×
Ad

"ಮೈಸೂರಿನಲ್ಲಿ ನಿಪಾಹ್ ವೈರಸ್ ಪತ್ತೆಯಾಗಿಲ್ಲ, ಆತಂಕ ಬೇಡ"

Update: 2019-06-07 22:29 IST

ಮೈಸೂರು, ಜೂ.7: ಕೇರಳದಲ್ಲಿ ನಿಪಾಹ್ ವೈರಸ್ ಪತ್ತೆಯಾಗಿದೆ. ಅದಕ್ಕೆ ಮೈಸೂರಿನ ಜನತೆ ಆತಂಕ ಪಡುತ್ತಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ಇದುವರೆಗೂ ನಿಪಾಹ್ ವೈರಸ್ ಪ್ರಕರಣ ಪತ್ತೆಯಾಗಿಲ್ಲ. ಹೀಗಾಗಿ ಸಾರ್ವಜನಿಕರು ಅನಗತ್ಯವಾಗಿ ಆತಂಕ ಪಡಬೇಕಿಲ್ಲ ಎಂದು ಮೈಸೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೆಂಕಟೇಶ್ ಸ್ಪಷ್ಟನೆ ನೀಡಿದರು.

ಮೈಸೂರಿನ ನಜರ್ ಬಾದ್ ನಲ್ಲಿರುವ ತಮ್ಮ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಮೈಸೂರಿನಲ್ಲಿ ಇದುವರೆಗೆ ಯಾರೊಬ್ಬರಲ್ಲೂ ಸೋಂಕು ಕಾಣಿಸಿಕೊಂಡಿರುವುದು ಪತ್ತೆಯಾಗಿಲ್ಲ. ನಿಪಾಹ್ ವೈರಸ್ ಸೋಂಕಿತರು ಎಂದು ಗುರುತಿಸಿಲ್ಲ. ಆದ್ದರಿಂದ ಸಾರ್ವಜನಿಕರು ಅನಗತ್ಯವಾಗಿ ಆತಂಕ ಪಡಬೇಕಿಲ್ಲ. ಮೈಸೂರು ಪ್ರವಾಸೋದ್ಯಮ ತಾಣವಾಗಿದ್ದು, ಕೇರಳ ರಾಜ್ಯದಿಂದ ಬರುವ ಪ್ರವಾಸಿಗರ ಮೇಲೆ ಹೆಚ್ಚಿನ ನಿಗಾ ವಹಿಸಲಾಗುವುದು. ಮೈಸೂರು ಅರಮನೆ, ಮೃಗಾಲಯ, ಚಾಮುಂಡಿ ಬೆಟ್ಟ ಸೇರಿದಂತೆ ಹೆಚ್ಚಿನ ಸ್ಥಳಗಳಿಗೆ ಬರುವ ಪ್ರವಾಸಿಗರನ್ನು ತಪಾಸಣೆಗೆ ಒಳಪಡಿಸಲಾಗುವುದು. ನಿಪಾಹ್ ವೈರಸ್ ಲಕ್ಷಣಗಳು ಇರುವ ಪ್ರವಾಸಿಗರು ಜಿಲ್ಲಾಸ್ಪತ್ರೆ ಅಥವಾ ಖಾಸಗಿ ಆಸ್ಪತ್ರೆಗಳಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಮನವಿ ಮಾಡುತ್ತೇವೆ ಎಂದು ತಿಳಿಸಿದರು.

ಎಲ್ಲಾ ಬಾವಲಿಗಳಿಂದ ಈ ರೋಗ ಬರಲ್ಲ. ಕೆಲವು ಸೋಂಕು ಇರುವ ಬಾವಲಿಗಳಿಂದ ಸೋಂಕು ತಗುಲಲಿದೆ. ಬೆನ್ನಿನಿಂದ ನೀರನ್ನು ತೆಗೆದ ಸ್ಯಾಂಪಲ್ಸ್ ಗಳನ್ನು ಪುಣೆಯಲ್ಲಿರುವ ಎನ್ಐವಿ ಲ್ಯಾಬ್ ಗೆ ಕಳಿಸಲಾಗುವುದು. ಮೈಸೂರು ಜಿಲ್ಲೆಯಲ್ಲಿ ನಿಪಾಹ್ ಬಗ್ಗೆ ಯಾವುದೇ ವರದಿಯೂ ಇಲ್ಲ. ನಿಪಾಹ್ ವೈರಸ್ ಇದ್ದಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿ ಅವರೇ ಅಧಿಕೃತ ಘೋಷಣೆ ಮಾಡುತ್ತೇವೆ. ಅಧಿಕೃತ ಘೋಷಣೆಯಿಲ್ಲದ ಯಾವುದೇ ಮಾಹಿತಿ ನಂಬಬೇಡಿ ಎಂದು ತಿಳಿಸಿದರು.

ಕೇರಳದಿಂದ ಬರುವವರು ನಿಪಾಹ್ ಜ್ವರದ ಸೋಂಕು ತಗುಲಿದೆಯೇ ಎಂದು ಚಿಕಿತ್ಸೆ ಪಡೆದುಕೊಳ್ಳಬಹುದು. ಸೋಮವಾರದಿಂದ ಸೋಂಕಿನ ಕುರಿತು ಜಾಗೃತಿ ಮೂಡಿಸಲಾಗುವುದು. ಹೆಚ್.ಡಿ.ಕೋಟೆ ಭಾಗದಲ್ಲಿ ಜ್ವರ ಹಾಗೂ ತಲೆ ನೋವು, ಶೀತ ಇತ್ಯಾದಿ ಇರುವವರ ಮೇಲೆ ಈಗ ನಿಗಾ ವಹಿಸಲಾಗಿದೆ ಎಂದು ವೆಂಕಟೇಶ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News