ಪತ್ನಿಗೆ ವರದಕ್ಷಿಣೆ ಕಿರುಕುಳ ಆರೋಪ: ವಿದೇಶದಿಂದ ಮರಳುವ ವೇಳೆ ವ್ಯಕ್ತಿಯ ಬಂಧನ

Update: 2019-06-08 17:17 GMT

ಮೂಡಿಗೆರೆ, ಜೂ.8: ವರದಕ್ಷಿಣೆ ತರುವಂತೆ ಪತ್ನಿಯನ್ನು ಪೀಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿಯಿಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದಾಗ ವಿದೇಶಕ್ಕೆ ಪಲಾಯನಗೈದಿದ್ದ ಪತಿಯನ್ನು, ವಿದೇಶದಿಂದ ವಾಪಾಸು ಬಂದಾಗ ಮಂಗಳೂರಿನ ಬಜಪೆ ವಿಮಾನ ನಿಲ್ದಾಣದಲ್ಲಿ ಮೂಡಿಗೆರೆ ಪೊಲೀಸರು ಬಂಧಿಸಿದ ಘಟನೆ ಶುಕ್ರವಾರ ಸಂಜೆ ನಡೆದಿದೆ. 

ಮೂಡಿಗೆರೆ ಪಟ್ಟಣದ ನಿವಾಸಿ ಪ್ರಸ್ತುತ ಬೆಂಗಳೂರಿನಲ್ಲಿ ವಾಸವಾಗಿರುವ ವಾಝೀದ್ ಎಂಬುವರ ಮಗಳನ್ನು ಗೋಣಿಬೀಡಿನ ತಾಜುದ್ದೀನ್ ಎಂಬಾತನಿಗೆ ಕಳೆದ ಮೂರುವರೆ ವರ್ಷದ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ಬಳಿಕ ಕೆಲ ದಿನದಲ್ಲಿ ಪತಿ ವಿದೇಶಕ್ಕೆ ಉದ್ಯೋಗಕ್ಕಾಗಿ ತೆರಳಿದ್ದ ವೇಳೆ ಪತಿಯ ಅಣ್ಣ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದಲ್ಲದೇ, ಪತಿಯ ಅಕ್ಕ ಹಾಗೂ ಅಣ್ಣ ಇಬ್ಬರು ಸೇರಿ ಹಿಂಸೆ ನೀಡಿದ್ದರು ಎನ್ನಲಾಗಿದೆ.  

ಬಳಿಕ ಪತಿ ವಿದೇಶದಿಂದ ಬಂದು ಆತನೂ ವರದಕ್ಷಿಣೆ ತರುವಂತೆ ಪತ್ನಿಗೆ ಕಿರುಕುಳ ನೀಡಿದ್ದ. ಪತಿಯ ಕಿರುಕುಳದಿಂದ ಬೇಸತ್ತ ಪತ್ನಿ ಸಲ್ಮಾ ಫಿರ್ದೌಸ್ ತನ್ನ ತಂದೆ ತಾಯಿಗೆ ವಿಚಾರ ತಿಳಿಸಿದಾಗ ಸಮುದಾಯದ ಪ್ರಮುಖರೆಲ್ಲಾ ಸೇರಿ ಹಲವು ಬಾರಿ ರಾಜಿ ಪಂಚಾಯಿತಿ ಮಾಡಿದ್ದರು. ಆದರೆ ಯಾವುದೇ ರಾಜಿಗೂ ಪತಿ ತಾಜುದ್ದೀನ್ ಹಾಗೂ ಆತನ ಅಣ್ಣ, ಅಕ್ಕ ಒಪ್ಪಿರಲಿಲ್ಲ ಎನ್ನಲಾಗಿದೆ. ಬಳಿಕ ಪತ್ನಿ ಸಲ್ಮಾ ಫಿರ್ದಾಸ್ ಮೂಡಿಗೆರೆ ಪೋಲೀಸರಿಗೆ ದೂರು ನೀಡಿದ್ದಳು. ಆಕೆಯ ದೂರಿನಂತೆ ವರದಕ್ಷಿಣೆ, ಹಿಂಸೆ, ಬೆದರಿಕೆ, ಹಲ್ಲೆ ಹಾಗೂ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿಕೊಂಡಿದ್ದರು. 

ವಿಷಯ ತಿಳಿದ ತಾಜುದ್ದೀನ್ ರಾತ್ರೋರಾತ್ರಿ ವಿದೇಶಕ್ಕೆ ಹಾರಿ ಹೋಗಿದ್ದ. ಆತನ ಅಣ್ಣ ಹಾಗೂ ಅಕ್ಕ ಜಾಮೀನು ಪಡೆದುಕೊಂಡಿದ್ದರು. ಆದರೆ ಪ್ರಕರಣ ಆರೋಪಿ ತಾಜುದ್ದೀನ್ ಶುಕ್ರವಾರ ವಿದೇಶದಿಂದ ಬಂದಾಗ ವಿಷಯ ತಿಳಿದ ಪೊಲೀಸರು ಮಂಗಳೂರಿನ ಬಜಪೆ ವಿಮಾನ ನಿಲ್ದಾಣದಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News