ಬಾಲಕನ ಮೇಲೆ ಹಂದಿಗಳಿಂದ ದಾಳಿ

Update: 2019-06-07 18:18 GMT

ದಾವಣಗೆರೆ: ಆಟವಾಡುತ್ತಿದ್ದ ಬಾಲಕನ ಮೇಲೆ ಹಂದಿಗಳು ಏಕಾಏಕಿ ದಾಳಿ ಮಾಡಿ, ತೀವ್ರವಾಗಿ ಕಚ್ಚಿ ಗಾಯಗೊಳಿಸಿದ್ದಲ್ಲಲೇ ಸುಮಾರು ಮೀಟರುಗಳವರೆಗೂ ಆತನನ್ನು ಕಚ್ಚಿಕೊಂಡು ಎಳೆದೊಯ್ದ ಘಟನೆ ಇಲ್ಲಿನ ಶಿವಕುಮಾರ ಸ್ವಾಮಿ ಲೇಔಟ್‍ನಲ್ಲಿ ನಡೆದಿದೆ. 

ನಗರದ ಶಿವಕುಮಾರ ಸ್ವಾಮಿ ಬಡಾವಣೆಯ ಅಶೋಕ ಗೌಡ ಎಂಬುವರ ಪುತ್ರ ವೇದಾಂತ್ ಗೌಡ(10) ಹಂದಿ ದಾಳಿಗೊಳಗಾದ ಬಾಲಕ. ಹಂದಿಗಳು ಏಕಾಏಕಿ ದಾಳಿ ಮಾಡಿ, ಕೈಗಳನ್ನು ಕಚ್ಚಿ ಗಾಯಗೊಳಿಸಿವೆ. ಬಾಲಕನ ಬಲಗೈ ಭುಜ, ತೋಳು, ಕೈ ಭಾಗದ ಮೂಳೆ ಮುರಿದಿದ್ದು, ಎಡಗೈಗೂ ತೀವ್ರ ಗಾಯಗಳಾಗಿವೆ. ಮುಖದ ಮೇಲೂ  ಹಂದಿಗಳು ದಾಳಿ ಮಾಡಿದ್ದರಿಂದ ತೀವ್ರ ತರಚು ಗಾಯಗಳಾಗಿವೆ.  

ಹಂದಿಗಳು ಕಚ್ಚಿಕೊಂಡು ಹೋಗುತ್ತಿದ್ದ ಬಾಲಕ ತೀವ್ರವಾಗಿ ಕೊಸರಾಡುತ್ತಿದ್ದು, ಕೂಗುತ್ತಿದ್ದುದನ್ನು ಕಂಡ ಸ್ಥಳೀಯರು ಹಂದಿಗಳ ಬಾಯಿಯಿಂದ ಬಾಲಕನನ್ನು ರಕ್ಷಿಸಿ, ತಕ್ಷಣವೇ ಬಾಪೂಜಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ. ಕೆಟಿಜೆ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.  

ಲೋಕಸಭೆ ಚುನಾವಣೆ ಪೂರ್ವದಲ್ಲಿ ಹಂದಿಗಳನ್ನು ಹಿಡಿಯಲು ತಮಿಳುನಾಡಿನ ತಂಡಗಳನ್ನು ಕರೆಸಿ, ವರಹಾ ಕಾರ್ಯಾಚರಣೆ ಕೈಗೊಂಡಿದ್ದ ಮಹಾ ನಗರ ಪಾಲಿಕೆ ಆಡಳಿತ ಯಂತ್ರ ಹಂದಿಗಳ ವಿಚಾರದಲ್ಲಿ ನಂತರ ನಿದ್ದೆಗೆ ಶರಣಾಗಿದ್ದು, ಇನ್ನೂ ಎಚ್ಚೆತ್ತಂತೆ ಕಾಣುತ್ತಿಲ್ಲ. ಪಾಲಿಕೆ ವಾಲ್ವ್ ಮನ್, ಹಮಾಲಿ, ಮನೆ ಬಳಿ ಆಟವಾಡುತ್ತಿದ್ದ ಕಂದಮ್ಮಗಳು, ವಯೋ ವೃದ್ಧರು ಹೀಗೆ ಸಾಕಷ್ಟು ಜನರ ಮೇಲೆ ಹಂದಿಗಳು ದಾಳಿ ಮಾಡಿದರೂ ಪಾಲಿಕೆಗೆ ಮಾತ್ರ ಅದ್ಯಾವುದರ ಅರಿವೇ ಇಲ್ಲದಂತೆ ಮೌನಕ್ಕೆ ಶರಣಾಗಿದೆ ಎಂದು ನಾಗರಿಕರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News