ಕಾಮಗಾರಿ ವಿಳಂಬದಿಂದ ಶುದ್ಧ ನೀರು ಸರಬರಾಜಿನಲ್ಲಿ ವ್ಯತ್ಯಯ: ಶಾಸಕ ಸಿ.ಟಿ.ರವಿ

Update: 2019-06-03 17:41 GMT

ಚಿಕ್ಕಮಗಳೂರು, ಜೂ.3: ರಾಮನಹಳ್ಳಿ ವಾಟರ್ ಫಿಲ್ಟರ್ ಬೆಡ್ ದುರಸ್ತಿ ಕಾರ್ಯ ಆರಂಭವಾಗಿದ್ದು, ಜೂನ್ ತಿಂಗಳ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ. ಅಲ್ಲಿಯವರೆಗೂ ನಗರದ ಕೆಲ ಬಡಾವಣೆಗಳಿಗೆ ಶುದ್ಧೀಕರಿಸದ ನೀರು ಪೂರೈಕೆಯಾಗುತ್ತದೆ. ಆದ್ದರಿಂದ ಈ ನೀರನ್ನು ಕುಡಿಯಲು ಬಳಸದೇ ಇತರ ಕಾರ್ಯಕ್ಕೆ ಬಳಸಿಕೊಳ್ಳಬೇಕು. ಕುಡಿಯಲು ಬಳಸುವವರು ನೀರನ್ನು ಕುದಿಸಿ ಕುಡಿಯಲು ಬಳಸಬೇಕೆಂದು ಎಂದು ಶಾಸಕ ಸಿ.ಟಿ.ರವಿ ಸೂಚನೆ ನೀಡಿದ್ದಾರೆ.

ನಗರದ ಹೌಸಿಂಗ್ ಬೋರ್ಡ್ ಮತ್ತು ರಾಮನಹಳ್ಳಿ ನೀರು ಶುದ್ದೀಕರಣ ಘಟಕಗಳಿಗೆ ಸೋಮವಾರ ಭೇಟಿ ನೀಡಿ ಪಿಲ್ಟರ್ ಬೆಡ್‍ಗಳ ದುರಸ್ತಿ ಹಾಗೂ ನಿರ್ಮಾಣ ಕಾಮಗಾರಿ ಪರಿಶೀಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೃಹಮಂಡಳಿ ಬಡಾವಣೆಯಲ್ಲಿರುವ ಘಟಕದಲ್ಲಿ ಯಗಚಿ ಡ್ಯಾಂನಿಂದ ಪೂರೈಕೆ ಮಾಡಲಾಗುವ 60 ಲಕ್ಷ ಲೀಟರ್ ನೀರು ಸಂಗ್ರಹದ ಟ್ಯಾಂಕ್ ನಿರ್ಮಾಣವಾಗುತ್ತಿದೆ. ಈ ಕಾಮಗಾರಿಯನ್ನು ಪರಿಶೀಲನೆ ಮಾಡಿದ್ದು, ಗುಣಮಟ್ಟದ ಕಾಮಗಾರಿ ನಡೆಯುತ್ತಿದೆ. ಆದರೆ ಕಾಮಗಾರಿ ವಿಳಂಬವಾಗುತ್ತಿರುವ ಬಗ್ಗೆ ದೂರು ಕೇಳಿಬರುತ್ತಿದ್ದು, ಗುತ್ತಿಗೆದಾರರಿಗೆ ಕಾಮಗಾರಿಗೆ ವೇಗ ನೀಡುವಂತೆ ಸೂಚಿಸಲಾಗಿದೆ ಎಂದ ಅವರು, ಘಟಕದ ಕಾಮಗಾರಿ ಸಂಬಂಧ ನಗರಸಭೆಯ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ನಡೆಸಲಾಗುವುದು ಎಂದರು.

ರಾಮನಹಳ್ಳಿಯಲ್ಲಿರುವ ನೀರು ಶುದ್ಧೀಕರಣ ಘಟಕದಲ್ಲಿ ನಗರದ ಹಿರೇಕೊಳಲೆ ಕೆರೆಯಿಂದ ಪೂರೈಕೆಯಾಗುವ ನೀರನ್ನು ಶುದ್ದೀಕರಣ ಮಾಡಲಾಗುತ್ತಿದೆ. ನಾಲ್ಕೂವರೆ ಲಕ್ಷ ನೀರು ಸಂಗ್ರಹ ಸಾಮರ್ಥ್ಯದ ರಾಮನಹಳ್ಳಿ ನೀರು ಶುದ್ಧಿಕರಣ ಘಟಕವನ್ನು 1964ರಲ್ಲಿ ನಿರ್ಮಿಸಲಾಗಿದೆ. ನೀರು ಶುದ್ಧೀಕರಣ ಸರಿಯಾಗಿ ಆಗುತ್ತಿಲ್ಲ ಎಂಬ ದೂರು ಕೇಳಿ ಬರುತ್ತಿದ್ದ ಹಿನ್ನೆಲೆಯಲ್ಲಿ ನಗರಸಭೆಯ ಇಂಜಿನಿಯರ್ ಘಟಕದಲ್ಲಿ ಕೆಲ ರಿಪೇರಿಗಳಾದಲ್ಲಿ ಘಟಕವನ್ನು ಸುಸ್ಥಿತಿಗೆ ತರಬಹುದೆಂಬ ಸೂಚನೆಯಂತೆ ದುರಸ್ತಿ ಕಾರ್ಯ ನಡೆಯುತ್ತಿದೆ. ಜೂನ್ ಅಂತ್ಯದೊಳಗೆ ದುರಸ್ತಿ ಕಾರ್ಯ ಪೂರ್ಣಗೊಳ್ಳಲಿದ್ದು, ನಂತರ ಎಂದಿನಂತೆ ನಗರದ ಎಲ್ಲ ಬಡಾವಣೆಗಳಿಗೆ ಶುದ್ಧೀಕರಿಸಿದ ನೀರು ಸಿಗಲಿದೆ ಎಂದರು.

ರಾಮನಹಳ್ಳಿ ಘಟಕದಲ್ಲಿ ಜೂನ್ ಅಂತ್ಯದವರೆಗೆ ದುರಸ್ತಿ ಕಾರ್ಯ ನಡೆಯುವುದರಿಂದ ಅಲ್ಲಿಂದ ಪೂರೈಕೆಯಾಗುವ ಹಿರೇಕೊಳಲೆ ನೀರನ್ನು ಶುದ್ಧೀಕರಿಸದೇ ನಗರಕ್ಕೆ ಪೂರೈಕೆ ಮಾಡಲಾಗುತ್ತದೆ. ಈ ನೀರನ್ನು ನಾಗರಿಕರು ಹಾಗೆಯೇ ಕುಡಿಯಲು ಬಳಸಬಾರದು. ಇತರ ಉದ್ದೇಶಳಿಗೆ ಈ ನೀರನ್ನು ಬಳಸಿಕೊಳ್ಳಬೇಕು. ಇಲ್ಲವೇ ಕಾಯಿಸಿ, ಕುದಿಸಿಯೇ ಕುಡಿಯಲು ಬಳಸಬೇಕೆಂದ ಅವರು, ನಗರಕ್ಕೆ ಪೂರೈಕೆಯಾಗುತ್ತಿರುವ ಯಗಚಿ ನೀರು ಸಾಕಾಗುತ್ತಿಲ್ಲ. ಕಾಮಗಾರಿ ಹಿನ್ನೆಲೆಯಲ್ಲಿ ನಗರದಲ್ಲಿ ಸ್ವಲ್ಪ ದಿನಗಳ ಕಾಲ ನೀರಿನ ಸಮಸ್ಯೆ ಹಾಗೆಯೇ ಮುಂದುವರಿಯುತ್ತದೆ. ಈ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಲು ಜಿಲ್ಲಾಧಿಕಾರಿ ಹಾಗೂ ಜಿಪಂ ಅಧಿಕಾರಿಗಳೊಂದಿಗೂ ಚರ್ಚಿಸಿದ್ದೇವೆ. ನೀರು ಪೂರೈಕೆ ಕಾಮಗಾರಿ, ಯುಜಿಡಿ, ಅಮೃತ್ ಯೋಜನೆ ಕಾಮಗಾರಿಗಳ ಪ್ರಗತಿಪರಿಶೀಲನೆ ನಗರಸಭೆಯಲ್ಲಿ ಸೋಮವಾರ ನಡೆಯಲಿದ್ದು, ಕಾಮಗಾರಿಗಳ ಸ್ಥಿತಿಗತಿ ಬಗ್ಗೆ ಮಾಹಿತಿ ಸಿಗಲಿದೆ ಎಂದರು.

ಅಮೃತ್ ಯೋಜನೆಯಡಿ ನಗರಕ್ಕೆ ದಿನದ 24ಗಂಟೆಯೂ ನೀರು ಪೂರೈಸುವ ಯೋಜನೆ ಒಪ್ಪಂದದಂತೆ ಮೇ 15ಕ್ಕೆ ಪೂರ್ಣಗೊಳ್ಳಬೇಕಿತ್ತು. ಆದರೆ ತಾಂತ್ರಿಕ ಕಾರಣಗಳಿಂದಾಗಿ ಕಾಮಗಾರಿ ವಿಳಂಬವಾಗಿದೆ. ಈ ಕಾಮಗಾರಿ ಪೂರ್ಣಗೊಳಿಸಲು  2 ಗುತ್ತಿಗೆದಾರರು 2020 ಫೆ.10ರ ವರೆಗೂ ಗಡುವು ಕೇಳಿದ್ದಾರೆ. ಒಪ್ಪಂದದಂತೆ ಕಾಮಗಾರಿ ಪೂರ್ಣಗೊಳಿಸದ ಬಗ್ಗೆ ಕಾನೂನುಕ್ರಮ ಕೈಗೊಳ್ಳಲು ಅವಕಾಶವಿದ್ದು, ಈ ಸಂಬಂಧ ಪರಿಶೀಲನೆ ಬಳಿಕ ಕ್ರಮವಹಿಸಲಾಗುವುದು ಎಂದ ಸಿ.ಟಿ.ರವಿ, ನಗರದಲ್ಲಿ ನಡೆಯುತ್ತಿರುವ ಯುಜಿಡಿ ಕಾಮಗಾರಿಗೂ ಗುತ್ತಿಗೆದಾರರು ಕಾಲಾವಕಾಶ ಕೇಳಿದ್ದಾರೆ ಎಂದು ತಿಳಿಸಿದರು.

ನಗರಸಭೆ ಮಾಜಿ ಅಧ್ಯಕ್ಷ ಎಚ್.ಡಿ.ತಮ್ಮಯ್ಯ, ಪುಷ್ಪರಾಜ್, ದೇವರಾಜಶೆಟ್ಟಿ, ಬಿಜೆಪಿ ಮುಖಂಡ ವರಸಿದ್ದಿ ವೇಣುಗೋಪಾಲ್, ನಗರಸಭೆ ಎಂಜಿನಿಯರ್ ಹಾಗೂ ಅಧಿಕಾರಿಗಳು ಈ ವೇಳೆ ಉಪಸ್ಥಿತರಿದ್ದರು.

ನಗರದಲ್ಲಿ ನಡೆಯುತ್ತಿರುವ ಒಳಚರಂಡಿ ಕಾಮಗಾರಿ, ಅಮೃತ್‍ಯೋಜನೆ ಕಾಮಗಾರಿಗಳ ಅವಧಿ ಮುಗಿದಿದೆ. ಕಾಲಮಿತಿಯೊಳಗೆ ಗುತ್ತಿಗೆದಾರರು ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಎಚ್ಚರವಹಿಸಬೇಕಾದ ಅಧಿಕಾರಿಗಳು ನಿರ್ಲಕ್ಷ್ಯಧೋರಣೆ ತಳೆದಿದ್ದಾರೆ ಈ ಬಗ್ಗೆ ಉಸ್ತುವಾರಿ ಸಚಿವರು ಮತ್ತು ಸರಕಾರದ ಗಮನಕ್ಕೆ ತಂದಿದ್ದೇನೆ. ಸದನದಲ್ಲಿ ಪ್ರಸ್ತಾಪಿಸಿದ್ದೇನೆ, ಆದರೂ ಉಪಯೋಗವಾಗಿಲ್ಲ. ಒಳಚರಂಡಿ ಕಾಮಗಾರಿ 57 ಕೋಟಿಯಿಂದ 82 ಕೋಟಿಗೆ ಹೆಚ್ಚುವರಿಯಾಗಿದೆ. ಕಾಲ ಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಚುರುಕು ಮುಟ್ಟಿಸಬೇಕಾದ ಅಧಿಕಾರ ವರ್ಗಕ್ಕೆ ಜನರ ಬಗ್ಗೆ ಕಾಳಜಿಯಿಲ್ಲದೇ ದಪ್ಪ ಚರ್ಮವನ್ನು ಹೊಂದಿದ್ದಾರೆ. ಅಮೃತ್ ಯೋಜನೆಯ ಕಾಮಗಾರಿ ಪೂರ್ಣಗೊಳಿಸಲು  ಕಳೆದ  ಮಾಹೆಯ 19ಕ್ಕೆ ವಾಯಿದೆ ಮುಗಿದಿದ್ದು, ಇನ್ನೂ ಹೆಚ್ಚುವರಿ ಸಮಯ ವಿಸ್ತರಣೆ ಮಾಡುವಂತೆ ಗುತ್ತಿಗೆದಾರರು ಕಾಲಾವಕಾಶ ಕೋರಿದ್ದಾರೆ. ಅವರಿಗೆ ಕಾಲಾವಕಾಶ ನೀಡುವುದಿದ್ದರೆ ಷರತ್ತುಗಳನ್ನು ವಿಧಿಸಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದೇನೆ.
-ಸಿ.ಟಿ.ರವಿ, ಶಾಸಕ

ಹಿರೇಕೊಳಲೆ ಕೆರೆಯಿಂದ ಬರುವ ನೀರನ್ನು ಶುದ್ಧೀಕರಿಸದೇ ನೇರವಾಗಿ ಜನರಿಗೆ ತಲುಪಿಸಲಾಗುತ್ತಿದೆ. ಆದ್ದರಿಂದ ನೀರು ಕಲುಷಿತವಾಗಿ ಬರುತ್ತಿದೆ. ಇದನ್ನು ಜನತೆ ಬಳಸಬಾರದು ಹಾಗೆಯೇ ಬಳಸುವ ಅನಿವಾರ್ಯತೆ ಇದ್ದರೆ ಕುದಿಸಿ ಆರಿಸಿ ಬಳಸಬೇಕು. ರಾಮನಹಳ್ಳಿ ನೀರು ಶುದ್ಧೀಕರಣ ಘಟಕ ದುರಸ್ತಿಯಲ್ಲಿರುವುದರಿಂದ ಈ ಸಮಸ್ಯೆ ತಲೆದೋರಿದೆ. ಜೂನ್ ಅಂತ್ಯದವರೆಗೂ ಕಲುಷಿತ ನೀರು ಪೂರೈಕೆ ಅನಿವಾರ್ಯ.

- ಸಿ.ಟಿ.ರವಿ, ಶಾಸಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News