ಬಿಎಸ್‌ವೈ ಕಾಂಗ್ರೆಸ್‌ಗೆ ಬಂದರೆ ಸಿಎಂ ಮಾಡಲು ಸಹಕರಿಸುತ್ತೇನೆ: ಗೃಹ ಸಚಿವ ಎಂ.ಬಿ.ಪಾಟೀಲ್
Update: 2019-06-05 18:31 IST
ವಿಜಯಪುರ, ಜೂ.5: ಬಿ.ಎಸ್.ಯಡಿಯೂರಪ್ಪ ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಬಂದರೆ ಮುಖ್ಯಮಂತ್ರಿಯಾಗಲು ಸಹಕರಿಸುತ್ತೇವೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಕಾಂಗ್ರೆಸ್ ಪಕ್ಷದಲ್ಲಿದ್ದೇನೆ. ಯಡಿಯೂರಪ್ಪ ಬಿಜೆಪಿಯಲ್ಲಿದ್ದಾರೆ. ಅವರು ಮುಖ್ಯಮಂತ್ರಿ ಆಗಬೇಕು ಎಂಬ ಆಸೆ ಇಟ್ಟುಕೊಂಡಿರುವುದು ತಪ್ಪಲ್ಲ. ಅದರ ಬಗ್ಗೆ ನನ್ನ ಆಕ್ಷೇಪಣೆಯೂ ಇಲ್ಲ. ಆದರೆ ಅವರು ಬಿಜೆಪಿಯನ್ನು ತೊರೆದು ಬಂದಲ್ಲಿ ಸಹಕರಿಸುತ್ತೇನೆ ಎಂದು ಹೇಳಿದ್ದಾರೆ.
ಕಳೆದ ಒಂದು ವರ್ಷದಿಂದಲೂ ಬಿಜೆಪಿ ನಾಯಕರು ಪದೇ ಪದೇ ಸರಕಾರ ಬಿದ್ದು ಹೋಗುತ್ತದೆ, ನಾವು ಪರ್ಯಾಯ ಸರಕಾರ ಮಾಡುತ್ತೇವೆ ಎಂದು ಹೇಳಿಕೊಂಡು ಬರುತ್ತಲೇ ಇದ್ದಾರೆ. ರಾಜ್ಯದ ಮೈತ್ರಿ ಸರಕಾರ ಸುಭದ್ರವಾಗಿದೆ. ಯಡಿಯೂರಪ್ಪ ಸದ್ಯದ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ಆಸೆ ಇಟ್ಟುಕೊಳ್ಳುವುದು ಒಳ್ಳೆಯದಲ್ಲ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.