ಶಿವಮೊಗ್ಗ ಜಿಲ್ಲೆಯಾದ್ಯಂತ ಸಡಗರ, ಸಂಭ್ರಮದ ಈದುಲ್ ಫತ್ರ್

Update: 2019-06-05 18:11 GMT

ಶಿವಮೊಗ್ಗ, ಜೂ. 5: ಶಾಂತಿ, ಪ್ರೀತಿ, ಮಾನವೀಯತೆಯ ಸಂಕೇತವಾದ ಈದುಲ್ ಫತ್ರ್ ಅನ್ನು ಬುಧವಾರ ಜಿಲ್ಲೆಯಾದ್ಯಂತ ಮುಸ್ಲಿಮರು ಅತ್ಯಂತ ಸಡಗರ-ಸಂಭ್ರಮ, ಭಕ್ತಿ-ಭಾವದಿಂದ ಆಚರಿಸಿದರು. 

ಶಿವಮೊಗ್ಗ ನಗರದ ಸವಳಂಗ ರಸ್ತೆಯ ಈದ್ಗಾ ಮೈದಾನದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ, ಸಾವಿರಾರು ಸಂಖ್ಯೆಯ ಮುಸ್ಲಿಮರು ಪಾಲ್ಗೊಂಡಿದ್ದರು. ವಿವಿಧ ರಾಜಕೀಯ ಪಕ್ಷ ಹಾಗೂ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು. ಪ್ರಾರ್ಥನೆಯ ನಂತರ ಧರ್ಮ ಗುರುಗಳು ಪ್ರವಚನ ನಡೆಸಿಕೊಟ್ಟರು. 

ತದನಂತರ ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದವರು, ಪರಸ್ಪರ ತಬ್ಬಿಕೊಂಡು ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡು ಸಂತಸಪಟ್ಟರು. ಅದರಲ್ಲಿಯೂ ಹೊಸ ಬಟ್ಟೆ ಧರಿಸಿ ಕಂಗೊಳಿಸುತ್ತಿದ್ದ ಪುಟಾಣಿ ಮಕ್ಕಳು ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದರು. ಅಲ್ಲದೇ, ನಗರದ ಸೋಮಿನಕೊಪ್ಪ, ಜೆ.ಪಿ.ನಗರ, ನ್ಯೂ ಮಂಡ್ಲಿ, ಸೂಳೇಬೈಲುಗಳಲ್ಲಿರುವ ಈದ್ಗಾ ಮೈದಾನಗಳಲ್ಲಿ ಸಾವಿರಾರು ಮುಸ್ಲಿಮರು ಜೊತೆಗೂಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. 

ಪ್ರವಚನ: ಹಬ್ಬದ ಹಿನ್ನೆಲೆಯಲ್ಲಿ ಮಸೀದಿಗಳಲ್ಲಿ ಮುಂಜಾನೆಯಿಂದಲೇ ವಿಶೇಷ ಪ್ರಾರ್ಥನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು. ಸಾವಿರಾರು ಮುಸ್ಲಿಮರು ಮಸೀದಿಗಳಿಗೆ ತೆರಳಿ ಪ್ರಾರ್ಥನೆಯನ್ನು ಸಲ್ಲಿಸಿದರು. ಬಹುತೇಕ ಮಸೀದಿಗಳು ಜನರಿಂದ ತುಂಬಿ ತುಳುಕುತ್ತಿದ್ದವು.  

ವಿಶೇಷ ಖಾದ್ಯ: ಹಬ್ಬದ ಹಿನ್ನಲೆಯಲ್ಲಿ ವಿಶೇಷ ಖಾದ್ಯಗಳನ್ನು ಮುಸ್ಲಿಂ ಧರ್ಮಿಯರು ತಮ್ಮ ಮನೆಗಳಲ್ಲಿ ತಯಾರಿಸಿದ್ದರು. ಕೆಲವರು ಬಂಧು-ಬಾಂಧವರು, ನೆರೆಹೊರೆಯವರು ಹಾಗೂ ಇತರೆ ಧರ್ಮಿಯರನ್ನು ತಮ್ಮ ಮನೆಗಳಿಗೆ ಆಹ್ವಾನಿಸಿ ಅವರೊಂದಿಗೆ ಭೋಜನ ಸವಿದರು. 

ಹಬ್ಬದ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧ ಪಕ್ಷಗಳ ಜನಪ್ರತಿನಿಧಿಗಳು, ಸಂಘಸಂಸ್ಥೆಗಳ ಮುಖಂಡರು ಮುಸ್ಲಿಮರಿಗೆ ಶುಭಾಶಯ ಕೋರಿದ್ದಾರೆ. ಶಾಂತಿ, ಮಾನವೀಯತೆಯ ಸಂಕೇತವಾದ ಈದುಲ್ ಫತ್ರ್ ಶುಭವನ್ನುಂಟು ಮಾಡಲಿ ಎಂದು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News