ಚಿಕ್ಕಮಗಳೂರು: ಸಮಾಜ ಸೇವಕ ಅಬ್ಬಾಸ್ ಹಾಜಿ ನಿಧನ

Update: 2019-06-03 16:57 GMT

ಚಿಕ್ಕಮಗಳೂರು, ಜೂ.3: ಜಿಲ್ಲೆಯ ಹೆಸರಾಂತ ಉದ್ಯಮಿ ಅಬ್ಬಾಸ್ ಹಾಜಿ ಅವರು ಧೀರ್ಘ ಕಾಲದ ಅನಾರೋಗ್ಯದ ಕಾರಣದಿಂದಾಗಿ ಸೋಮವಾರ ಸಂಜೆ ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಮೃತಪಟ್ಟಿದ್ದಾರೆ.

ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಕ್ಕಮಕ್ಕಿ ಗ್ರಾಮದ ಹುಟ್ಟಿ ಬೆಳೆದ ಅಬ್ಬಾಸ್ ಹಾಜಿ ಅವರು ಚಕ್ಕಮಕ್ಕಿ ಜುಮ್ಮಾ ಮಸೀದಿಯ ಅಧ್ಯಕ್ಷರಾಗಿದ್ದು, ಸುಮಾರು 48 ವರ್ಷಗಳ ಕಾಲ ಅಧ್ಯಕ್ಷರಾಗಿರುವುದು ಅವರ ಹೆಗ್ಗಳಿಕೆಯಾಗಿದೆ. ತಾಲೂಕಿನ ಖ್ಯಾತ ಉದ್ಯಮಿಯಾಗಿದ್ದ ಅವರು ಮೂಡಿಗೆರೆ, ಚಕ್ಕಮಕ್ಕಿ ಹಾಗೂ ಬೆಂಗಳೂರಿನಲ್ಲಿ ಸಾಮಿಲ್ ಹಾಗೂ ಟೈಲ್ಸ್ ಉದ್ಯಮ ನಡೆಸುತ್ತಿದ್ದು, ತಾಲೂಕಿನ ಸಾವಿರಾರು ನಿರುದ್ಯೋಗಿಗಳಿಗೆ ಉದ್ಯೋಗ ನೀಡಿದವರಾಗಿದ್ದಾರೆ. 

ಕಾಫಿ ಬೆಳೆಗಾರರಾಗಿದ್ದ ಅವರು, ಕೊಡುಗೈ ದಾನಿ ಎಂದೇ ಜಿಲ್ಲೆಯಲ್ಲಿ ಹೆಸರಾಗಿದ್ದು, ಚಕ್ಕಮಕ್ಕಿ ಗ್ರಾಮದಲ್ಲಿ ಅನಾಥಾಶ್ರಮವೊಂದನ್ನು ನಡೆಸುತ್ತಾ ಸಮುದಾಯದ ಬಡ, ಅನಾಥ, ನಿರ್ಗತಿಕರ ಆಶಾಕಿರಣವಾಗಿದ್ದರು. ಚಕ್ಕಮಕ್ಕಿ ದಾರುಲ್ ಬಯಾನ್ ಖಲಂದರಿಯಾ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಹಾಗೂ ಜಾವಗಲ್ ಟ್ರಸ್ಟ್ ನಲ್ಲಿ ಸುಮಾರು ಸುಮಾರು 35 ವರ್ಷಗಳಿಂದ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಸಮಸ್ತ ಕೇರಳ ಎಸ್‍ಕೆಎಂವಿ ಬೋರ್ಡ್‍ನ ಸದಸ್ಯರೂ ಆಗಿದ್ದರು.

ಅಬ್ಬಾಸ್ ಹಾಜಿ ಅವರು ಮೂಡಿಗೆರೆ ತಾಲೂಕಿ ಪ್ರಥಮ ಟಿಂಬರ್ ವ್ಯಾಪಾರಿಯಾಗಿದ್ದು, ಆರಂಭದಲ್ಲಿ ಅವರು ಟಿಂಬರ್ ಮರಗಳ ಸಾಗಣೆಗಾಗಿ ಆನೆಯೊಂದರನ್ನು ಸಾಕಿದ್ದು, ಆನೆಗಳ ನಿಷೇಧದ ಬಳಿಕ ಆನೆಯನ್ನು ಅವರು ಸಾಕುತ್ತಿದ್ದರು. ಚಿಕ್ಕಮಗಳೂರು ಜಿಲ್ಲೆಯಾದ್ಯಂತ ತಮ್ಮ ಸಮಾಜ ಸೇವಾ ಕಾರ್ಯಗಳಿಂದ ಮನೆ ಮಾತಾಗಿದ್ದ ಹಾಜಿ ಅವರು ಐವರು ಗಂಡು ಮಕ್ಕಳು ಹಾಗೂ ನಾಲ್ವರು ಹೆಣ್ಣು ಮಕ್ಕಳನ್ನು ಆಗಲಿದ್ದಾರೆ. ಅಬ್ಬಾಸ್ ಹಾಜಿ ಅವರ ಎಲ್ಲ ವ್ಯವಹಾರ, ಉದ್ಯಮಗಳನ್ನು ಮಕ್ಕಳು ನೋಡಿಕೊಳ್ಳುತ್ತಿದ್ದಾರೆ. 

ಸೋಮವಾರ ಸಂಜೆ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಮೃತರಾದ ಅಬ್ಬಾಸ್ ಹಾಜಿ ಅವರ ಮೃತದೇಹವನ್ನು ಸೋಮವಾರ ರಾತ್ರಿ ಸ್ವಗ್ರಾಮಕ್ಕೆ ತರಲಾಗಿದೆ. ಮಂಗಳವಾರ ಅವರ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಚಿಕ್ಕಮಗಳೂರು ಜಿಲ್ಲೆಯಾದ್ಯಂತ ತಮ್ಮ ಸಮಾಜ ಸೇವೆ ಹಾಗೂ ಶಿಕ್ಷಣ ಕ್ಷೇತ್ರದಲ್ಲಿನ ಸೇವೆ ಮತ್ತು ದಾನ ಧರ್ಮಗಳಿಂದಾಗಿ ಮನೆ ಮಾತನಾಗಿದ್ದ ಅವರು ಕರ್ನಾಟಕ ರಾಜ್ಯವಲ್ಲದೇ ಕೇರಳದಲ್ಲೂ ಜನಾನುರಾಗಿ ಚಟುವಟಿಕೆಗಳ ಮೂಲಕ ಮನೆಮಾತಾಗಿದ್ದರು. ಹಾಜಿ ನಿಧನಕ್ಕೆ ತಾಲೂಕಿನ ವಿವಿಧ ಪಕ್ಷಗಳ ಮುಖಂಡರು ಹಾಗೂ ಉದ್ಯಮಿಗಳು, ಸಂಘ ಸಂಸ್ಥೆಗಳ ಮುಖಂಡರು ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News