ಅವಧಿಯೊಳಗೆ ಸ್ಮಾರ್ಟ್ ಸಿಟಿ ಕಾಮಗಾರಿ ಪೂರ್ಣಗೊಳಿಸಿ: ಡಿಸಿಎಂ ಪರಮೇಶ್ವರ್

Update: 2019-06-07 17:43 GMT

ತುಮಕೂರು, ಜೂ.7: ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ 525 ಕೋಟಿ ರೂ. ವೆಚ್ಚದಲ್ಲಿ ಕೈಗೊಂಡಿರುವ ವಿವಿಧ ಕಾಮಗಾರಿಗಳಿಗೆ ಇಂದು ಉಪಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಚಾಲನೆ ನೀಡಿದರು. 

ನಗರದ ಕೇಂದ್ರೀಯ ಗ್ರಂಥಾಲಯದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಸ್ಮಾರ್ಟ್ ಸಿಟಿ ಯೋಜನೆಯಡಿ ಈ ದಿನ ಒಟ್ಟಾರೆ 525 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಲಾಗಿದ್ದು, ಅಧಿಕಾರಿಗಳು ನಿಗದಿತ ಅವಧಿಯೊಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸುವ ಕೆಲಸ ಮಾಡಬೇಕೆಂದು ಸೂಚನೆ ನೀಡಿದರು. 

ಕೇಂದ್ರದ ಶೇ.50 ಹಾಗೂ ರಾಜ್ಯ ಸರ್ಕಾರದ ಶೇ.50ರಷ್ಟು ಸೇರಿದಂತೆ ಒಟ್ಟು 1000 ಕೋಟಿ ರೂ.ಗಳ ಅನುದಾನ ವಿನಿಯೋಗಿಸಿಕೊಂಡು ತುಮಕೂರು ನಗರವನ್ನು ಸ್ಮಾರ್ಟ್ ಸಿಟಿಯನ್ನಾಗಿಸಲು ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ನಗರದ ಅಗತ್ಯತೆಗಳ ಆಧಾರದ ಮೇಲೆ ಕೂಲಂಕುಷವಾಗಿ ಚರ್ಚಿಸಿ ಕ್ರೀಡೆ, ರಸ್ತೆ, ಶಿಕ್ಷಣ, ಆರೋಗ್ಯ, ನೈರ್ಮಲ್ಯತೆ, ಕುಡಿಯುವ ನೀರಿನ ವ್ಯವಸ್ಥೆ ಕಾಮಗಾರಿಗಳಿಗೆ ಸಮನಾದ ಆದ್ಯತೆ ನೀಡಿ ಈ ಕಾಮಗಾರಿಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು. 

ಆಧುನಿಕ ಸ್ಪರ್ಧಾ ಜಗತ್ತಿನಲ್ಲಿ ತಕ್ಷಣವೇ ಮಾಹಿತಿ ಪಡೆಯಲು ಅನುಕೂಲವಾಗುವ ರೀತಿಯಲ್ಲಿ ಸಾರ್ವಜನಿಕ ಬಳಕೆಗಾಗಿ ನಗರ ಕೇಂದ್ರ ಗ್ರಂಥಾಲಯದಲ್ಲಿ ಡಿಜಿಟಲ್ ಲೈಬ್ರರಿಯನ್ನು ನಿರ್ಮಿಸಲು ಯೋಜಿಸಲಾಗಿದೆ. ಅಲ್ಲದೆ ಬಸ್‍ನಿಲ್ದಾಣ, ಶಾಪಿಂಗ್ ಮಾಲ್, ರೈಲು ನಿಲ್ದಾಣ, ಮತ್ತಿತರ ಸಾರ್ವಜನಿಕ ಸ್ಥಳಗಳಲ್ಲಿ ನಡೆಯುವ ಕಾನೂನು ಉಲ್ಲಂಘನೆ ಪ್ರಕರಣಗಳ ಮೇಲೆ ಸಿಸಿಟಿವಿ ಮೂಲಕ ಕಣ್ಣಿಡಲು ಪೊಲೀಸರಿಗಾಗಿ ಇಂಟಿಗ್ರೇಟೆಡ್ ಕಮ್ಯಾಂಡರ್ ಸೆಂಟರ್ ಅನ್ನು ತೆರೆಯಲಾಗುವುದು ಎಂದರು.

ಬೆಂಗಳೂರಿನಿಂದ ತುಮಕೂರಿಗೆ ಪ್ರತಿ 10 ನಿಮಿಷಕ್ಕೊಂದರಂತೆ ರೈಲು ಸಂಪರ್ಕ ಸೌಲಭ್ಯ ಒದಗಿಸಲು ಪ್ರತ್ಯೇಕ ಸಬ್ ಅರ್ಬನ್ ರೈಲು ಮಾರ್ಗಕ್ಕೆ ಸರ್ಕಾರದಿಂದ ಒಪ್ಪಿಗೆ ದೊರೆತಿದೆ.  ಅಲ್ಲದೆ ಕುಣಿಗಲ್ ರಸ್ತೆಯ ಬಿದರಕಟ್ಟೆಯ 400 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ತುಮಕೂರು ವಿಶ್ವವಿದ್ಯಾನಿಲಯ ಕಾಮಗಾರಿ ಪ್ರಗತಿಯಲ್ಲಿದ್ದು, ಕೆಲ ದಿನಗಳಲ್ಲಿ ವಿಶ್ವವಿದ್ಯಾನಿಲಯದ ಕ್ಯಾಂಪಸ್ ಸ್ಥಳಾಂತರಗೊಳ್ಳಲಿದೆ ಎಂದು ತಿಳಿಸಿದರು. 

ಅಧ್ಯಕ್ಷತೆ ವಹಿಸಿದ್ದ ಶಾಸಕ ಜ್ಯೋತಿಗಣೇಶ್ ಮಾತನಾಡಿ, ನಗರ ಸ್ಮಾರ್ಟ್ ಆಗಬೇಕಾದರೆ ಅಲ್ಲಿರುವ ಎಲ್ಲಾ ಸೌಲಭ್ಯಗಳಲ್ಲೂ ಸ್ಮಾರ್ಟ್ ಆಗಬೇಕು. ಸ್ಮಾರ್ಟ್ ಸಿಟಿ ಯೋಜನೆಯಡಿ ತುಮಕೂರಿನಲ್ಲಿ ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿರುವ ಎಲ್ಲಾ ಕಾಮಗಾರಿಗಳು ಜನೋಪಯೋಗಿಯಾಗಲಿವೆ. ಯೋಜನೆ ಕೈಗೊಳ್ಳಲು ಸಹಕರಿಸಿದವರೆಲ್ಲರಿಗೂ ಅಭಿನಂದನೆ ಸಲ್ಲಿಸಿದರಲ್ಲದೆ ಎಂಪ್ರೆಸ್ ಶಾಲೆ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸುಮಾರು 25,000 ವಿದ್ಯಾರ್ಥಿಗಳಿಗೆ ಉಪಯೋಗವಾಗುವಂತೆ 35 ಕೋಟಿ ರೂ. ವೆಚ್ಚದ ಸ್ಮಾರ್ಟ್ ತರಗತಿ, ಕಂಪ್ಯೂಟರ್, ಸ್ಮಾರ್ಟ್ ಲ್ಯಾಬ್ ಮತ್ತಿತರ ಸೌಲಭ್ಯಗಳನ್ನು ಒದಗಿಸುತ್ತಿರುವುದು ಅಭಿನಂದನಾರ್ಹ ಎಂದು ತಿಳಿಸಿದರು. 

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶಿವಾನಂದ ಪಾಟೀಲ್ ಮಾತನಾಡಿ, ಜಿಲ್ಲಾಸ್ಪತ್ರೆಗೆ ಅತ್ಯಾವಶ್ಯಕವಿರುವ ವೈದ್ಯಕೀಯ ಸಿಬ್ಬಂದಿ, ಮಾನವ ಸಂಪನ್ಮೂಲಗಳನ್ನು ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಜಿಲ್ಲಾಸ್ಪತ್ರೆಯಲ್ಲಿ ಸುಸಜ್ಜಿತ ಹಾಸ್ಟೆಲ್ ಸೌಲಭ್ಯ ಕಲ್ಪಿಸಬೇಕೆಂದು ವ್ಯಾಸಂಗ ಮಾಡುತ್ತಿರುವ ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿಗಳ ಬೇಡಿಕೆಯಂತೆ ಸ್ಥಳೀಯ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ ಶೀಘ್ರವೇ ಮಂಜೂರಾತಿಗೆ ನಿರ್ಣಯ ಕೈಗೊಳ್ಳಲಾಗುವುದು ಎಂದರು.

ತುಮಕೂರಿನ ಜಿಲ್ಲಾಸ್ಪತ್ರೆಯು ರಾಜ್ಯದ ಎಲ್ಲಾ ಜಿಲ್ಲಾಸ್ಪತ್ರೆಗಳಿಗಿಂತಲೂ ಮುಂಚೂಣಿಯಲ್ಲಿರುವುದು ಹೆಮ್ಮೆಯ ಸಂಗತಿಯಾಗಿದೆ. ಅತ್ಯಂತ ವೈಜ್ಞಾನಿಕವಾಗಿ ಚಿಕಿತ್ಸೆ ನೀಡುತ್ತಿರುವ ಏಕೈಕ ಆಸ್ಪತ್ರೆ ಇದಾಗಿದೆ. ಆಯುಷ್ಮಾನ್ ಭಾರತ್ ಹಾಗೂ ಆರೋಗ್ಯ ಕರ್ನಾಟಕ ಯೋಜನೆಯಡಿ ಸುಮಾರು 4 ಕೋಟಿ ರೂ.ಗಳ ಅನುದಾನವನ್ನು ತಂದುಕೊಟ್ಟಿರುವ ಈ ಆಸ್ಪತ್ರೆಯ ಆದಾಯದಲ್ಲಿ ಶೇ. 30ರಷ್ಟು ಹಣವನ್ನು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ ಸಿಬ್ಬಂದಿಗೆ ಪ್ರೋತ್ಸಾಹ ಧನವಾಗಿ ನೀಡುವ ಯೋಜನೆಯೊಂದನ್ನು ಸರ್ಕಾರ ರೂಪಿಸಿದ್ದು, ತಕ್ಷಣದಿಂದಲೇ ಜಾರಿಗೆ ಬರುತ್ತದೆ ಎಂದು ತಿಳಿಸಿದರು. 

ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಶಾಸಕ ಬಿ.ಸತ್ಯನಾರಾಯಣ, ಮೇಯರ್ ಲಲಿತಾ ರವೀಶ್, ಉಪ ಮೇಯರ್ ರೂಪಶ್ರೀ ಬಿ.ಎಸ್., ಪಾಲಿಕೆ ಸದಸ್ಯೆ ಗಿರಿಜಾ ಧನ್ಯಕುಮಾರ್, ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೋನವಂಶಿಕೃಷ್ಣ, ಸ್ಮಾರ್ಟ್ ಸಿಟಿ ಲಿಮಿಟೆಡ್‍ನ ಬಿ.ಟಿ.ರಂಗಸ್ವಾಮಿ, ಡಿಹೆಚ್‍ಓ ಡಾ.ಬಿ.ಆರ್.ಚಂದ್ರಿಕಾ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ವೀರಭದ್ರಯ್ಯ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾ ಕಲ್ಯಾಣ್, ಮತ್ತಿತರ ಅಧಿಕಾರಿಗಳು, ಶಾಲಾ ಮಕ್ಕಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News