ಆರು ಅಂಗಡಿಗಳಲ್ಲಿ ಕಳ್ಳರ ಕೈಚಳಕ: ಲಕ್ಷಾಂತರ ರೂ. ದರೋಡೆ

Update: 2019-06-08 14:49 GMT

ಮೈಸೂರು,ಜೂ.8: ಆಲನಹಳ್ಳಿ ರಿಂಗ್ ರಸ್ತೆಯಲ್ಲಿರುವ ಅಂಗಡಿಗಳಲ್ಲಿ ಸರಣಿ ಕಳ್ಳತನ ನಡೆದಿದೆ. ನಿನ್ನೆ ರಾತ್ರಿ ಆಲನಹಳ್ಳಿ ರಿಂಗ್ ರಸ್ತೆಯಲ್ಲಿರುವ ಆರು ಅಂಗಡಿಗಳಲ್ಲಿ ಕಳ್ಳರು ಕೈಚಳಕ ತೋರಿದ್ದಾರೆ.

ಶುಕ್ರವಾರ ರಾತ್ರಿ ಮಳೆ ಸುರಿಯುತ್ತಿದ್ದ ವೇಳೆ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ ಎನ್ನಲಾಗುತ್ತಿದೆ. ಇಂದು ಬೆಳಗ್ಗೆ ವಾಯುವಿಹಾರಿಗಳು ಅಂಗಡಿ ಶೆಟರ್ ಗಳು ಓಪನ್ ಆಗಿರುವುದನ್ನು ನೋಡಿ ಆಲನಹಳ್ಳಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಬಳಿಕ ಪೊಲೀಸರು ಸ್ಥಳಕ್ಕಾಗಮಿಸಿ ವೀಕ್ಷಿಸಿದಾಗ ಕಳ್ಳತನವಾಗಿರುವುದು ತಿಳಿದು ಬಂದಿದೆ.

ಅಂಗಡಿಗಳ ಮಾಲಕರು ಎಂದಿನಂತೆ ರಾತ್ರಿ ಹತ್ತು ಗಂಟೆಗೆ ಅಂಗಡಿಗೆ ಬೀಗ ಹಾಕಿ ಮನೆಗೆ ತೆರಳಿದ್ದರು ಎನ್ನಲಾಗಿದೆ. ಬಸವೇಶ್ವರ ಪೈಪ್ಸ್ ಮತ್ತು ಹಾರ್ಡ್ ವೇರ್, ರಝಾ ಟ್ರಾನ್ಸ್ ಪೋರ್ಟ್ ಹಾಗೂ ಗಣೇಶ್ ಎಲೆಕ್ಟ್ರಿಕಲ್ ಅಂಡ್ ಹಾರ್ಡ್ ವೇರ್ ಸೇರಿದಂತೆ ಒಟ್ಟು ಆರು ಅಂಗಡಿಗಳಲ್ಲಿ ಕಳ್ಳತನವಾಗಿದ್ದು, ಲಕ್ಷಾಂತರ ರೂ. ಮತ್ತು ವಸ್ತುಗಳು ಕಳ್ಳತನವಾಗಿವೆ ಎನ್ನಲಾಗಿದೆ.

ಸ್ಥಳಕ್ಕೆ ಬೆರಳಚ್ಚು ತಜ್ಞರು ಮತ್ತು ಶ್ವಾನದಳ ಆಗಮಿಸಿ ಪರಿಶೀಲನೆ ನಡೆಸಿದೆ. ಆದರೆ ಮಳೆ ಸುರಿದ ಕಾರಣ ಶ್ವಾನಗಳು ಗುರುತಿಸಲು ಸಾಧ್ಯವಾಗದೇ ಮರಳಿವೆ ಎನ್ನಲಾಗಿದೆ. ಈ ಸಂಬಂಧ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News