ಗೌಡರ ಸೋಲನ್ನೆ ಹೆಚ್ಚು ಪ್ರಚಾರ ಮಾಡುವ ಅಗತ್ಯವಿಲ್ಲ: ಮಾಜಿ ಶಾಸಕ ಕೆ.ಎನ್.ರಾಜಣ್ಣ

Update: 2019-06-07 15:50 GMT

ಬೆಂಗಳೂರು, ಜೂ.7: ಭಿನ್ನಮತ ಮರೆತು ಒಂದಾಗಿ ಪಕ್ಷ ಸಂಘಟನೆ ಮಾಡಲು ನಾನು ಬದ್ಧ. ನನ್ನ ಮಾತುಗಳಿಂದ ಯಾರಿಗಾದರೂ ವೈಯಕ್ತಿಕವಾಗಿ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುವೆ ಎಂದು ಮಾಜಿ ಶಾಸಕ ಕೆ.ಎನ್.ರಾಜಣ್ಣ ಇಂದಿಲ್ಲಿ ಸ್ಪಷ್ಟಣೆ ನೀಡಿದ್ದಾರೆ.

ಶುಕ್ರವಾರ ಕೆಪಿಸಿಸಿ ಕಚೇರಿಯಲ್ಲಿ ಅಧ್ಯಕ್ಷರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ ಬಳಿಕ ಮಾತನಾಡಿದ ಅವರು, ಪಕ್ಷದ ಯಾವುದೇ ಮುಖಂಡರ ಬಗ್ಗೆ ನಾನು ಕೀಳು ಭಾಷೆ ಬಳಸಿ ಮಾತನಾಡಿಲ್ಲ. ಅಂತಹ ವ್ಯಕ್ತಿ ನಾನಲ್ಲ. ರಾಜಕೀಯವಾಗಿ ನಾನೆಂದೂ ಆ ರೀತಿಯಲ್ಲಿ ನಡೆದುಕೊಂಡಿಲ್ಲ ಎಂದರು.

ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮತ್ತು ನಾನು 52 ವರ್ಷಗಳಿಂದಲೂ ಸ್ನೇಹಿತರು. ಹಲವು ಬಾರಿ ಜಗಳವಾಡಿದ್ದೇವೆ, ಒಂದಾಗಿದ್ದೇವೆ. ಆದರೆ, ಇದನ್ನು ಹಿಂಬಾಲಕರು ಅರ್ಥ ಮಾಡಿಕೊಳ್ಳಬೇಕು. ಇತ್ತೀಚಿನ ಬೆಳವಣಿಗೆಗಳ ಬಗ್ಗೆ ನಾವಿಬ್ಬರು ಕೂತು ಬಗೆಹರಿಸಿಕೊಳ್ಳುತ್ತೇವೆ. ಅನಗತ್ಯವಾಗಿ ಗೊಂದಲ ಸಲ್ಲ ಎಂದು ಆಕ್ಷೇಪಿಸಿದರು.

ಒತ್ತು ಕೊಡುವ ಅಗತ್ಯವಿಲ್ಲ: ಚುನಾವಣೆಯಲ್ಲಿ ಸೋಲು ಕಂಡ ತಕ್ಷಣ ಪಕ್ಷದ ಭವಿಷ್ಯವೇ ಮುಗಿದು ಹೋಯಿತು ಎಂಬ ಹತಾಶೆ ಬೇಡ. ತುಮಕೂರಿನಲ್ಲಿ ಮಾಜಿ ಪ್ರಧಾನಿ ಅವರನ್ನು ಸೋಲಿಸಿದ್ದಕ್ಕೆ ಹೆಚ್ಚಿನ ಒತ್ತು ಕೊಡುವ ಅಗತ್ಯವಿಲ್ಲ. ಅವರೇನೂ ಆಕಾಶದಿಂದ ಇಳಿದುಬಂದಿಲ್ಲ. ರಾಜ್ಯದಲ್ಲಿ ಎಲ್ಲರೂ ಸೋತಿದ್ದಾರೆ. ಕೋಲಾರದಲ್ಲಿ ಕೆ.ಎಚ್.ಮುನಿಯಪ್ಪ, ಚಿಕ್ಕಬಳ್ಳಾಪುರದಲ್ಲಿ ವೀರಪ್ಪ ಮೊಯ್ಲಿ, ಕಲಬುರಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಸೇರಿ ಬಹಳಷ್ಟು ಮಂದಿ ಸೋಲುಕಂಡಿದ್ದಾರೆ. ಆದರೆ, ಎಲ್ಲರನ್ನು ಬಿಟ್ಟು ದೇವೇಗೌಡರ ಸೋಲನ್ನೆ ಹೆಚ್ಚು ಪ್ರಚಾರ ಮಾಡುವ ಅಗತ್ಯವಿಲ್ಲ ಎಂದರು.

ನಾನು ಎಲ್ಲಿಯೂ ಮೈತ್ರಿ ಅಭ್ಯರ್ಥಿ ವಿರುದ್ಧ ಕೆಲಸ ಮಾಡಿಲ್ಲ. ಗೌಡರು ಹಲವು ಬಾರಿ ಸೋತಿದ್ದಾರೆ, ಗೆದ್ದಿದ್ದಾರೆ. ಸೋತ ತಕ್ಷಣ ಅವರು ಮನೆಯಲ್ಲಿ ಕುಳಿತುಕೊಂಡ ಉದಾರಹಣೆ ಇಲ್ಲ. ಪದೇ ಪದೇ ತುಮಕೂರು ಕ್ಷೇತ್ರದ ಫಲಿತಾಂಶವನ್ನೆ ಚರ್ಚೆ ಮಾಡುವುದು ಬೇಡ. ಫಲಿತಾಂಶದ ಬಳಿಕ ಅಪೆಕ್ಸ್ ಬ್ಯಾಂಕ್ ವಿರುದ್ಧ ತನಿಖೆಗೆ ಆದೇಶಿಸಲಾಗಿದೆ. ಕೋರ್ಟ್‌ನಲ್ಲಿ ತಡೆಯಾಜ್ಞೆ ತರುವ ಮೂಲಕ ತನಿಖೆಗೆ ಅಡ್ಡಿಪಡಿಸಬಹುದಿತ್ತು. ಒಂದು ವೇಳೆ ಹಾಗೆ ಮಾಡಿದ್ದರೆ ರಾಜಣ್ಣ ಲೂಟಿ ಹೊಡೆದಿದ್ದಾನೆ. ಅದಕ್ಕಾಗಿ ಅಡ್ಡಿಪಡಿಸುತ್ತಿದ್ದಾನೆಂಬ ಭಾವನೆ ಬರುವುದು ಬೇಡ ಎಂಬ ಕಾರಣಕ್ಕಾಗಿ ನಾನು ಸುಮ್ಮನಿದ್ದೇನೆ. ತನಿಖೆಗೆ ಅಗತ್ಯವಾದ ಎಲ್ಲ ರೀತಿಯ ಸಹಕಾರ ನೀಡಿದ್ದೇನೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News