ಸಿದ್ದಗಂಗಾ ಮಠದಲ್ಲಿ ವಿಶ್ವ ಪರಿಸರ ದಿನಾಚರಣೆ
ತುಮಕೂರು,ಜೂ 5: ಬೆಂಗಳೂರಿನ ರೀಚ್‍ಫಾರ್ ಕಾಸ್ ಟೆಕ್ನಾಲಜಿಸ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಇಲ್ಲಿನ ಸಿದ್ಧಗಂಗಾ ಮಠದ ವಸ್ತು ಪ್ರದರ್ಶನ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಇಂದು ಬೆಳಗ್ಗೆ ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲಾಗಿತ್ತು.
ನಗರದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಂದ್ರ ಬಾದಾಮಿಕರ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ಪ್ರಚಾರಕ್ಕಾಗಿ ಗಿಡಗಳನ್ನು ನೆಟ್ಟರೆ ಸಾಲದು ಅವುಗಳ ಪೋಷಣೆ ಮಾಡಿ, ನಿಗದಿತ ಅವಧಿಯವರೆಗೆ ಬೆಳೆಸಬೇಕು ಎಂದ ಅವರು, ಈಗ ಮುಂಗಾರು ಆರಂಭವಾಗಿರುವುದರಿಂದ ಈ ಅವಧಿಯಲ್ಲಿ ಗಿಡಗಳನ್ನು ನೆಟ್ಟರೆ ಅವು ಚೆನ್ನಾಗಿ ಬೆಳೆಯುತ್ತವೆ. 1990ರಿಂದ ವಿಶ್ವ ಪರಿಸರ ದಿನವನ್ನು ಆಚರಿಸಿ ಕೊಂಡು ಬರುತ್ತಿದ್ದು, ಜನರು ಈ ಬಗ್ಗೆ ಸಾಕಷ್ಟು ಅರಿವು ಮೂಡಿಸಿಕೊಂಡಿದ್ದಾರೆ. ಆದರೂ ಸಹ ಪರಿಸರದ ಮೇಲೆ ನಿರಂತರವಾದ ದೌರ್ಜನ್ಯ ತಪ್ಪಿಲ್ಲ. ಇದರಿಂದಾಗಿಯೇ ಸಾಕಷ್ಟು ಪ್ರಾಕೃತಿಕ ವಿಕೋಪಗಳು ಸಂಭವಿಸುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಿದ್ಧಗಂಗಾ ಮಠದ ಅಧ್ಯಕ್ಷರಾದ ಶ್ರೀಸಿದ್ಧಲಿಂಗಸ್ವಾಮಿಜೀ ಮಾತನಾಡಿ, ಪ್ರತಿವರ್ಷ ಜೂನ್ ತಿಂಗಳಲ್ಲಿ ವಿಶ್ವ ಪರಿಸರ ದಿನವನ್ನು ನಾವು ಆಚರಿಸುತ್ತಿದ್ದೇವೆ. ಇದು ಒಂದು ದಿನಕ್ಕೆ ಸೀಮಿತವಾಗದೆ ಪ್ರತಿ ನಿತ್ಯದ ಆಚರಣೆಯಾಗಬೇಕು. ಪರಿಸರ ಉಳಿದರೆ ದೇಶ ಉಳಿಯುತ್ತದೆ. ಇದು ಮನುಷ್ಯನ ಬದುಕಿಗೆ ಪಾಠ ಆಗಬೇಕು. ಸಕಲ ಜೀವ ಜಂತು ಗಳಿಗೂ ಪರಿಸರ ಅಗತ್ಯವಾಗಿದ್ದು, ಸ್ವಾರ್ಥಕ್ಕಾಗಿ ಪ್ರತಿನಿತ್ಯ ಪರಿಸರವನ್ನು ಹಾಳು ಮಾಡುತ್ತಿದ್ದು, ಭೂಮಿ, ನೀರು, ಗಾಳಿ ಎಲ್ಲವೂ ಕಲುಷಿತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಾವು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಈ ಕಾರ್ಯಕ್ರಮ ವನ್ನು ಹಮ್ಮಿಕೊಂಡಿದ್ದು, ಪ್ರತಿಯೊಬ್ಬರು ಪರಿಸರದ ಬಗ್ಗೆ ಕಾಳಜಿ ಹೊಂದಿ ಸಸಿಗಳನ್ನು ನೆಟ್ಟು ಮಗುವಿನಂತೆ ಪೋಷಣೆ ಮಾಡಬೇಕೆಂದರು.
ಜಿಲ್ಲಾಧಿಕಾರಿ ಡಾ. ರಾಕೇಶ್‍ಕುಮಾರ್ ಮಾತನಾಡಿ, ಪರಿಸರದ ಮೇಲೆ ಒತ್ತಡ ಹೆಚ್ಚಾಗುತ್ತಿರುವುದರಿಂದ ಅಸಮತೋಲನಕ್ಕೆ ಕಾರಣ ವಾಗಿದೆ. ಮನುಷ್ಯರು, ಮರ, ಗಿಡ, ಮರಳು, ಗಣಿಗಾರಿಕೆ ಇತ್ಯಾದಿಗಳಿಂದ ಪರಿಸರದ ಮೇಲೆ ಒತ್ತಡ ಉಂಟು ಮಾಡುತ್ತಿದ್ದು, ಇದರಿಂದಾಗಿ ಅಸಮತೋಲನ ಉಂಟಾಗಿದೆ. ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದ್ದು, 148 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಬಹುತೇಕ ಕೊಳವೆ ಬಾವಿಗಳು ಬತ್ತಿ ಹೋಗಿದ್ದು, ಇದಕ್ಕೆ ಪರಿಸರ ಅಸಮ ತೋಲನ ಕಾರಣ ಎಂದರು.
ಜಿ.ಪಂ. ಸಿಇಒ ಶುಭಾ ಕಲ್ಯಾಣ್, ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಕೆ.ವಂಶಿಕೃಷ್ಣ, ಉಪಅರಣ್ಯ ಸಂರಕ್ಷಣಾಧಿ ಕಾರಿಗಳಾದ ಹೆಚ್.ಸಿ.ಗಿರೀಶ್, ಸತೀಶ್‍ಬಾಬಾರೈ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಚಂದ್ರಪ್ಪ ಮುಂತಾದವರು ಭಾಗವಹಿಸಿದ್ದರು.