ನಮ್ಮ ಮೆಟ್ರೋಗೆ ಸಾಲದ ಭರವಸೆ: ಬಿಎಂಆರ್‌ಸಿಎಲ್ ಜೊತೆ ಎಐಐಬಿ ಒಪ್ಪಂದಕ್ಕೆ ಸಹಿ

Update: 2019-06-07 16:26 GMT

ಬೆಂಗಳೂರು, ಜೂ.7: ನಮ್ಮ ಮೆಟ್ರೋ ಎರಡನೇ ಹಂತದ ಯೋಜನೆಗೆ ಆರ್ಥಿಕ ನೆರವು ನೀಡಲು ಏಷಿಯನ್ ಇನ್‌ಫ್ರಾಸ್ಟ್ರಕ್ಚರ್ ಇನ್‌ವೆಸ್ಟ್‌ಮೆಂಟ್ ಬ್ಯಾಂಕ್ (ಎಐಐಬಿ) ಮುಂದೆ ಬಂದಿದ್ದು, ಈ ಸಂಬಂಧ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ಜತೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.

ಎರಡನೇ ಹಂತದಲ್ಲಿ ಬರುವ ರೀಚ್-6 (ಗೊಟ್ಟಿಗೆರೆ-ನಾಗವಾರ) ಒಂದು ಭಾಗದ ಯೋಜನೆಗೆ ಯೂರೋಪಿಯನ್ ಇನ್‌ವೆಸ್ಟ್‌ಮೆಂಟ್ ಬ್ಯಾಂಕ್ (ಇಐಬಿ) ಸಹಯೋಗದಲ್ಲಿ ಎಐಐಬಿ 335 ಮಿಲಿಯನ್ ಯೂರೊ ಅಂದರೆ ಅಂದಾಜು ಮೂರು ಸಾವಿರ ಕೋಟಿ ರೂ. ಸಾಲ ನೀಡಲು ಮುಂದೆ ಬಂದಿದೆ. ಇದರೊಂದಿಗೆ ಉದ್ದೇಶಿತ ಸುರಂಗ ಮಾರ್ಗಕ್ಕೆ ವಿದೇಶಿ ಬ್ಯಾಂಕುಗಳಿಂದ ಬಿಎಂಆರ್‌ಸಿಗೆ ಒಟ್ಟಾರೆ 7,300 ಕೋಟಿ ರೂ. ಸಾಲದ ಭರವಸೆ ದೊರಕಿದೆ.

ಸಾಲದ ಯೋಜನಾ ಒಪ್ಪಂದಕ್ಕೆ ಈಚೆಗೆ ಬಿಎಂಆರ್‌ಸಿ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಠ್ ಹಾಗೂ ಎಐಐಬಿ ಮಹಾನಿರ್ದೇಶಕ ಸುಪಿ ತೆರವಣಿನ್‌ಥಾರ್ನ್ ಪರಸ್ಪರ ಸಹಿ ಹಾಕಿದ್ದಾರೆ.

ಗೊಟ್ಟಿಗೆರೆ-ನಾಗವಾರ ಮೆಟ್ರೋ ಸುರಂಗ ಮಾರ್ಗಕ್ಕೆ ಯೂರೋಪಿಯನ್ ಇನ್‌ವೆಸ್ಟ್‌ಮೆಂಟ್ ಬ್ಯಾಂಕ್ (ಇಐಬಿ) 500 ಮಿಲಿಯನ್ ಯೂರೊ ಸಾಲ ನೀಡಲು ಮುಂದೆ ಬಂದಿದ್ದು, 2017ರ ಅಕ್ಟೋಬರ್ ಹಾಗೂ 2018ರ ಸೆಪ್ಟೆಂಬರ್‌ನಲ್ಲೆ ಈ ಸಂಬಂಧ ಒಡಂಬಡಿಕೆಯೂ ಆಗಿದೆ. ಅದರಂತೆ ಮೊದಲ ಹಂತದಲ್ಲಿ 300 ಮಿಲಿಯನ್ ಹಾಗೂ ಎರಡನೇ ಹಂತದಲ್ಲಿ 200 ಮಿಲಿಯನ್ ಯೂರೊ ಈ ಬ್ಯಾಂಕ್‌ನಿಂದ ಬರಲಿದೆ.

ಎರಡನೇ ಹಂತದ ನಮ್ಮ ಮೆಟ್ರೋ ಯೋಜನೆ 26,405 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿದೆ. ಇದರಲ್ಲಿ 12,141 ಕೋಟಿ ರೂ. ಸಾಲದ ರೂಪದಲ್ಲಿ ಬಿಎಂಆರ್‌ಸಿ ಕ್ರೋಡೀಕರಿಸಬೇಕಿದ್ದು, ಉಳಿದದ್ದು ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಬರಲಿದೆ. ಈಗ 7,300 ಕೋಟಿ ರೂ. ಸಾಲದ ಭರವಸೆ ಸಿಕ್ಕಿದೆ. ಉಳಿದ ಹಣವನ್ನು ಮುಂದಿನ ದಿನಗಳಲ್ಲಿ ಹೊಂದಿಸಲಾಗುವುದು ಎಂದು ನಿಗಮದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News