ಬೆಳ್ಳಿ ಪದಕ ವಿಜೇತ ವನಿತೆಯರ ತಂಡಕ್ಕೆ ಮುಖ್ಯಮಂತ್ರಿ ಅಭಿನಂದನೆ

Update: 2019-06-04 17:33 GMT

ಬೆಂಗಳೂರು, ಜೂ.4: ನೇಪಾಳದ ಕಠ್ಮಂಡುವಿನಲ್ಲಿ ನಡೆದ ರಾಷ್ಟ್ರೀಯ ಟಗ್ ಆಫ್ ವಾರ್ ಕ್ರೀಡಾಕೂಟದಲ್ಲಿ ಕರ್ನಾಟಕ ವನಿತೆಯರ ತಂಡ (480 ಕೆಜಿ ವಿಭಾಗದಲ್ಲಿ) ಬೆಳ್ಳಿ ಪದಕ ಪಡೆದು ಸಾಧನೆ ಮಾಡಿದ ಕ್ರೀಡಾಪಟುಗಳನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಂಗಳವಾರ ವಿಧಾನಸೌಧದಲ್ಲಿ ಅಭಿನಂದಿಸಿದರು.

ವಿಶೇಷವಾಗಿ ವಿದ್ಯಾರ್ಥಿನಿಯರು ಈ ಸಾಧನೆ ಮಾಡಿರುವುದು ನಾಡಿಗೆ ಹೆಮ್ಮೆಯ ಸಂಗತಿ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರಶಂಸೆ ವ್ಯಕ್ತಪಡಿಸಿದರು. ನೇಪಾಳದಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನ ಪಡೆಯುವ ಮೂಲಕ ನಾಡಿಗೆ ಹೆಮ್ಮೆ ತಂದಿರುವ ವನಿತೆಯರ ತಂಡವನ್ನು ದೇಶ ಮತ್ತು ರಾಜ್ಯದ ಟಗ್ ಆಫ್ ವಾರ್ ಸಂಸ್ಥೆಗಳು ಅಭಿನಂದಿಸಿವೆ.

ಎಂಟು ಜನರ ತಂಡದಲ್ಲಿ ಬೆಂಗಳೂರು ಜೈನ್ ಕಾಲೇಜಿನ ವಿದ್ಯಾರ್ಥಿನಿ ಭೂಮಿಕಾ ಎಸ್ ತಗಡೂರು, ಭಾಗ್ಯಲಕ್ಷ್ಮಿ ಬಾಲಾಜಿ, ಹಾಸನದ ಇಂಚರ, ಸರೇನಾ ಅನೀಸ್, ಗುಣರ್ಪಿತ, ಜಯಶ್ರೀ, ಬಿ.ಜಿ.ಆಶಾ, ಮರಿಯಾ ಜೆನಿಫರ್, ದೀಕ್ಷಾ ಭಾಗವಹಿಸಿದ್ದರು. ರೋಹಿತ್ ಅವರು ವನಿತೆಯರ ತಂಡಕ್ಕೆ ತರಬೇತಿ ನೀಡಿದ್ದರು.

ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಜಯಮಾಲಾ, ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಕ್ರೀಡಾಪಟುಗಳನ್ನು ಅಭಿನಂದಿಸಿದರು. ಈ ವೇಳೆ ಮುಖ್ಯಮಂತ್ರಿಯ ಮಾಧ್ಯಮ ಕಾರ್ಯದರ್ಶಿ ಎಚ್.ಬಿ.ದಿನೇಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News