ಪ್ಲಾಸ್ಟಿಕ್ ರಹಿತ ಕೈಚೀಲ ತನ್ನಿ, ಉಚಿತ ಮೊಟ್ಟೆ ಪಡೆಯಿರಿ: ವ್ಯಾಪಾರಿಯಿಂದ ಹೀಗೊಂದು ಜನಜಾಗೃತಿ

Update: 2019-06-06 17:24 GMT

ಕಳಸ, ಜೂ.6: ಪ್ಲಾಸ್ಟಿಕ್ ರಹಿತ ಕೈಚೀಲ ತನ್ನಿ ಒಂದು ಮೊಟ್ಟೆ ಉಚಿತವಾಗಿ ಪಡೆದುಕೊಳ್ಳಿ, ಇದೇನಿದು ಹೊಸ ಜಾಹೀರಾತು ಎಂದುಕೊಳ್ಳಬೇಡಿ. ಕಳಸ ಪಟ್ಟಣದ ಜನತಾ ಸ್ಟೋರ್‌ನ ಮೊಟ್ಟೆ ವ್ಯಾಪಾರಿ ಟಿಟ್ಟು ಥೋಮಸ್ ಪ್ಲಾಸ್ಟಿಕ್ ಚೀಲ ಮುಕ್ತ ಪಟ್ಟಣಕ್ಕಾಗಿ ಇಂತಹ ವಿನೂತನ ಕೊಡುಗೆ ಇಟ್ಟಿದ್ದಾರೆ.

ಇವರ ಅಂಗಡಿಯಲ್ಲಿ ಗ್ರಾಹಕರು ಪ್ಲಾಸ್ಟಿಕ್ ರಹಿತ ಕೈಚೀಲವನ್ನು ತಂದು 20 ರೂ. ಮೊಟ್ಟೆಯನ್ನು ಖರೀದಿಸಿದರೆ ಒಂದು ಮೊಟ್ಟೆಯನ್ನು ಉಚಿತವಾಗಿ ನೀಡುತ್ತಾರಂತೆ. ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಇವರು ಪ್ಲಾಸ್ಟಿಕ್ ರಹಿತ ಪಟ್ಟಣ ಮಾಡುವ ಸಂಕಲ್ಪವನ್ನು ಮಾಡಿ ಇದರ ಮೊದಲ ಹೆಜ್ಜೆಯನ್ನು ವಿಶ್ವ ಪರಿಸರ ದಿನಾಚರಣೆಯಿಂದ ತಮ್ಮ ಅಂಗಡಿಗೆ ಬರುವ ಗ್ರಾಹಕರಿಗೆ ಇಂತಹ ಹೊಸ ಕೊಡುಗೆ ಇಟ್ಟಿದ್ದಾರೆ. ಈ ಬಗ್ಗೆ ಪೋಸ್ಟರ್ ಒಂದನ್ನು ತಯಾರಿಸಿ ಸಾಮಾಜಿಕ ವ್ಯಾಟ್‌ಆ್ಯಪ್, ಫೇಸ್‌ಬುಕ್‌ನಲ್ಲಿ ಹಾಕಿದ್ದಾರೆ. ಸಾಕಷ್ಟು ಜನ ಇದನ್ನು ಬೆಂಬಲಿಸಿರುವುದಲ್ಲದೆ ಟಿಟ್ಟು ಅವರ ಅಂಗಡಿಯಲ್ಲಿ ಮೊಟ್ಟೆ ಖರೀದಿಗೆ ಮುಗಿಬೀಳುತ್ತಿದ್ದಾರೆ.

ಪ್ಲಾಸ್ಟಿಕ್ ನಿರ್ಮೂಲನೆ ಮಾಡಲು ಅಸಾಧ್ಯ, ದೊಡ್ಡ ದೊಡ್ಡ ಪ್ಲಾಸ್ಟಿಕ್ ಕಂಪೆನಿಗಳ ಮೇಲೆ ಏನೂ ಮಾಡಲು ಅಸಾಧ್ಯ. ಅದಕ್ಕೆ ಜನರೇ ಎಚ್ಚೆತ್ತು ಪ್ಲಾಸ್ಟಿಕ್ ತೆಗೆದುಕೊಳ್ಳದಿದ್ದರೆ ಒಂದಷ್ಟು ಪ್ಲಾಸ್ಟಿಕ್ ಹಾವಳಿ ಕಡಿಮೆ ಆಗಬಹುದು. ಅದಕ್ಕಾಗಿ ಇಂತಹ ಕೊಡುಗೆ ಇಟ್ಟಿದ್ದೇನೆ. ಇಲ್ಲಿ ಬರುವ ನೂರು ಗ್ರಾಹಕರಲ್ಲಿ 50 ಜನ ಪ್ಲಾಸ್ಟಿಕ್ ರಹಿತ ಬ್ಯಾಗ್‌ನೊಂದಿಗೆ ಬಂದರೆ ಸ್ವಲ್ಪವಾದರೂ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಿದ ಅಳಿಲು ಸೇವೆ ನನ್ನದಾಗುತ್ತದೆ. ಇದೇ ರೀತಿ ಎಲ್ಲಾ ಅಂಗಡಿಯವರು ಮಾಡಿದರೆ ಒಂದಷ್ಟು ಪಟ್ಟಣದಲ್ಲಿ ಬದಲಾವಣೆ ಸಾಧ್ಯ ಎಂದು ಟಿಟ್ಟು ಥಾಮಸ್ ಅಭಿಪ್ರಾಯಿಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News