ದಾವಣಗೆರೆ: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಆಶಾ ಕಾರ್ಯಕರ್ತೆಯರ ಧರಣಿ

Update: 2019-06-07 18:25 GMT

ದಾವಣಗೆರೆ, ಜೂ.7: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರು ಎಐಯುಟಿಯುಸಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ನಗರದಲ್ಲಿ ಶುಕ್ರವಾರ ಧರಣಿ ನಡೆಸಿದರು. 

ನಗರದ ಜಿಪಂ ಕಚೇರಿ ಎದುರು ಸಂಘಟನೆ ಮುಖಂಡರ ನೇತೃತ್ವದಲ್ಲಿ ತಮ್ಮ 9 ತಿಂಗಳ ಪ್ರೋತ್ಸಾಹ ಧನ ಬಾಕಿ ಕೊಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಘೋಷಣೆ ಕೂಗಿದ ಪ್ರತಿಭಟನಾ ನಿರತ ಆಶಾ ಕಾರ್ಯಕರ್ತೆಯರು ಜಿಪಂ ಅಧ್ಯಕ್ಷೆ ಶೈಲಜಾ ಬಸವರಾಜಗೆ ಮನವಿ ಅರ್ಪಿಸಿದರು. 

ಇದೇ ವೇಳೆ ಮಾತನಾಡಿದ ಸಂಘಟನೆ ಮುಖಂಡರು, ಆರೋಗ್ಯ ಇಲಾಖೆಯಡಿ ಮಹತ್ತರ ಕೆಲಸವನ್ನು ಜಿಲ್ಲಾದ್ಯಂತ ಆಶಾ ಕಾರ್ಯಕರ್ತೆಯರು ಮಾಡುತ್ತಿದ್ದಾರೆ. ಹಳ್ಳಿ, ನಗರದ ಬೇರುಮಟ್ಟದಲ್ಲಿ ಕೆಲಸ ಮಾಡುವ ಆಶಾ ಮಹಿಳೆಯರು ಗರ್ಭಿಣಿಯರ ಸುರಕ್ಷಿತ ಹೆರಿಗೆ, ಸ್ವಸ್ಥ ಶಿಶುವಿನ ಜನನ, ಆರೈಕೆ, ಆರೋಗ್ಯ, ಪೌಷ್ಟಿಕತೆ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಕ್ಷಯ, ಕುಷ್ಟರೋಗ, ಮಲೇರಿಯಾ, ಡೆಂಗ್, ಚಿಕುನ್ ಗುನ್ಯಾ ಇತ್ಯಾದಿ ಸಾಂಕ್ರಾಮಿಕ ರೋಗಗಳ ತಡೆಗೆ ಶ್ರಮಿಸುತ್ತಿದ್ದಾರೆ ಎಂದರು. 

ಕುಟುಂಬ ಯೋಜನೆ, ಶೌಚಾಲಯ ಬಳಕೆ, ಸಮಗ್ರ ಅಭಿವೃದ್ಧಿ ಕುರಿತು ಗ್ರಾಮೀಣ ಆರೋಗ್ಯ ಬದಲಾವಣೆಗೆ ಆಶಾ ಕಾರ್ಯಕರ್ತೆಯರು ಮಹತ್ವದ ಪಾತ್ರ ವಹಿಸುತ್ತಿದ್ದಾರೆ. ಪ್ರತಿ ತಿಂಗಳಿಗೊಮ್ಮೆ ವೇತನವಿಲ್ಲದೇ ಆಶಾ ಮಹಿಳೆಯರು ಪರದಾಡುವಂತಾಗಿದೆ. ರಾಜ್ಯದಲ್ಲಿ ಕೇಂದ್ರದ ಪ್ರೋತ್ಸಾಹಧನ ನೀಡುವ ಆಶಾ ಸಾಫ್ಟ್ ವೇತನ ಮಾದರಿಯಿಂದಾಗಿ ಕಳೆದ 3 ವರ್ಷದಿಂದ ಸಹಸ್ರಾರು ರೂ.ಗಳ ಆರ್ಥಿಕ ನಷ್ಟವನ್ನು ಆಶಾ ಮಹಿಳೆಯರು ಅನುಭವಿಸುತ್ತಿದ್ದಾರೆ. ಇತ್ತೀಚೆಗೆ  ಸರ್ಕಾರದ ನೂತನ ವೇತನ ಪಾವತಿ ವಿಧಾನದಡಿ ವಿಳಂಬವಾಗಿ ವೇತನ ನೀಡಲಾಗುತ್ತಿದೆ ಎಂದು ಅವರು ದೂರಿದರು.

ಕೇಂದ್ರ, ರಾಜ್ಯದ ವೇತನ ಸೇರಿಸಿ ಕನಿಷ್ಟ ಮಾಸಿಕ ಗೌರವಧನ 12 ಸಾವಿರ ನೀಡಬೇಕು. ಹಿಂದಿನ ಆರೋಗ್ಯ ಸಚಿವರ ಭರವಸೆಯಂತೆ, ಈಗಾಗಲೇ ಅಂಗನವಾಡಿ ಕಾರ್ಯಕರ್ತೆಯರಿಗಿರುವಂತೆ ಆಶಾ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸಿ, ಆಶಾಗಳ ಮಾರಣಾಂತಿಕ ಕಾಯಿಲೆಗೆ ಚಿಕಿತ್ಸೆ, ಆಶಾ ಮರಣ ಹೊಂದಿದಲ್ಲಿ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು. ಕಾರ್ಪಸ್ ಫಂಡ್ ಮೀಸಲಿಟ್ಟು, ಪರಿಹಾರ ನೀಡುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಿ. ನಿವೃತ್ತಿ ಹೊಂದುವ ಆಶಾಗೆ ಪಿಂಚಣಿ ನೀಡಬೇಕು. ನಿವೃತ್ತಿ ಪರಿಹಾರದ ಇಡುಗಂಟು ಕೊಡಬೇಕು. ಹೆರಿಗೆ ರಜೆ ನೀಡಿ, ರಜೆಯಲ್ಲಿ ಮಾಸಿಕ ಗೌರವ ಧನ ನೀಡಬೇಕು ಎಂದು ಅವರು ಆಗ್ರಹಿಸಿದರು. 

ಸಂಘಟನೆ ಮುಖಂಡರಾದ ಡಿ.ನಾಗಲಕ್ಷ್ಮಿ, ಅಣಬೇರು ತಿಪ್ಪೇಸ್ವಾಮಿ, ನೀಲಾವತಿ, ಶೋಭಾ, ಮಂಜುಳಮ್ಮ, ಭಾಗ್ಯ, ರುಕ್ಕಮ್ಮ, ಅನಿತಾ, ಲಕ್ಷ್ಮೀಬಾಯಿ, ರೇಖಾ, ಪರ್ವೀನ್ ಬಾನು, ಮಧು ತೊಗಲೇರಿ, ಭಾರತಿ, ಶಿವಾಜಿರಾವ್, ವಸಂತ ಇತರರು ಇದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News