×
Ad

ಸಣ್ಣ-ಮಧ್ಯಮ ಕೈಗಾರಿಕೆಗಳು ದೇಶದ ಆಧಾರ ಸ್ತಂಭಗಳು: ಜಿಂದಾಲ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಸಜ್ಜನ್ ಜಿಂದಾಲ್

Update: 2019-06-08 22:05 IST

ಬಳ್ಳಾರಿ, ಜೂ.8: ಕೃಷಿ ಕ್ಷೇತ್ರದಿಂದ ನಿರುದ್ಯೋಗ ಸಮಸ್ಯೆಯನ್ನು ಸಂಪೂರ್ಣವಾಗಿ ನಿವಾರಿಸಲು ಸಾಧ್ಯವಿಲ್ಲ. ಹೀಗಾಗಿ, ಕೈಗಾರಿಕೆಗಳ ಬೆಳವಣಿಗೆಗೆ ಹೆಚ್ಚಿನ ಉತ್ತೇಜನ ಸಿಕ್ಕರೆ ನಿರುದ್ಯೋಗ ಸಮಸ್ಯೆಯನ್ನು ದೊಡ್ಡಮಟ್ಟದಲ್ಲಿ ನಿವಾರಿಸಬಹುದು. ಸಣ್ಣ, ಮಧ್ಯಮ ಕೈಗಾರಿಕೆಗಳು ದೇಶದ ಆಧಾರ ಸ್ತಂಭಗಳು ಎಂದು ಜಿಂದಾಲ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಸಜ್ಜನ್ ಜಿಂದಾಲ್ ಹೇಳಿದ್ದಾರೆ. 

ಶನಿವಾರ ಹೊಸಪೇಟೆಯ ತೋರಣಗಲ್‌ನ ಜಿಂದಾಲ್‌ನಲ್ಲಿ ಆಯೋಜಿಸಿದ್ದ ಕರ್ನಾಟಕ ರಾಜ್ಯ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆಗಳ ರಾಜ್ಯಮಟ್ಟದ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಕೃಷಿ ನಂತರ ಕೈಗಾರಿಕೆ ಕ್ಷೇತ್ರ ದೊಡ್ಡ ಶಕ್ತಿಯಾಗಿ ಬೆಳೆಯಬೇಕು. ಈ ಕ್ಷೇತ್ರ ಇನ್ನಷ್ಟು ಬೆಳೆಯುವ ಅಗತ್ಯವಿದೆ. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ದೇಶದ ಆಧಾರ ಸ್ತಂಭಗಳು. ಇವುಗಳು ಗಟ್ಟಿಯಾಗಿ ಬೆಳೆಯಬೇಕು. ಜಿಂದಾಲ್‌ನಂತಹ ದೊಡ್ಡ ಕಂಪೆನಿಗಳು ಬೆರಳೆಣಿಕೆಯಷ್ಟಿವೆ ಎಂದರು.

ಕರ್ನಾಟಕ ದೇಶದ ಪ್ರಮುಖ ರಾಜ್ಯ. ಕೈಗಾರಿಕೆ ಕ್ಷೇತ್ರದಲ್ಲಿ ಈ ರಾಜ್ಯ ಬೆಳೆದರೆ ಇಡೀ ದೇಶ ಅಭಿವೃದ್ಧಿಯಾಗುತ್ತದೆ. ಯಾರೋ ಒಬ್ಬರು ಬೆಳೆದರೆ ಅಭಿವೃದ್ಧಿಯಲ್ಲ. ಎಲ್ಲರೂ ಬೆಳೆಯಬೇಕು ಎಂದರು. ಮುಂದಿನ ಹತ್ತು ವರ್ಷಗಳಲ್ಲಿ ಭಾರತ, ಅಮೆರಿಕ ಹಾಗೂ ಚೀನಾ ದೊಡ್ಡ ಆರ್ಥಿಕ ಶಕ್ತಿಗಳಾಗಿ ಬೆಳೆಯಲಿವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಶ್ರೀರಾಮುಲು, ಕಾಂಗ್ರೆಸ್ ಮುಖಂಡ ಕೆ.ಸಿ.ಕೊಂಡಯ್ಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News