ಕಲಬುರ್ಗಿ ಹತ್ಯೆ ಪ್ರಕರಣ: ಕದ್ದ ಬೈಕ್ ಕೃತ್ಯಕ್ಕೆ ಬಳಸಿದ್ದ ಗಣೇಶ್ ಮಿಸ್ಕಿನ್

Update: 2019-06-07 14:45 GMT

ಧಾರವಾಡ/ಬೆಂಗಳೂರು, ಜೂ.7: ವಿಚಾರವಾದಿ, ಸಂಶೋಧಕ ಡಾ.ಎಂ.ಎಂ. ಕಲಬುರ್ಗಿ ಹತ್ಯೆ ಪ್ರಕರಣ ತನಿಖೆಯನ್ನು ಎಸ್‌ಐಟಿ ಅಧಿಕಾರಿಗಳು ತೀವ್ರಗೊಳಿಸಿದ್ದು, ವ್ಯಕ್ತಿಯೊಬ್ಬರ ಬೈಕ್ ಕದ್ದು, ಆರೋಪಿಗಳು ಕೃತ್ಯಕ್ಕೆ ಬಳಕೆ ಮಾಡಿರುವುದು ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.

ಪ್ರಕರಣದ ಪ್ರಮುಖ ಆರೋಪಿ ಎನ್ನಲಾದ ಗಣೇಶ್ ಮಿಸ್ಕಿನ್, ಬೈಕ್ ಕದ್ದು ಕೃತ್ಯವೆಸಗಿದ ನಂತರ ಹುಬ್ಬಳ್ಳಿ ಹೊರವಲಯದಲ್ಲಿ ಬಿಟ್ಟು ಪರಾರಿಯಾಗಿದ್ದ ಎಂದು ಹೇಳಲಾಗುತ್ತಿದೆ.

ಬೈಕ್ ಮಾಲಕ?: ಹುಬ್ಬಳ್ಳಿ ಮೂಲದ ಕರೀಂಸಾಬ್ ಎಂಬುವರು ಬೈಕ್‌ನ ಮೂಲ ಮಾಲಕರಾಗಿದ್ದಾರೆ. ತನ್ನ ಅಳಿಯ, ನವಲಗುಂದ ತಾಲೂಕಿನ ದೊಡ್ಡ ಮೊರಬದ ನಿವಾಸಿ ಬುಡ್ಡೇ ಸಾಬ್ ಎಂಬಾತನಿಗೆ ಕರೀಂ ಸಾಬ್ ಬೈಕ್ ನೀಡಿದ್ದರು. 2015ರ ಮೇ 3ರಂದು ಬುಡ್ಡೇ ಸಾಬ್ ಅವರು ಮದುವೆ ಕಾರ್ಯಕ್ರಮಕ್ಕೆ ಹೋಗಿ, ವಾಪಸ್ಸು ಆಗುತ್ತಿದ್ದ ವೇಳೆ, ತನ್ನ ಸ್ನೇಹಿತನ ಹೊಲಕ್ಕೆ ಹೋಗುವಾಗ ರಸ್ತೆಬದಿ ಬೈಕ್ ನಿಲ್ಲಿಸಿದ್ದರು.

ಈ ವೇಳೆ, ಗಣೇಶ್ ಮಿಸ್ಕಿನ್ ಬೈಕ್ ಕದ್ದು, ಸಂಖ್ಯಾ ಫಲಕ ಬದಲಾವಣೆ ಮಾಡಿ, ಕೃತ್ಯಕ್ಕೆ ಉಪಯೋಗ ಮಾಡಿಕೊಂಡಿದ್ದ ಎನ್ನುವ ಮಾಹಿತಿ ಬೆಳಕಿಗೆ ಬಂದಿದೆ. ತನಿಖೆ ವೇಳೆ, ಕರೀಂ ಸಾಬ್ ಅವರನ್ನು ವಿಚಾರಣೆಗೊಳಪಡಿಸಿದಾಗ, ಅವರು ಮೂಲ ಬೈಕ್ ಮಾಲಕರು ಎಂಬುವುದು ಗೊತ್ತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News