ಶುದ್ಧ ನೀರಿನ ದರ ಹೆಚ್ಚಳದ ಚಿಂತನೆ ಕಾಂಗ್ರೆಸ್ ಪಕ್ಷದ ನಿಲುವಿಗೆ ವ್ಯತಿರಿಕ್ತ: ಎಚ್.ಕೆ.ಪಾಟೀಲ್

Update: 2019-06-08 16:13 GMT

ಬೆಂಗಳೂರು ಜೂ. 8: ಬಡವರ ಹಸಿವು ಇಂಗಿಸಲು ಉಚಿತ ಅಕ್ಕಿ ವಿತರಿಸುವಾಗ, ಇಂದಿರಾ ಕ್ಯಾಂಟೀನ್‌ನಲ್ಲಿ ರಿಯಾಯ್ತಿ ದರದಲ್ಲಿ ಆಹಾರ ನೀಡಿ, ಜನರ ಆರೋಗ್ಯ ರಕ್ಷಿಸಲು ಹಾಗೂ ದಾಹ ಇಂಗಿಸಲು ಅಗತ್ಯವಿರುವ ಶುದ್ದ ನೀರಿನ ದರದ ಹೆಚ್ಚಳದ ಚಿಂತನೆ ಕಾಂಗ್ರೆಸ್ ಪಕ್ಷದ ನಿಲುವಿಗೆ ವ್ಯತಿರಿಕ್ತವಾದದ್ದು ಎಂದು ಮಾಜಿ ಸಚಿವ ಎಚ್.ಕೆ.ಪಾಟೀಲ್ ಹೇಳಿದ್ದಾರೆ.

ಶನಿವಾರ ಸಿಎಂ ಕುಮಾರಸ್ವಾಮಿ ಹಾಗೂ ಗ್ರಾಮೀಣಾಭಿವೃದ್ದಿ ಸಚಿವ ಕೃಷ್ಣಭೈರೇಗೌಡ ಅವರಿಗೆ ಪತ್ರವನ್ನು ಬರೆದಿದ್ದು, ಶುದ್ಧ ಕುಡಿಯುವ ನೀರು ಮಾನವನ ಆರೋಗ್ಯವಂತ ಜೀವನಕ್ಕೆ ಬೇಕಾಗಿರುವ ಮೂಲಭೂತ ಅಗತ್ಯ. ಇಂದು ಕುಡಿಯುವ ನೀರು ಕಲುಷಿತಗೊಂಡಿದ್ದು, ಅಂತರ್ಜಲ ಮಟ್ಟ ತೀವ್ರ ಕುಸಿತಗೊಂಡಿದೆ. ಈ ವೇಳೆ ಜನಾರೋಗ್ಯ ಆಘಾತಕಾರಿಯೂ ಆಗಿದೆ.

ಹೀಗಾಗಿ ಎಲ್ಲರಿಗೂ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ. ಶುದ್ಧ ಕುಡಿಯುವ ನೀರಿನ ಘಟಕಗಳ ಸಮರ್ಪಕ ನಿರ್ವಹಣೆ ಹೊಸ ವ್ಯವಸ್ಥೆ ರೂಪಿಸುವ ಆಲೋಚನೆ ಸ್ವಾಗತಿಸುವೆ. ಈ ಪ್ರಸಂಗದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆ ವೆಚ್ಚ ಹೆಚ್ಚಾಗುತ್ತಿದೆ ಎಂಬ ಕಾರಣಕ್ಕೆ, 10 ಪೈಸೆಗೊಂದು ಲೀಟರ್ ನೀರು ಪೂರೈಕೆ ಮಾಡುವುದನ್ನು ಬದಲಿಸಿ 25 ಪೈಸೆಗೆ ಏರಿಕೆ ಮಾಡುವ ಸರಕಾರದ ನಿಲುವು ಸರಿಯಲ್ಲ ಎಂದು ಆಕ್ಷೇಪಿಸಿದ್ದಾರೆ.

ಕಾಂಗ್ರೆಸ್ ಬಡವರ ಪಕ್ಷಪಾತಿ ಪಕ್ಷ. ಬಡವರು ಹಸಿವೆಯಿಂದ ಬಳಲಬಾರದೆಂದು ಅನ್ನಭಾಗ್ಯ ಯೋಜನೆ ಜಾರಿಗೊಳಿಸಿ ಉಚಿತ ಅಕ್ಕಿ ವಿತರಣೆ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ಬಡವರ ಉಪಾಹಾರ ಊಟಕ್ಕೆ ಅನುಕೂಲವಾಗಲೆಂದು ಇಂದಿರಾ ಕ್ಯಾಂಟೀನ್ ತೆರೆದು ಕಾಂಗ್ರೆಸ್ ಪಕ್ಷದ ನಿಲುವು ಸದಾ ಬಡಜನರು ಎಂಬುದನ್ನು ಸ್ಮರಿಸುವೆ ಎಂದು ತಿಳಿಸಿದ್ದಾರೆ.

ಶುದ್ಧ ಕುಡಿಯುವ ನೀರು ಕೇವಲ ದಾಹ ತಣಿಸುವುದಿಲ್ಲ. ಈ ನೀರಿನ ಸೇವನೆಯಿಂದ ಜಲಮೂಲದಿಂದ ಬರುವ ರೋಗಗಳನ್ನು ತಡೆದು ಜನಾಂಗದ ಆರೋಗ್ಯ ರಕ್ಷಣೆಯ ಜೊತೆಗೆ ಅವರಲ್ಲಿ ಆರ್ಥಿಕ ಚೈತನ್ಯ ತುಂಬಲು ಬಹಳ ನೆರವಾಗುವುದೆಂಬುದನ್ನು ಮರೆಯಲಾಗದು.

ಬಡವರು ಹಸಿವು ಇಂಗಿಸಲು ಪುಕ್ಕಟೆ ಅಕ್ಕಿ ವಿತರಿಸುವಾಗ ರಿಯಾಯತಿ ದರದಲ್ಲಿ ಆಹಾರ ನೀಡುತ್ತಾ ಅವರ ಆರೋಗ್ಯ ರಕ್ಷಿಸಲು, ದಾಹ ಇಂಗಿಸಲು ಶುದ್ಧ ನೀರಿನ ದರ ಹೆಚ್ಚಳದ ಚಿಂತನೆಯೆ ಪಕ್ಷದ ನಿಲುವಿಗೆ ವ್ಯತಿರಿಕ್ತವಾದದು. ಶುದ್ಧ ಕುಡಿಯುವ ನೀರಿನ ದರ ಹೆಚ್ಚಿಸುವ ಬದಲು ನಿರ್ವಹಣೆ ವೆಚ್ಚದಲ್ಲಿಯೇ ಕೊರತೆಯನ್ನು ಸರಕಾರ ತುಂಬಿಕೊಡಲು ಹಾಗೂ ಶುದ್ಧ ಕುಡಿಯುವ ನೀರು ಬಳಸುವ ಬಡವರಿಗೆ 10 ಪೈಸೆಗೆ ಲೀಟರ್ ನೀರು ಪೂರೈಸುವುದನ್ನು ಮುಂದುವರೆಸಬೇಕೆಂದು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News