ಗ್ರಾಮ ವಾಸ್ತವ್ಯ ಮಾದರಿ ಕಾರ್ಯಕ್ರಮವಾಗಲಿ: ಸಚಿವ ಪ್ರಿಯಾಂಕ್ ಖರ್ಗೆ

Update: 2019-06-07 15:41 GMT

ಬೆಂಗಳೂರು, ಜೂ.7: ಗ್ರಾಮ ವಾಸ್ತವ್ಯವನ್ನು ಪುನರಾರಂಭಿಸಿರುವ ಮುಖ್ಯಮಂತ್ರಿಗಳನ್ನು ಅಭಿನಂದಿಸಿದ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಅವರು, ದೇಶಕ್ಕೇ ಮಾದರಿಯಾಗುವಂತಹ ಕಾರ್ಯಕ್ರಮ ಇದಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಗ್ರಾಮ ವಾಸ್ತವ್ಯದ ಪೂರ್ವ ಸಿದ್ಧತೆಗಳ ಬಗ್ಗೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಇಂದು ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಪ್ರಿಯಾಂಕ್ ಖರ್ಗೆ ಅವರು, ಮುಖ್ಯಮಂತ್ರಿಗಳು ಗ್ರಾಮ ವಾಸ್ತವ್ಯದ ಮೂಲಕ ಈಗಾಗಲೇ ಜನಪ್ರಿಯರಾಗಿದ್ದಾರೆ. ಹೈದರಾಬಾದ್ ಕರ್ನಾಟಕ ಮೂಲಕ ಮತ್ತೆ ಗ್ರಾಮ ವಾಸ್ತವ್ಯ ಆರಂಭಿಸಿರುವುದು ಸ್ವಾಗತಾರ್ಹ. ಈ ಕಾರ್ಯಕ್ರಮವನ್ನು ಶಿಸ್ತುಬದ್ಧವಾಗಿ ಏರ್ಪಡಿಸಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಮುಖ್ಯಮಂತ್ರಿಗಳು ವಾಸ್ತವ್ಯ ಮಾಡುವ ಗ್ರಾಮದ ಜೊತೆಗೆ ಸುತ್ತಮುತ್ತಲಿನ ಗ್ರಾಮಗಳ ಶಾಲೆಗಳಿಗೂ ಮೂಲಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ಸಭೆಯಲ್ಲಿ ಹಾಜರಿದ್ದ ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ, ಪಶುಸಂಗೋಪನಾ ಸಚಿವ ವೆಂಕಟರಾವ್ ನಾಡಗೌಡ ಮಾತನಾಡಿ, ಗ್ರಾಮ ವಾಸ್ತವ್ಯ ಒಂದು ವಿನೂತನವಾದ ಕಾರ್ಯಕ್ರಮ. ಜನರೊಂದಿಗೆ ನೇರ ಸಂಪರ್ಕಕ್ಕೆ ಇದು ಸಹಾಯಕ. ಈ ಹಿಂದೆ ಮುಖ್ಯಮಂತ್ರಿಗಳು ಗ್ರಾಮ ವಾಸ್ತವ್ಯ ಮಾಡಿದ ಸಂದರ್ಭದಲ್ಲಿ ಹಲವು ಯೋಜನೆಗಳು ರೂಪುಗೊಂಡಿದ್ದವು. ಜನರ ಆಶೋತ್ತರಗಳನ್ನು ಈಡೇರಿಸಲು ಜಿಲ್ಲಾಡಳಿತ ಸಜ್ಜಾಗಬೇಕು ಎಂದು ನುಡಿದರು.

ಸಭೆಯಲ್ಲಿ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಡಾ.ಎಸ್. ಸುಬ್ರಹ್ಮಣ್ಯ, ಹಿರಿಯ ಅಧಿಕಾರಿಗಳಾದ ಡಾ. ಇ.ವಿ.ರಮಣರೆಡ್ಡಿ, ಡಾ.ರಜನೀಶ್ ಗೋಯಲ್, ಎಲ್.ಕೆ.ಅತೀಕ್, ರಾಕೇಶ್ ಸಿಂಗ್, ಕುಮಾರ ನಾಯಕ್ ಅವರು ಮಾತನಾಡಿ, ಮುಖ್ಯಮಂತ್ರಿಗಳ ಗ್ರಾಮ ವಾಸ್ತವ್ಯಕ್ಕೆ ಪೂರ್ವಭಾವಿಯಾಗಿ ಸ್ಥಳ ಭೇಟಿ ಮಾಡಿ, ಜನ ಸಾಮಾನ್ಯರ ಸಮಸ್ಯೆಗಳನನ್ನು ಅರಿತು, ಪರಿಹಾರ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ತಮ್ಮ ಗ್ರಾಮ ವಾಸ್ತವ್ಯದ ನೆನಪುಗಳನ್ನು ಹಂಚಿಕೊಂಡ ಮುಖ್ಯಮಂತ್ರಿಗಳು ಆ ಸಂದರ್ಭದಲ್ಲಿ ಅನುಷ್ಠಾನಗೊಂಡ ಹಲವು ಯೋಜನೆಗಳನ್ನು ಸಭೆಯ ಗಮನಕ್ಕೆ ತಂದರು. ಸುವರ್ಣ ಗ್ರಾಮ ಯೋಜನೆ ಅತ್ಯಂತ ನಿರೀಕ್ಷಿತ ಯೋಜನೆಯಾಗಿ ರೂಪುಗೊಂಡಿತ್ತು. ಆದರೆ ನನ್ನ ಅವಧಿಯ ನಂತರ ನನ್ನ ಆಶಯಕ್ಕೆ ಅನುಗುಣವಾಗಿ ಸುವರ್ಣ ಗ್ರಾಮ ಯೋಜನೆ ರೂಪುಗೊಳ್ಳಲಿಲ್ಲ. ಅದಕ್ಕೆ ಮತ್ತೆ ಆ ಯೋಜನೆಗೆ ಜೀವ ಕೊಡಲು ಅಧಿಕಾರಿಗಳು ಸಜ್ಜಾಗಬೇಕು ಎಂದು ಸಲಹೆ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News