ಕುಮಾರಸ್ವಾಮಿಯೇ ಮುಂದಿನ 4 ವರ್ಷ ಸಿಎಂ: ಶಾಸಕ ಕೆ.ಸುರೇಶ್‍ಗೌಡ

Update: 2019-06-08 17:43 GMT

ಮಂಡ್ಯ, ಜೂ.8: ಮೈತ್ರಿ ಸರಕಾರ ಸುಭದ್ರವಾಗಿದ್ದು, ಕುಮಾರಸ್ವಾಮಿ ಇನ್ನೂ 4 ವರ್ಷ ಮುಖ್ಯಮಂತ್ರಿಯಾಗಿ ಉಳಿಯಲಿದ್ದಾರೆ ಎಂದು ಶಾಸಕ ಕೆ.ಸುರೇಶ್‍ಗೌಡ ಹೇಳಿದ್ದಾರೆ.

ಮದ್ದೂರು ತಾಲೂಕಿನ ಕೊಪ್ಪ ಭಾಗದ ವಿವಿಧ ಗ್ರಾಮಗಳ ಅಭಿವೃದ್ದಿಗೆ 15 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಜನಪರವಾಗಿ ಕೆಲಸ ಮಾಡುತ್ತಿರುವ ಸರಕಾರವನ್ನು ಯಾರಿಂದಲೂ ಅಭದ್ರಗೊಳಿಸಲು ಸಾಧ್ಯವಿಲ್ಲ ಎಂದರು.

ನಿಖಿಲ್ ಕುಮಾರಸ್ವಾಮಿ ಅವರಿಗೆ ಮಂಡ್ಯ ಕರ್ಮಭೂನಿಯಾಗಿದೆ. ಮುಂದಿನ ದಿನಗಳಲ್ಲಿ ಅವರು ಜಿಲ್ಲೆಯಲ್ಲೇ ವಾಸ ಮಾಡಲಿದ್ದಾರೆ ಹಾಗೂ ಉತ್ತಮ ಸಂಬಂಧ ಸಿಕ್ಕರೆ ಮಂಡ್ಯದ ಅಳಿಯ ಆಗಲಿದ್ದಾರೆಂದು ಎಂದೂ ಅವರು ಹೇಳಿದರು. 

ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್ ಅವರು ರಾಜೀನಾಮೆಯನ್ನು ವಾಪಸ್ಸು ತೆಗೆದುಕೊಂಡು ರಾಜ್ಯದಲ್ಲಿ ಪಕ್ಷ ಸಂಘಟನೆ ಮಾಡಲಿದ್ದಾರೆ. ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ, ಕ್ಷೇತ್ರದ ಅಭಿವೃದ್ಧಿ ಗುರಿ ಎಂದರು.

ಎಲ್ಲಾ ಮಾಜಿಗಳು ಬಿಜೆಪಿಗೆ ಹೋಗ್ತಾರೆ: ಮಾಜಿ ಸಚಿವ ಚಲುವರಾಯಸ್ವಾಮಿ ಬಿಜೆಪಿಗೆ ಹೋಗಲಿದ್ದಾರೆ. ಹಾಗಾಗಿ ಸಮ್ಮಿಶ್ರ ಸರಕಾರದ ವಿರುದ್ಧ ಹೇಳಿಕೆ ಕೊಡುತ್ತಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತಿರುವ ಎಲ್ಲಾ ಮಾಜಿಗಳೂ ಬಿಜೆಪಿಗೆ ಹೋಗಲಿದ್ದಾರೆ ಎಂದು ಸುರೇಶ್‍ಗೌಡ ಪ್ರತಿಕ್ರಿಯಸಿದರು.

ರಾಜ್ಯ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ಹಲವು ಬಾರಿ ನೀತಿ ಸಂಹಿತೆ ಜಾರಿಯಲ್ಲಿತ್ತು. ಇದರಿಂದ ಯಾವುದೇ ಅಭಿವದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಶನಿವಾರ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು. 

ಜಿಪಂ ಸದಸ್ಯರಾದ ಮರಿಹೆಗ್ಗಡೆ, ರೇಣುಕಾ ರಾಮಕೃಷ್ಣ, ತಾಪಂ ಸದಸ್ಯ ಮೋಹನ್, ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷ ಬಿದರಕೋಟೆ ಕುಶ, ತಾಪಂ ಮಾಜಿ ಉಪಾಧ್ಯಕ್ಷ ರಾಮಚಂದ್ರು, ಎಪಿಎಂಸಿ ಮಾಜಿ ಅಧ್ಯಕ್ಷ ಮೂಡ್ಯ ಚಂದ್ರು, ಚಿಕ್ಕೋನಹಳ್ಳಿ ತಮ್ಮಯ್ಯ, ಕೊಣಸಾಲೆ ಮಧು, ಸೋಮು, ಇಂದುಶೇಖರ್ ಇತರ ಮುಖಂಡರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News