ಮುಂಗಾರು ಮಳೆ: ಕೊಡಗು ಜಿಲ್ಲಾಡಳಿತದಿಂದ ಮುಂಜಾಗೃತಾ ಕ್ರಮ

Update: 2019-06-07 17:05 GMT

ಮಡಿಕೇರಿ, ಜೂ.7: ಎಲ್ಲರಿಗೂ ತಿಳಿದಿರುವಂತೆ ಜಿಲ್ಲಾಡಳಿತವು ಈ ಬಾರಿಯ ಮುಂಗಾರು ಮಳೆಯಿಂದಾಗಿ ಸಂಭವಿಸಬಹುದಾದ ಜೀವಹಾನಿ ಮತ್ತು ಪ್ರಾಣಹಾನಿಯನ್ನು ತಡೆಯಲು ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಯಾವುದೇ ಅನಾಹುತವನ್ನು ಎದುರಿಸಲು ಸನ್ನದ್ದಗೊಳ್ಳುತ್ತಿದೆ. 

2018ರಲ್ಲಿ ಕೊಡಗಿನಲ್ಲಾದ ವಿಕೋಪದ ಸಂದರ್ಭದಲ್ಲಿ ಸರ್ಕಾರೇತರ ಸಂಘ ಸಂಸ್ಥೆಗಳ ಸೇವೆ ಶ್ಲಾಘನೀಯ. ಈ ಬಾರಿ ಜಿಲ್ಲಾಡಳಿತ ಮತ್ತು ಸರ್ಕಾರೇತರ ಸಂಘ ಸಂಸ್ಥೆಗಳು ಜೊತೆಯಾಗಿ ಸಿದ್ದತೆ ಮಾಡಿಕೊಳ್ಳಬೇಕೆಂಬುದು ಜಿಲ್ಲಾಡಳಿತದ ಆಶಯ. ಈ ನಿಟ್ಟಿನಲ್ಲಿ ಸರ್ಕಾರೇತರ ಸಂಘ ಸಂಸ್ಥೆಗಳೊಂದಿಗೆ ಮುಕ್ತ ಮನಸ್ಸಿನಿಂದ ಚರ್ಚಿಸಲು ಜಿಲ್ಲಾಡಳಿತ ವತಿಯಿಂದ ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಜೂನ್, 14 ರಂದು ಬೆಳಗ್ಗೆ 9.30 ಗಂಟೆಯಿಂದ ಸಂಜೆ 4.30 ರವರೆಗೆ ‘ಒಂದು ದಿನದ ಸವಾಲುಗಳು ಮತ್ತು ಮುಂದಿನ ದಾರಿ’ ಎಂಬ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. 

ಕಳೆದ ಬಾರಿ ವಿಕೋಪದ ಸಂದರ್ಭದಲ್ಲಿ ತನು ಮನ ಧನಗಳೊಂದಿಗೆ ತೊಡಗಿಸಿಕೊಂಡ ಎಲ್ಲಾ ಸಂಘ ಸಂಸ್ಥೆಗಳು ಈ ಕಾರ್ಯಾಗಾರಕ್ಕೆ ನೊಂದಣಿ ಮಾಡಿಕೊಂಡು ಚರ್ಚೆಯಲ್ಲಿ ಭಾಗವಹಿಸಿ ಜಿಲ್ಲಾ ವಿಕೋಪ ನಿರ್ವಹಣಾ ಯೋಜನೆಯ ತಯಾರಿಯಲ್ಲಿ ಭಾಗಿಯಾಗಬೇಕೆಂದು ಕೋರಿದೆ. 
ನೊಂದಾಯಿಸಿಲು ಬಯಸುವವರು ಯುನಿಸೆಫ್ ಸಮಾಲೋಚಕರಾದ ಪ್ರಭಾತ್ ಎಂ., ಬೆಂಬಲಿತ ಸಮಗ್ರ ಕೊಡಗು ಸ್ಪಂದನೆ ಯೋಜನೆ, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ಕೊಡಗು ಮೊಬೈಲ್ ಸಂಖ್ಯೆ :09886733380 ನ್ನು ಸಂಪರ್ಕಿಸಿ ಸಂಸ್ಥೆಯ ಹೆಸರು, ವಿಳಾಸ, ನೊಂದಣಿ ಸಂಖ್ಯೆ, ಸಂಪರ್ಕಿಸಬೇಕಾದವರ ಹೆಸರು ಮತ್ತು ವಿಳಾಸವನ್ನು ಜೂನ್, 13 ರೊಳಗೆ ನೊಂದಾಯಿಸಬೇಕೆಂದು ಕೋರಿದೆ. ಒಂದು ಸಂಸ್ಥೆಯಿಂದ ಕೇವಲ 2 ಜನರಿಗೆ ಪ್ರತಿನಿಧಿಸಲು ಅವಕಾಶ ಕಲ್ಪಿಸಲಾಗುವುದು. ನೊಂದಣಿಯನ್ನನ್ನುಸರಿಸಿ ಕಾರ್ಯಾಗಾರದ ಹೆಚ್ಚಿನ ರೂಪುರೇಷೆಯನ್ನು ನಿರ್ಧರಿಸಲಾಗುವುದು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News