ಜೂನ್ 21 ರಿಂದ ಸಿಎಂ ಗ್ರಾಮ ವಾಸ್ತವ್ಯ: ಪೂರ್ವತಯಾರಿಗೆ ಅಧಿಕಾರಿಗಳಿಗೆ ಸೂಚನೆ
ಬೆಂಗಳೂರು, ಜೂ.7: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯ ಮಹತ್ವಾಕಾಂಕ್ಷೆಯ ಗ್ರಾಮ ವಾಸ್ತವ್ಯ ಕಾರ್ಯಕ್ರಮವು ಜೂ.21ರಿಂದ ಯಾದಗಿರಿಯ ಗುರುಮಿಠ್ಕಲ್‌ನಿಂದ ಪ್ರಾರಂಭವಾಗಲಿದೆ.
ಶುಕ್ರವಾರ ಮುಖ್ಯಮಂತ್ರಿ ಗೃಹಕಚೇರಿ ಕೃಷ್ಣಾದಲ್ಲಿ ಗ್ರಾಮವಾಸ್ತವ್ಯಕ್ಕೆ ಸಂಬಂಧಿಸಿದಂತೆ ಸಚಿವರು, ಅಧಿಕಾರಿಗಳೊಂದಿಗೆ ಪೂರ್ವಭಾವಿ ಚರ್ಚೆ ನಡೆಸಲಾಯಿತು. ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದ ಸಮಸ್ಯೆಗಳು, ಅದನ್ನು ನಿವಾರಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚಿಂತನೆ ನಡೆಸಲಾಗಿದೆ. ಈ ಬಾರಿ ಗ್ರಾಮ ವಾಸ್ತವ್ಯ ಬೆಳಗ್ಗೆ 10ಕ್ಕೆ ಆರಂಭಗೊಳ್ಳುತ್ತದೆ. ಜಿಲ್ಲಾಧಿಕಾರಿ ಸೇರಿ ಎಲ್ಲಾ ಅಧಿಕಾರಿಗಳು ಅಲ್ಲಿರುತ್ತಾರೆ. ಜಿಲ್ಲೆಯ ಎಲ್ಲರ ಸಮಸ್ಯೆಗಳಿಗೂ ಪರಿಹಾರ ದೊರಕಿಸಿಕೊಡುವ ಪ್ರಯತ್ನ ಮಾಡುವ ನಿಟ್ಟಿನಲ್ಲಿ ಪೂರ್ವ ತಯಾರಿ ಮಾಡಿಕೊಳ್ಳಬೇಕೆಂದು ಸಂಬಂಧಿಸಿದ ಜಿಲ್ಲಾಧಿಕಾರಿಗಳು, ಇಲಾಖಾ ಅಧಿಕಾರಿಗಳಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೂಚಿಸಿದ್ದಾರೆ.
ಗ್ರಾಮ ವಾಸ್ತವ್ಯದ ಕುರಿತು ಪ್ರತಿಕ್ರಿಯಿಸಿದ ಎಚ್.ಡಿ.ಕುಮಾರಸ್ವಾಮಿ, ಈ ಹಿಂದೆ ಗ್ರಾಮ ವಾಸ್ತವ್ಯದಲ್ಲಿ ಸಾಕಷ್ಟು ಕೆಲಸ ಮಾಡಿದ್ದೇವೆ. ತಡ ರಾತ್ರಿವರೆಗೂ ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ. ಎಡನೇ ಬಾರಿ ನನಗೆ ಹೃದಯ ಶಸ್ತ್ರ ಚಿಕಿತ್ಸೆಯಾದಾಗ ವೈದ್ಯರ ಸಲಹೆಯಂತೆ ಗ್ರಾಮ ವಾಸ್ತವ್ಯ ನಿಲ್ಲಿಸಲಾಗಿತ್ತು ಎಂದು ಹೇಳಿದರು.
ಗುರುಮಿಠ್ಕಲ್, ಅಫ್ಜಲ್ ಪುರ, ಸಿಂಧನೂರು, ಬಸವಕಲ್ಯಾಣದ ಶಾಲೆಯಲ್ಲಿ ವಾಸ್ತವ್ಯ ಮಾಡುತ್ತಿದ್ದೇನೆ. ನಾನು ಯಾರನ್ನು ಮೆಚ್ಚಿಸಲು ಈ ಕಾರ್ಯಕ್ರಮ ಮಾಡುತ್ತಿಲ್ಲ. ಸುವರ್ಣ ಗ್ರಾಮೋದಯ ಯೋಜನೆ, ರೈತರ ಸಾಲದಂತಹ ಯೋಜನೆಗಳು ಜಾರಿಗೆ ಬಂದಿದ್ದು ಗ್ರಾಮ ವಾಸ್ತವ್ಯದಿಂದ ಎಂಬುದನ್ನು ಗ್ರಾಮ ವಾಸ್ತವ್ಯದ ಬಗ್ಗೆ ಆಕ್ಷೇಪ ಮಾಡುವವರು ಅರ್ಥ ಮಾಡಿಕೊಳ್ಳಬೇಕೆಂದು ಅವರು ಹೇಳಿದರು.
ಮನೆಯಲ್ಲಿ, ಸ್ಟಾರ್ ಹೊಟೇಲ್ ನಲ್ಲಿ ನಿದ್ದೆ ಬರುತ್ತಿಲ್ಲ ಎಂದು ನನ್ನ ಕಾರ್ಯಕ್ರಮಗಳ ಬಗ್ಗೆ ಲಘುವಾಗಿ ಮಾತನಾಡುವುದನ್ನು ಬಿಡಿ ಎಂದು ವಿರೋಧಿಗಳ ಟೀಕೆಗೆ ಉತ್ತರಿಸಿದ ಅವರು, ನಾನು ಸರಕಾರಿ ಶಾಲೆಯಲ್ಲಿ ವಾಸ್ತವ್ಯ ಹೂಡುತ್ತಿದ್ದೇನೆ, ಅಲ್ಲಿ ತಂಗುವುದರಿಂದ ಶಾಲೆಯ ಮೂಲ ಸೌಲಭ್ಯಗಳು ವೃದ್ಧಿಯಾಗಲಿವೆ ಎಂದರು.
ಗ್ರಾಮ ವಾಸ್ತವ್ಯ ಎಲ್ಲಿ- ಯಾವಾಗ ?
ಜೂ.21ರಂದು ಯಾದಗಿರಿ ಜಿಲ್ಲೆಯ ಗುರುಮಿಠ್ಕಲ್ ಜೂ.22ರಂದು ಕಲಬುರ್ಗಿ ಜಿಲ್ಲೆಯ ಅಪ್ಜಲ್‌ಪುರ ಜೂ.28ರಂದು ರಾಯಚೂರು ಜಿಲ್ಲೆಯ ಸಿಂಧನೂರು ಜೂ.29ರಂದು ಬೀದರ್ ಜಿಲ್ಲೆಯ ಬಸವಕಲ್ಯಾಣ