ಶಿಕ್ಷಣ ಕರಡು ನೀತಿಗೆ ವಿರೋಧ: ಕೇಂದ್ರ ಸಚಿವರಿಗೆ ಪತ್ರದ ಮೂಲಕ ಒತ್ತಾಯ
Update: 2019-06-03 20:40 IST
ಬೆಂಗಳೂರು, ಜೂ.3: ಕೇಂದ್ರ ಸರಕಾರದ ಕರಡು ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿನ ಹಲವು ಪ್ರಾದೇಶಿಕ ವಿರೋಧಿ ಅಂಶಗಳನ್ನು ಒಳಗೊಂಡಿದ್ದು, ಪ್ರಾದೇಶಿಕ ಭಾಷೆಗಳ ಅಸ್ತಿತ್ವಕ್ಕೆ ಮಾರಕವಾಗುವ ನಿಯಮಗಳಿವೆ. ಹೀಗಾಗಿ, ಅದನ್ನು ವಿರೋಧಿಸುವ ಮೂಲಕ ರಾಷ್ಟ್ರದ ಒಕ್ಕೂಟ ತತ್ವವನ್ನು ಎತ್ತಿಹಿಡಿಯಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ಕೇಂದ್ರ ಸಚಿವ ಸದಾನಂದಗೌಡಗೆ ಪತ್ರ ಬರೆದಿದ್ದಾರೆ.
ತ್ರಿಭಾಷಾ ನೀತಿಯಡಿಯಲ್ಲಿ ಉತ್ತರ ಭಾರತೀಯ ಜನಾಂಗವೂ ಸೇರಿದಂತೆ ಅನ್ಯರಾಜ್ಯಗಳು ದಕ್ಷಿಣ ಭಾರತೀಯ ಭಾಷೆಗಳನ್ನು ಕಲಿಯುವ ವಾತಾವರಣಕ್ಕೆ ನಾಂದಿಯಾಗಬೇಕು. ಯಾವುದೇ ರಾಜ್ಯದವರಾದರೂ, ಅಲ್ಲಿನ ಸ್ಥಳೀಯ ಭಾಷೆಯನ್ನು ಕಲಿಯಲು ಅವಕಾಶ ಕಲ್ಪಿಸದ ರೀತಿಯಲ್ಲಿ ದ್ವಿಭಾಷಾ ನೀತಿ ಪ್ರಸ್ತಾಪವಿದ್ದು, ಇದರ ಬಗ್ಗೆ ಸಂಸತ್ತಿನಲ್ಲಿ ಧ್ವನಿ ಎತ್ತಬೇಕು ಎಂದು ಅವರು ಪತ್ರದಲ್ಲಿ ಒತ್ತಾಯಿಸಿದ್ದಾರೆ.