಣ ಸಚಿವ

ಕನ್ನಡವೇ ರಾಷ್ಟ್ರಭಾಷೆ

ಕರ್ನಾಟಕಕ್ಕೆ ಕನ್ನಡವೇ ರಾಷ್ಟ್ರಭಾಷೆ. ಹಾಗೆಯೆ ದೇಶದಲ್ಲಿರುವ ಪ್ರತಿಯೊಂದು ರಾಜ್ಯದಲ್ಲೂ ಪ್ರಾದೇಶಿಕ ಭಾಷೆಗಳಿವೆ. ಇವೆಲ್ಲ ಭಾಷೆಗಳನ್ನು ಸಮಾನವಾಗಿ ಕಾಣುವುದು ಹಾಗೂ ಬೆಳವಣಿಗೆಗೆ ಅಗತ್ಯವಾದ ಪ್ರೋತ್ಸಾಹ ನೀಡುವುದು ಕೇಂದ್ರ ಸರಕಾರದ ಕರ್ತವ್ಯವಾಗಬೇಕಿತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಹಿಂದಿ ಭಾಷೆಯನ್ನು ಹೊರತುಪಡಿಸಿ ಯಾವುದೇ ಪ್ರಾದೇಶಿಕ ಭಾಷೆಗಳನ್ನು ಬೆಂಬಲಿಸುತ್ತಿಲ್ಲ. 

-ವಾಟಾಳ್ ನಾಗರಾಜ್, ಕನ್ನಡ ಒಕ್ಕೂಟದ ಅಧ್ಯಕ್ಷ

ಎಲ್ಲ ಪ್ರಾದೇಶಿಕ ಭಾಷೆಗಳು ರಾಷ್ಟ್ರಭಾಷೆಗಳೆ

ಭಾರತದಲ್ಲಿರುವ ಎಲ್ಲ ಪ್ರಾದೇಶಿಕ ಭಾಷೆಗಳು ರಾಷ್ಟ್ರಭಾಷೆಗಳಾಗಬೇಕು. ಇದರಿಂದ ಮಾತ್ರ ಭಾಷಾವಾರು ವಿಂಗಡನೆಗೆ ಅರ್ಥ ಬರುತ್ತೆ. ಆದರೆ, ಯಾವುದೆ ಒಂದು ಭಾಷೆಯನ್ನು ಮಾತ್ರ ರಾಷ್ಟ್ರಭಾಷೆಯೆಂದು ಬಿಂಬಿಸಲು ಹೊರಟರೆ ಭಾಷಾವಾರು ವಿಂಗಡನೆ ಅಪ್ರಸ್ತುತವಾಗುತ್ತದೆ. ನಮ್ಮ ಸಂವಿಧಾನದಲ್ಲಿ ಎಲ್ಲಿಯೂ ಹಿಂದಿಯನ್ನು ರಾಷ್ಟ್ರಭಾಷೆಯೆಂದು ಘೋಷಿಸಿಲ್ಲ. ಕೇವಲ ಘೋಷಣ ಹೇಳಿಕೆಯಾಗಿ ಬಳಕೆಯಲ್ಲಿದೆಯಷ್ಟೆ. ಅದನ್ನೆ ಅಧಿಕೃತವೆಂದು ಬಿಂಬಿಸಲು ಹೊರಟಿರುವುದು ಸಮರ್ಥನಿಯವಾದುದಲ್ಲ. ತ್ರಿಭಾಷಾ ಹಾಗೂ ದ್ವಿಭಾಷಾ ಸೂತ್ರವನ್ನು ಕೇವಲ ವ್ಯವಹಾರಿಕ ದೃಷ್ಟಿಯಿಂದ ಇರುವಂತಹದ್ದಾಗಿದ್ದು, ಅದನ್ನು ಮೇಲ್‌ಪದರಿನಿಂದ ಮಾತ್ರ ಗ್ರಹಿಸಬೇಕು. ಇದರಾಚೆಗೆ ನಿಂತು ಅದನ್ನು ದೃಢೀಕರಿಸಲು ಹೊರಟಾಗ ತೊಡಲು ಉಂಟಾಗುತ್ತದೆ. 

-ಅರವಿಂದ ಮಾಲಗತ್ತಿ, ಅಧ್ಯಕ್ಷ, ಕರ್ನಾಟಕ ಸಾಹಿತ್ಯ ಅಕಾಡೆಮಿ

ಬೆಳವಣಿಗೆಗೆ ಸಮಾನ ಅವಕಾಶ ಕಲ್ಪಿಸಲಿ

ತ್ರಿಭಾಷ ಸೂತ್ರ ಅಗತ್ಯವಿಲ್ಲ ಎಂದೆನಿಸುತ್ತದೆ. ಈಗಾಗಲೆ ಇಂಗ್ಲಿಷ್ ಭಾಷೆಯಿಂದಾಗಿ ಮಾತೃ ಹಾಗೂ ಪ್ರಾದೇಶಿಕ ಭಾಷೆಗಳಿಗೆ ಸಾಕಷ್ಟು ಒಡೆತ ಬಿದ್ದಿದೆ. ಈಗ ಇದರ ಜೊತೆಗೆ ಹಿಂದಿ ಸೇರಿಕೊಂಡರೆ ಪ್ರಾದೇಶಿಕ ಭಾಷೆ ಗತಿಯನ್ನು ಊಹಿಸಲು ಸಾಧ್ಯವಾಗುವುದಿಲ್ಲ. ಇದರ ಬದಲಿಗೆ ಕೇಂದ್ರ ಸರಕಾರ ಎಲ್ಲ ಪ್ರಾದೇಶಿಕ ಭಾಷೆಗಳನ್ನು ಸಮಾನ ಬೆಳವಣಿಗೆಗೆ ಅವಕಾಶ ಕಲ್ಪಿಸಬೇಕು.

-ಶೂದ್ರ ಶ್ರೀನಿವಾಸ್, ಹಿರಿಯ ಚಿಂತಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News