ಸೋಲನ್ನು ಸವಾಲಾಗಿ ಸ್ವೀಕರಿಸುತ್ತೇನೆ: ಎಚ್.ಡಿ.ದೇವೇಗೌಡ

Update: 2019-06-07 15:45 GMT

ಬೆಂಗಳೂರು, ಜೂ.7: ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಸೋಲನ್ನು ಒಪ್ಪಿಕೊಳ್ಳುತ್ತಲೆ ಪಕ್ಷವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖ ಆಗಬೇಕಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಿಳಿಸಿದ್ದಾರೆ.

ನಗರದಲ್ಲಿ ಮಾತನಾಡಿರುವ ಅವರು, ಬಿಜೆಪಿ 300ಕ್ಕೂ ಹೆಚ್ಚು ಸ್ಥಾನ ಗೆದ್ದಿರುವುದು ಮೋದಿ ಚಾಣಾಕ್ಷತನ ಅಂತ ನಾನು ಹೇಳಲ್ಲ. ಜನ ಬಿಜೆಪಿಯವರಿಗೆ ಮತ ಹಾಕಿದ್ದಾರೆ ಅಂತಷ್ಟೇ ಹೇಳಬಲ್ಲೆ. ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್, ಕಾಂಗ್ರೆಸ್‌ಗೆ ಒಂದೊಂದೇ ಸ್ಥಾನ ಬಂದಿದೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಎರಡನೇ ಸ್ಥಾನದಲ್ಲಿದೆ ಎಂದರು.

ನನ್ನ ಆರೋಗ್ಯ ಸರಿಯಿಲ್ಲ. ಆದರೂ. ಪಕ್ಷದ ಆರೋಗ್ಯ ಸರಿ ಮಾಡೋದು ನನ್ನ ಕೆಲಸ. ಸೋತರೂ ನಾನು ಸುಮ್ಮನೆ ಕೂತಿಲ್ಲ. ಸೋಲನ್ನ ಸವಾಲಾಗಿ ಸ್ವೀಕರಿಸುತ್ತೇನೆ. ಪಕ್ಷ ಸಂಘಟನೆಗೆ ವಯಸ್ಸು ಮುಖ್ಯವಲ್ಲ. ಪಕ್ಷ ಕಟ್ಟುವ ಶಕ್ತಿ ನನಗೆ ಇನ್ನೂ ಇದೆ. ಮತ್ತಷ್ಟು ಪಕ್ಷ ಸಂಘಟನೆ ಮಾಡೋಣ ಎಂದು ಪಕ್ಷದ ಕಾರ್ಯಕರ್ತರಿಗೆ ಅವರು ಕರೆ ನೀಡಿದರು.

ರೈಲಿನಲ್ಲಿ ಮಲಗಿಕೊಂಡು ದೆಹಲಿಗೆ ಹೋದವನು ನಾನು. ನನ್ನ ರೈತರನ್ನು ನಾನು ಯಾವತ್ತೂ ಬಿಟ್ಟುಕೊಟ್ಟಿಲ್ಲ. ಕೆಲವರು ಹಸಿರು ಟವೆಲನ್ನು  ಕೈಯ್ಯಲ್ಲಿಡಿದುಕೊಂಡು ತಿರುಗಿಸುತ್ತಾರೆ. ನಮ್ಮ ಪಕ್ಷದಲ್ಲಿ ತಿಂದು ಬೆಳೆದವರೇ ನಮಗೆ ಉಪದೇಶ ಮಾಡುತ್ತಾರೆ. ಪಕ್ಷ ಕಟ್ಟೋದು ನನ್ನ ಜವಾಬ್ದಾರಿ. ಎಲ್ಲಾ ವರ್ಗಗಳಿಗೂ 10-15 ಕೋಟಿ ರೂ.ಅನುದಾನ ನೀಡಿ ಎಂದು ಮೈತ್ರಿ ಸರಕಾರಕ್ಕೆ ಅವರು ಸೂಚಿಸಿದರು.

ಲಿಂಗಾಯತರಿಗೆ ನಾನು ಕೊಟ್ಟಷ್ಟು ಅವಕಾಶ ಯಾರು ಕೊಟ್ಟಿದ್ದಾರೆ. ಸಂಪುಟದಲ್ಲಿ ನಾನು ಅವಕಾಶ ಕೊಟ್ಟಿದ್ದೇನೆ. ಅವರ ಜೀವಮಾನದಲ್ಲಿ ಸಿಗದಷ್ಟು ಅವಕಾಶ ಕೊಟ್ಟಿದ್ದೇನೆ. ಆದರೂ ಲಿಂಗಾಯತರು ಜೆಡಿಎಸ್‌ಗೆ ಕೈಕೊಟ್ಟರು.

-ಎಚ್.ಡಿ.ದೇವೇಗೌಡ, ಜೆಡಿಎಸ್ ವರಿಷ್ಠ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News