ಕುಶಾಲನಗರ: ಕಾವೇರಿ ನದಿಯಲ್ಲಿ ಮುಳುಗಿ ಇಬ್ಬರು ಸಾವು
ಮಡಿಕೇರಿ, ಜೂ.8: ಕೆಲವೇ ದಿನಗಳ ಹಿಂದೆ ಮೂವರು ಬಾಲಕರು ಕುಶಾಲನಗರದಲ್ಲಿ ನದಿ ಪಾಲಾದ ಘಟನೆ ಹಸಿರಾಗಿರುವಾಗಲೇ ಕಾವೇರಿ ನದಿಗಿಳಿದ ಇಬ್ಬರು ನೀರು ಪಾಲಾದ ಮತ್ತೊಂದು ಪ್ರಕರಣ ಕುಶಾಲನಗರದ ಆರ್‍ಎಂಸಿ ಬಳಿ ನಡೆದಿದೆ.
ಕುಶಾಲನಗರ ಬದ್ರುನ್ನಿಸಾ ಲೇಔಟ್ ನಿವಾಸಿ ನಾಸಿರ್ ಖಾನ್ (44) ಮತ್ತು ಈತನ ಸಂಬಂಧಿ ಸೈಯದ್ ಅಕ್ಮಲ್ ಅವರ ಪುತ್ರ ಸೈಯದ್ ಮೋಹಿನ್ (14) ಮೃತಪಟ್ಟವರು.
ಈದುಲ್ ಫಿತ್ರ್ ಹಬ್ಬಕ್ಕೆಂದು ನಾಸಿರ್ ಖಾನ್ ಅವರ ನಿವಾಸಕ್ಕೆ ಸಂಬಂಧಿಕರು ಆಗಮಿಸಿದ್ದರು. ಶನಿವಾರ ಬೆಳಗ್ಗೆ ಬಟ್ಟೆ ತೊಳೆಯಲೆಂದು ನಾಸಿರ್ ಖಾನ್ ಕುಟುಂಬದವರೊಂದಿಗೆ ಸಂಬಂಧಿಕರು ನದಿಗೆ ತೆರಳಿದ್ದರು.
ನದಿ ತಟದಲ್ಲಿ ಸಂಬಂಧಿಕರ ಮಕ್ಕಳು ಆಟವಾಡುತ್ತಿದ್ದ ಸಂದರ್ಭ ಸೈಯದ್ ಮೋಹಿನ್ ಆಕಸ್ಮಿಕವಾಗಿ ಕಾಲು ಜಾರಿ ನದಿಗೆ ಬಿದ್ದಿದ್ದಾನೆ. ಈತನನ್ನು ರಕ್ಷಿಸಲು ಮುಂದಾದ ನಾಸಿರ್ ಖಾನ್ ಕೂಡ ನೀರಿಗಿಳಿದಿದ್ದಾರೆ. ಆದರೆ ಇಬ್ಬರೂ ನೀರಿನಲ್ಲಿ ಮುಳುಗಿ ಸಾವನಪ್ಪಿದ್ದಾರೆ ಎಂದು ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಥಳಕ್ಕೆ ಧಾವಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಮತ್ತು ಮುಳುಗು ತಜ್ಞ ರಾಮಕೃಷ್ಣ ಅವರು ಮೃತದೇಹಗಳನ್ನು ಮೇಲಕ್ಕೆತ್ತಿದ್ದಾರೆ.