ಸೂಕ್ತ ಸಂದರ್ಭದಲ್ಲಿ ನಿರ್ಧಾರ ಕೈಗೊಳ್ಳುವೆ: ಕೈ ಶಾಸಕ ಬಿ.ಸಿ.ಪಾಟೀಲ್ ಎಚ್ಚರಿಕೆ

Update: 2019-06-08 16:01 GMT

ಬೆಂಗಳೂರು, ಜೂ. 8: ಕಾಂಗ್ರೆಸ್ ನಾಯಕರೆ ಬಂದು ಸಚಿವರಾಗಿ ಎಂದರೂ ನಾನು ಒಪ್ಪಿಕೊಳ್ಳುವುದಿಲ್ಲ. ನನಗೆ ಈಗಾಗಲೇ ಸಾಕಷ್ಟು ಅವಮಾನವಾಗಿದ್ದು ಸೂಕ್ತ ಸಮಯದಲ್ಲಿ ನನ್ನ ನಿರ್ಧಾರವನ್ನು ನಾನು ಕೈಗೊಳ್ಳಲಿದ್ದೇನೆ ಎಂದು ಕಾಂಗ್ರೆಸ್ ಶಾಸಕ ಬಿ.ಸಿ.ಪಾಟೀಲ್ ಎಚ್ಚರಿಸಿದ್ದಾರೆ.

ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹಿರಿಯರ ಹೆಸರಿನಲ್ಲಿ 15 ಮಂದಿ ಸಚಿವರಾಗಲು ಸಿದ್ಧರಾಗಿಯೇ ಇರುತ್ತಾರೆ. ಪ್ರತಿ ಬಾರಿಯೂ ಅವರಿಗೆ ಅವಕಾಶಗಳು ಸಿಗುತ್ತವೆ. ಉಳಿದದ್ದು ಹಂಚಿಕೆ ಮಾಡಲಾಗುತ್ತದೆ ಎಂದು ಟೀಕಿಸಿದರು.

ಹಿರಿಯರು ಎಂಬ ಹೆಸರಿನಲ್ಲಿ ಬಹಳಷ್ಟು ಮಂದಿ ಪದೇ ಪದೇ ಸಂಪುಟ ಸೇರುತ್ತಾರೆ. ನಮ್ಮಂಥವರ ಸ್ಥಿತಿ ಏನಾಗಬೇಕು. ಈ ಹಿಂದೆ ಸಂಪುಟ ವಿಸ್ತರಣೆ ವೇಳೆ ನನ್ನನ್ನು ಕರೆದು ಮಾತುಕತೆ ನಡೆಸಿ ಅವಕಾಶ ನೀಡುವುದಾಗಿ ಭರವಸೆ ನೀಡಿದ್ದರು. ನಾನು ನಿರೀಕ್ಷೆಯಲ್ಲಿದ್ದೆ. ಆದರೆ ನನಗೆ ಅವಕಾಶ ನೀಡದೆ ಅವಮಾನ ಮಾಡಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.

ಸಚಿವ ಸಂಪುಟ ವಿಸ್ತರಣೆ ವೇಳೆ ಪ್ರತಿಬಾರಿಯೂ ತೋಳ ಬಂತು ತೋಳ ಕಥೆ ಹೇಳುತ್ತಿದ್ದಾರೆ. ಇದನ್ನು ಕೇಳಿ-ಕೇಳಿ ನನಗೂ ಸಾಕಾಗಿದೆ. ಅವಮಾನದಿಂದ ಸಾಕಷ್ಟು ನೊಂದಿದ್ದು, ಇದರಿಂದ ಸಚಿವ ಸಂಪುಟ ಸೇರಲೇಬಾರದು ಎಂಬ ತೀರ್ಮಾನ ಮಾಡಿದ್ದೇನೆ ಎಂದು ಪಾಟೀಲ್ ತಿಳಿಸಿದರು.

ಸಚಿವ ಸ್ಥಾನಕ್ಕಾಗಿ ನಾನು ಇನ್ನು ಮುಂದೆ ಯಾರ ಮನೆಯ ಬಾಗಿಲಿಗೆ ನಾನು ಹೋಗುವುದಿಲ್ಲ. ಯಾವ ಬೇಡಿಕೆಗಳನ್ನು ಇಡುವುದಿಲ್ಲ. ಸಚಿವರಾಗಿ ಎಂದರೂ ಒಪ್ಪಿಕೊಳ್ಳದಿರಲು ತೀರ್ಮಾನ ಮಾಡಿದ್ದೇನೆ ಎಂದು ಬಿ.ಸಿ.ಪಾಟೀಲ್ ಇದೇ ವೇಳೆ ಸ್ಪಷ್ಟಣೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News