ಸಂತ್ರಸ್ತರಿಗೆ ಶೀಘ್ರ ಮನೆಗಳನ್ನು ಹಸ್ತಾಂತರಿಸಿ: ಸಚಿವ ಸಾ.ರಾ.ಮಹೇಶ್ ಸೂಚನೆ

Update: 2019-06-07 17:10 GMT

ಮಡಿಕೇರಿ, ಜೂ.7: ಅತೀವೃಷ್ಟಿಯಿಂದ ಮನೆ ಕಳೆದುಕೊಂಡವರಿಗೆ ನೀಡಲಾಗುವ ಮನೆಗಳ ವಿತರಣೆಗೆ ತಯಾರಿಸಿರುವ ಪಟ್ಟಿಗಳನ್ನು ಎಲ್ಲಾ ಗ್ರಾಮ ಪಂಚಾಯತ್ ಗಳಲ್ಲಿ ಎರಡು ದಿನದೊಳಗೆ ಪ್ರಕಟಿಸಲು ಪ್ರವಾಸೋದ್ಯಮ ಮತ್ತು ರೇಷ್ಮೆ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಸಾ.ರಾ.ಮಹೇಶ್ ಅವರು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದರು.

ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಶುಕ್ರವಾರ ನಡೆದ ಕೊಡಗು ನೆರೆ ಪರಿಹಾರ ವಿತರಣೆಗೆ ಸಂಬಂಧಿಸಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಸಂಪೂರ್ಣ ಮನೆ ಕಳೆದುಕೊಂಡವರ ಮೊದಲನೇ ಪಟ್ಟಿಯಲ್ಲಿ ಆಯ್ಕೆಯಾಗಿರುವ ಅರ್ಹ ಫಲಾನುಭವಿಗಳ ಪಟ್ಟಿಯನ್ನು ಹಾಗೂ ಭಾಗಶಃ ಮನೆ ಕಳೆದುಕೊಂಡವರ ಎರಡನೇ ಪಟ್ಟಿಯನ್ನು ಶಾಸಕರಿಗೆ ತಲುಪಿಸಿ ಹಾಗೂ ಇದರಲ್ಲಿ ಯಾವುದಾದರೂ ಅರ್ಹ ಫಲಾನುಭವಿಗಳ ಹೆಸರು ಬಿಟ್ಟು ಹೋದ ಸಂದರ್ಭದಲ್ಲಿ ಜೂನ್ ತಿಂಗಳ ಅಂತ್ಯದೊಳಗೆ ಹೆಸರನ್ನು ಸೇರಿಸಲು ಅವಕಾಶ ಕಲ್ಪಿಸಿದ್ದು, ಈ ತಿಂಗಳ ಅಂತ್ಯದಲ್ಲಿ ಬರುವಂತಹ ಅರ್ಜಿಗಳನ್ನು ಪಡೆದುಕೊಂಡು ಮುಂದಿನ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಕಂದಾಯಾಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದರು. 

ಅಧಿಕಾರಿಗಳು ಮಾನವೀಯ ದೃಷ್ಟಿಯಿಂದ ತಮ್ಮ ಕರ್ತವ್ಯವನ್ನು ನಿರ್ವಹಿಸಬೇಕು. ಸಂತ್ರಸ್ತರಾದವರಿಗೆ ಸೂಕ್ತ ರೀತಿಯಲ್ಲಿ ಅವರ ಕಷ್ಟಕ್ಕೆ ಸ್ಪಂದಿಸಿ ಅನುಕೂಲ ಮಾಡಿಕೊಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ರಾಜ್ಯ ಸರ್ಕಾರದ ವತಿಯಿಂದ ಕಂದಾಯ ಇಲಾಖೆ ಹಾಗೂ ವಸತಿ ಇಲಾಖೆಗೆ ಈಗಾಗಲೇ 94.40 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದು, ಕಾಮಗಾರಿಗಳು ಸಮಾರೋಪಾದಿಯಲ್ಲಿ ಸಾಗುತ್ತಿದೆ. 

ಕೇಂದ್ರ ಸರ್ಕಾರದಿಂದ ಕೊಡಗು ಅತೀವೃಷ್ಟಿಗೆ ಸಂಬಂಧಿಸಿದಂತೆ 152.37 ಕೋಟಿ ರೂ. ಬಿಡುಗಡೆಯಾಗಿದ್ದು, ಇದರಲ್ಲಿ 58 ಕೋಟಿ ರೂ.ಗಳನ್ನು ವಿವಿಧ ಮೂಲಭೂತ ಸೌಕರ್ಯಗಳಿಗೆ ಬಳಸಲಾಗಿದ್ದು, ಬಾಕಿ ಮೊತ್ತವನ್ನು ಎನ್‍ಡಿಆರ್‍ಎಫ್ ಮಾನದಂಡದ ಪ್ರಕಾರ ಬಳಕೆ ಮಾಡಲಾಗುವುದು ಎಂದು ಅವರು ತಿಳಿಸಿದರು. 

ರಾಜ್ಯ ಸರ್ಕಾರವು ನಾಲ್ಕು ಕೋಟಿ ರೂ.ಗಳನ್ನು ಅತೀವೃಷ್ಟಿಯಿಂದ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಬಾಡಿಗೆ ಮನೆಯಲ್ಲಿ ವಾಸಿಸಲು ಮಾಸಿಕ ಬಾಡಿಗೆ ವಿತರಣೆಗೆ ಮೀಸಲಿಟ್ಟಿರುವುದಾಗಿ ಅವರು ಸಭೆಗೆ ಮಾಹಿತಿ ನೀಡಿದರು. 

ಶಾಸಕರಾದ ಕೆ.ಜಿ.ಬೋಪಯ್ಯ ಅವರು ಅತೀವೃಷ್ಟಿಯಿಂದ ಮನೆ ಕಳೆದುಕೊಂಡ ಪೂರ್ಣ ಹಾನಿ, ಭಾಗಶಃ ಹಾನಿ, ಸ್ವಲ್ಪ ಪ್ರಮಾಣದ ಹಾನಿ ಪಟ್ಟಿಯ ಬಗ್ಗೆ ಮಾಹಿತಿ ನೀಡುವಂತೆ ಸಭೆಗೆ ತಿಳಿಸುತ್ತಾ ಕೆಲವರನ್ನು ಪಟ್ಟಿಯಿಂದ ಕೈಬಿಟ್ಟಿದ್ದಕ್ಕೆ ಕಾರಣ ನೀಡುವಂತೆ ಕಂದಾಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಪೂರ್ಣ ಮಾಹಿತಿ ನೀಡುವಂತೆ ಸೂಚಿಸಿದರು. 

ಮಕ್ಕಂದೂರು ವ್ಯಾಪ್ತಿಯಲ್ಲಿ ಪಿಡಿಒ ಒಬ್ಬರು ಹೋಂ ಸ್ಟೇಗಳನ್ನು ಮಳೆಗಾಲದಲ್ಲಿ ನಡೆಸದಂತೆ ಪತ್ರಿಕಾ ಪ್ರಕಟಣೆ ನೀಡಿರುವುದಕ್ಕೆ ತೀವ್ರ ಅಸಮಾದಾನ ವ್ಯಕ್ತಪಡಿಸಿದರು. ತೋಟದ ಮನೆ ನಿರ್ಮಾಣ ಮಾಡಲು ಅಧಿಕಾರಿಗಳು ನಿರಾಪೇಕ್ಷಣಾ ಪತ್ರ ನೀಡಲು ವಿಳಂಬ ಮಾಡುತ್ತಿರುವುದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿ ಮುಂದಿನ ದಿನಗಳಲ್ಲಿ ಇಂತಹ ಸಮಸ್ಯೆ ಬಾರದಂತೆ ಕ್ರಮ ಕೈಗೊಳ್ಳಬೇಕೆಂದು ಸಚಿವರ ಗಮನಕ್ಕೆ ತಂದರು. ಅತೀವೃಷ್ಟಿಯಿಂದಾಗಿ ರಸ್ತೆ, ಸೇತುವೆ, ನೀರಿನ ಸಮಸ್ಯೆ, ಅಸಮರ್ಪಕವಾಗಿದ್ದು, ತುರ್ತಾಗಿ ಶಾಶ್ವತ ವ್ಯವಸ್ಥೆಯನ್ನು ಕಲ್ಪಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು. 

ಮೈಸೂರು-ಕೊಡಗು ಸಂಸದರಾದ ಪ್ರತಾಪ್ ಸಿಂಹ ಅವರು ಮಾತನಾಡಿ ಅತೀವೃಷ್ಟಿಯಿಂದ ಕೆಲವು ಪ್ರದೇಶಗಳಲ್ಲಿ ಮನೆಗಳಿಗೆ ಯಾವುದೇ ಹಾನಿಯಾಗಿಲ್ಲ. ಆದರೆ ವಾಸ ಯೋಗ್ಯಕ್ಕೆ ಇಲ್ಲದಂತಾಗಿ ಸಂಪೂರ್ಣ ಸಂಪರ್ಕವನ್ನು ಕಳೆದುಕೊಂಡಿದೆ. ಇಂತಹ ಕುಟುಂಬಗಳಿಗೆ ಸರ್ಕಾರೇತರ ಸಂಸ್ಥೆಗಳು, ದಾನಿಗಳು ಹಾಗೂ ಸರ್ಕಾರದ ನೆರವಿನೊಂದಿಗೆ ಇಂತಹ ಕುಟುಂಬಗಳಿಗೆ ಮನೆಗಳನ್ನು ನೀಡಲು ಕ್ರಮಕೈಗೊಳ್ಳುವಂತೆ ಸಭೆಗೆ ತಿಳಿಸಿದರು. 

ಕೊಡಗು ಕಾಫಿ ಬೆಳೆಗಾರರ ಒಕ್ಕೂಟದ ಅಧ್ಯಕ್ಷರಾದ ದೇವಯ್ಯ ಅವರು ಮಾತನಾಡಿ ಅತೀವೃಷ್ಟಿಯಿಂದ ಭತ್ತದ ಗದ್ದೆಗಳಲ್ಲಿ, ತೋಟಗಳಲ್ಲಿ ಹೂಳು ತುಂಬಿಕೊಂಡಿದ್ದು, ಇಂತಹ ಪ್ರದೇಶಗಳಲ್ಲಿನ ಹೂಳನ್ನು ತೆರವುಗೊಳಿಸಲು ತುರ್ತಾಗಿ ಕ್ರಮ ಕೈಗೊಳ್ಳಬೇಕು. ಹಾಗೆಯೇ ಈ ಪ್ರದೇಶದಲ್ಲಿ ಬಿದ್ದಂತಹ ಮರಗಳನ್ನು ಬಳಕೆ ಮಾಡಿಕೊಳ್ಳಲು ಅರಣ್ಯ ಇಲಾಖೆ ಅಧಿಕಾರಿಗಳು ತೊಂದರೆ ನೀಡುತ್ತಿದ್ದು, ಇದನ್ನು ತಪ್ಪಿಸಿ ಸ್ವಂತ ಜಾಗದ ಮಾಲಕರೇ ಮರಗಳನ್ನು ಉಪಯೋಗಿಸುವಂತಾಗಲು ಕ್ರಮ ಕೈಗೊಳ್ಳಬೇಕೆಂದು ಸಭೆಗೆ ತಿಳಿಸಿದರು. 

ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅವರು ಮಾತನಾಡಿ ಅತೀವೃಷ್ಟಿಯಿಂದ ಸಂತ್ರಸ್ತರಾದವರಿಗೆ ಎಲ್ಲಾ ರೀತಿಯ ನೆರವನ್ನು ತುರ್ತಾಗಿ ಕಲ್ಪಿಸಿ ಬೆಳೆ ಪರಿಹಾರ, ತೋಟ ಕಳೆದುಕೊಂಡವರಿಗೆ ಅಗತ್ಯ ನೆರವನ್ನು ನೀಡಬೇಕು ಎಂದು ಸಭೆಗೆ ತಿಳಿಸಿದರು. 

ಸಭೆಯಲ್ಲಿ ಸಂತ್ರಸ್ತರ ಅಹವಾಲುಗಳನ್ನು ಆಲಿಸಲಾಯಿತು. ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಸುನೀಲ್ ಸುಬ್ರಮಣಿ, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಜಿ.ಪಂ.ಸಿಇಒ ಕೆ.ಲಕ್ಷ್ಮೀಪ್ರಿಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪನ್ನೇಕರ್, ಅಪರ ಜಿಲ್ಲಾಧಿಕಾರಿ ಪಿ.ಶಿವರಾಜು, ಉಪ ವಿಭಾಗಾಧಿಕಾರಿ ಟಿ.ಜವರೇಗೌಡ, ತಹಶೀಲ್ದಾರರು, ಜಿಲ್ಲಾ ಮಟ್ಟದ ಅಧಿಕಾರಿಗಳು ಇತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News