ಶೌರ್ಯಚಕ್ರ ಪುರಸ್ಕೃತ ಕೊಡಗಿನ ಯೋಧ ಮಹೇಶ್‍ಗೆ ಗುಂಡೇಟು

Update: 2019-06-08 15:09 GMT
ಹೆಚ್.ಎನ್.ಮಹೇಶ್

ಮಡಿಕೇರಿ, ಜೂ.8: ಭಾರತೀಯ ಸೇನೆಯ 44ನೇ ರಾಷ್ಟ್ರೀಯ ರೈಫಲ್ಸ್ ನಲ್ಲಿ ಸೇವೆ ಸಲ್ಲಿಸುತ್ತಿರುವ ಶೌರ್ಯಚಕ್ರ ಪುರಸ್ಕೃತ ವಿರಾಜಪೇಟೆ ತಾಲೂಕಿನ ಪೊನ್ನಂಪೇಟೆ ನಿವಾಸಿ ಹೆಚ್.ಎನ್.ಮಹೇಶ್ ಅವರಿಗೆ ಉಗ್ರವಾದಿಗಳ ವಿರುದ್ಧ ನಡೆದ ಕಾರ್ಯಾಚರಣೆಯಲ್ಲಿ ಗುಂಡೇಟು ತಗುಲಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. 

ಮೇ 29ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮಹೇಶ್ ಅವರ ಮುಖಕ್ಕೆ ಗುಂಡೇಟು ತಗುಲಿದ್ದು, ಪ್ರಸ್ತುತ ಅವರು ಪಂಜಾಬಿನ ಚಂಡೀಘಡ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾರೆ. ಜೂ.6 ರಂದು ಮಹೇಶ್ ಅವರು ತಮ್ಮ ಪೋಷಕರಿಗೆ ಕರೆ ಮಾಡಿ ಗುಂಡೇಟಿನಿಂದ ಗಾಯವಾಗಿರುವ ಬಗ್ಗೆ ಮಾಹಿತಿ ನೀಡಿ ಪ್ರಸ್ತುತ ಚೇತರಿಸಿಕೊಳ್ಳುತ್ತಿರುವುದಾಗಿಯೂ ಹೇಳಿದ್ದಾರೆ. 

ಪೊನ್ನಂಪೇಟೆ ಗಾಂಧಿನಗರದ ನಿವಾಸಿಯಾದ ನಾಗರಾಜ್ ಮತ್ತು ಲಕ್ಷ್ಮಿ ದಂಪತಿ ಪುತ್ರನಾಗಿರುವ ಹೆಚ್.ಎನ್.ಮಹೇಶ್ ಅವರನ್ನು ಕೆಲ ವರ್ಷಗಳ ಹಿಂದೆ ಜಮ್ಮು ಕಾಶ್ಮೀರದಲ್ಲಿರುವ 44ನೇ ರಾಷ್ಟ್ರೀಯ ರೈಫಲ್ಸ್ ಗೆ ನೇಮಕ ಮಾಡಲಾಗಿತ್ತು. 

ಉಗ್ರರಿಂದ ಫೈರಿಂಗ್
ಮೇ ತಿಂಗಳ 29ರಂದು ಮಧ್ಯಾಹ್ನ ಜಮ್ಮು ಕಾಶ್ಮೀರದ ಶೋಫಿಯಾನ್ ಜಿಲ್ಲೆಯ ಮನೆಯೊಂದರಲ್ಲಿ 4 ಮಂದಿ ಉಗ್ರವಾದಿಗಳು ಆಶ್ರಯ ಪಡೆದಿರುವ ಮಾಹಿತಿ ಕಲೆ ಹಾಕಿದ ಭಾರತೀಯ ಸೇನೆ ಶೋಧ ಕಾರ್ಯಾಚರಣೆ ಆರಂಭಿಸಿತ್ತು. ರಾಷ್ಟ್ರೀಯ ರೈಫಲ್ಸ್ ಯೋಧರ 60 ಮಂದಿ ಯೋಧರು, ಉಗ್ರರು ಅವಿತಿದ್ದ ಮನೆಯನ್ನು ಸುತ್ತುವರಿದು ಅವರನ್ನು ಶರಣಾಗುವಂತೆ ಸೂಚಿಸಿದ್ದರು. ಆದರೆ ಉಗ್ರರು ಶರಣಾಗತಿಗೆ ಮುಂದಾಗಿರಲಿಲ್ಲ. 

ತಕ್ಷಣವೇ ಕಾರ್ಯಪ್ರವೃತ್ತರಾದ ಯೋಧರು ಮನೆಯ ಒಳಗೆ ನುಗ್ಗಿದ್ದು, ಈ ಸಂದರ್ಭ ಉಗ್ರರು ಸಿಡಿಸಿದ ಗುಂಡು ತಂಡದಲ್ಲಿದ್ದ ಹೆಚ್.ಎನ್.ಮಹೇಶ್ ಅವರ ಮುಖಕ್ಕೆ ಬಡಿದಿದೆ. ಬಳಿಕ ಜೊತೆಯಲ್ಲಿದ್ದ ಯೋಧರು ಉಗ್ರರು ಅವಿತಿದ್ದ ಮನೆಯನ್ನೇ ಸ್ಫೋಟಿಸುವ ಮೂಲಕ 4 ಮಂದಿಯನ್ನು ಕೊಂದು ಹಾಕಿದ್ದಾರೆ. ಗುಂಡೇಟಿನಿಂದ ಮುಖಕ್ಕೆ ಗಂಭೀರ ಗಾಯವಾದರೂ ಕೂಡ ಯೋಧ ಮಹೇಶ್ ಘಟನಾ ಸ್ಥಳದಿಂದ 200 ಮೀಟರ್ ನಷ್ಟು ದೂರದವರೆಗೆ ನಡೆದುಕೊಂಡು ಬಂದು ಬಳಿಕ ರಕ್ತ ಸ್ರಾವದಿಂದ ಕುಸಿದು ಬಿದ್ದಿದ್ದಾರೆ ಎನ್ನಲಾಗಿದೆ. 

ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಹೇಶ್ ಅವರನ್ನು ತಕ್ಷಣವೇ ಏರ್‍ಲಿಫ್ಟ್ ಮೂಲಕ ಸೇನಾ ಹೆಲಿಕಾಫ್ಟರ್ ನಲ್ಲಿ ಶ್ರೀನಗರದ ಕಮಾಂಡೋ ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ಅವರನ್ನು ಪಂಜಾಬಿನ ಚಂಡೀಘಡದಲ್ಲಿರುವ ಸೇನಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಜೂ.3 ರಂದು ಪ್ರಜ್ಞೆ ಬಂದಿದೆ. ಜೂ.6 ರಂದು ಚಂಡೀಘಡದ ಆಸ್ಪತ್ರೆಯಿಂದ ತಮ್ಮ ತಾಯಿಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News