×
Ad

ಖಾನಾಪುರ ತಾಲೂಕಿನಲ್ಲಿ ‘40 ಇ-ಶಾಲೆ’ಗಳಿಗೆ ಶಾಸಕಿ ಅಂಜಲಿ ನಿಂಬಾಳ್ಕರ್ ಚಾಲನೆ

Update: 2019-06-08 19:00 IST

ಬೆಳಗಾವಿ, ಜೂ.8: ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ 40 ಶಾಲೆಗಳನ್ನು ‘ಇ-ಶಾಲೆ’ ಯೋಜನೆಗೆ ಆಯ್ಕೆ ಮಾಡಿರುವ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್, ಈ ಯೋಜನೆಗೆ ಬೀಡಿ ಗ್ರಾಮದಲ್ಲಿ ಚಾಲನೆ ನೀಡಿದರು.

ಮೆಂಡಾ ಫೌಂಡೇಶನ್ ಮತ್ತು ಶಾಸಕರ ನಿಧಿಯ ತಲಾ ಶೇ.50ರ ಹಣದಲ್ಲಿ ಯೋಜನೆ ಜಾರಿಗೊಳಿಸಲಾಗುತ್ತಿದೆ. ಈ ವರ್ಷ ‘ಇ-ಶಾಲೆ’ ಯೋಜನೆಗೆ 20 ಲಕ್ಷ ರೂ. ನೀಡುವುದಾಗಿ ಅವರು ತಿಳಿಸಿದರು.

ಇ- ಕಲಿಕಾ ಯೋಜನೆ ನನ್ನ ಕನಸು. ಪ್ರಭುನಗರ ಶಾಲೆಯಲ್ಲಿ ಮೊದಲು ನೋಡಿದಂದಿನಿಂದ ನಮ್ಮ ಇಡೀ ತಾಲೂಕಿನಲ್ಲಿ ಈ ಯೋಜನೆ ವಿಸ್ತರಿಸಬೇಕೆಂದು ಸೆಲ್ಕೊ ಸಂಸ್ಥೆ ಮತ್ತು ಮೆಂಡಾ ಫೌಂಡೇಶನ್ ಜೊತೆ ಒಂದು ವರ್ಷದಿಂದ ಸತತವಾಗಿ ಚರ್ಚಿಸಿ ಯೋಜನೆ ಜಾರಿಗೊಳಿಸಿದ್ದೇನೆ ಎಂದು ಅಂಜಲಿ ನಿಂಬಾಳ್ಕರ್ ಹೇಳಿದರು.

ಈ ಯೋಜನೆಗೆ ತಗಲುವ ವೆಚ್ಚ 90 ಸಾವಿರ ರೂ.ಗಳಲ್ಲಿ ಅರ್ಧ ಶಾಸಕರ ನಿಧಿ ಮತ್ತು ಉಳಿದರ್ಧ ಮೆಂಡಾದವರ ಸಹಕಾರದಲ್ಲಿ ಮೊದಲ ಹಂತದಲ್ಲಿ 40 ಶಾಲೆಗಳಲ್ಲಿ ಪ್ರಾರಂಭಿಸುತ್ತಿದ್ದೇವೆ. ಇದರಲ್ಲಿ ಯಾವುದೇ ಜಾತಿ ಮತ್ತು ಭಾಷೆ ಭೇದವಿಲ್ಲದೆ ಪ್ರಾಮಾಣಿಕ ಸೇವೆ ಮಾಡುವ ಉದ್ದೇಶ ಹೊಂದಿದ್ದೇನೆ ಎಂದು ಅವರು ತಿಳಿಸಿದರು.

ಮರಾಠಿ ಭಾಷೆಯಲ್ಲೂ ಕೂಡಾ ಮುಂದಿನ ದಿನಗಳಲ್ಲಿ ಸರಕಾರದ ಸಹಕಾರದಿಂದ ಮಾಡುತ್ತೇವೆ. ಅಭಿವೃದ್ಧಿಯಲ್ಲಿ ರಾಜಕೀಯ ಮಾಡುವ ಯಾವುದೇ ಮಾತಿಲ್ಲ ಮತ್ತು ತಮಗೆ ಅದು ಬೇಕಾಗಿಯೂ ಇಲ್ಲ. ಇಡೀ ಕ್ಷೇತ್ರದ ಏಳಿಗೆಯೇ ತಮ್ಮ ಉದ್ದೇಶ ಎಂದು ಅಂಜಲಿ ನಿಂಬಾಳ್ಕರ್ ಹೇಳಿದರು.

ಬೀಡಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಇ-ಶಾಲೆ’ ಉದ್ಘಾಟನೆ ಜೊತೆಗೆ ಸಮವಸ್ತ್ರ ವಿತರಣೆ, ನೋಟ್‌ಬುಕ್ ವಿತರಣೆ ಕಾರ್ಯಕ್ರಮವು ನಡೆಯಿತು. ಮೆಂಡಾ ಫೌಂಡೇಶನ್‌ನ ಚತ್ರು ಮೆಂಡಾ, ಸೆಲ್ಕೋ ಎಜಿಎಂ ಸುಧಿಪ್ತಾ ಘೋಶ್, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮಣ್‌ರಾವ್ ಯಕ್ಕುಂಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News