ಸದ್ಯಕ್ಕೆ ಸಾರಿಗೆ ಬಸ್ ದರ ಏರಿಕೆ ಇಲ್ಲ: ಸಾರಿಗೆ ಸಚಿವ ತಮ್ಮಣ್ಣ ಸ್ಪಷ್ಟನೆ
ಮಂಡ್ಯ, ಜೂ.8: ಸಾರಿಗೆ ಬಸ್ ದರ ಏರಿಕೆ ಮಾಡುವ ಪ್ರಸ್ತಾಪವಿಲ್ಲ. ಮುಖ್ಯಮಂತ್ರಿ ಅವರು ಯಾವಾಗ ಸೂಚಿಸುತ್ತಾರೋ ಆಗ ದರ ಏರಿಕೆಯಾಗುತ್ತದೆ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಸ್ಪಷ್ಟಪಡಿಸಿದ್ದಾರೆ.
ಕೆ.ಎಂ.ದೊಡ್ಡಿ ಬಳಿಯ ಗುಡಿಗೆರೆ ಎಳನೀರು ಉಪಮಾರುಕಟ್ಟೆಗೆ 1.2 ಕೋಟಿ ರೂ.ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಶನಿವಾರ ಚಾಲನೆ ನೀಡಿದ ಸುದ್ದಿಗಾರರ ಜತೆ ಮಾತನಾಡಿದ ಅವರು, ಮೈತ್ರಿ ಸರಕಾರ ಸುಭದ್ರವಾಗಿದ್ದು ಯಾವುದೇ ಧಕ್ಕೆ ಇಲ್ಲವೆಂದರು.
ಪಕ್ಷದ ಕಾರ್ಯಕರ್ತರು ಸೈನಿಕರಿದ್ದಂತೆ. ಯುದ್ದಕ್ಕೆ ಸದಾ ಸಿದ್ದರಿರಿ ಎಂದೇಳುವುದು ತಪ್ಪಲ್ಲ. ಹಾಗಂತ ಮಧ್ಯಂತರ ಚುನಾವಣೆ ನಡೆಯುತ್ತದೆ ಎಂದರ್ಥವಲ್ಲ. ನಿಖಿಲ್ ಮತ್ತು ನಾವು ಸೋಲನ್ನು ಕ್ರೀಡಾಮನೋಭಾವದಿಂದ ಸ್ವೀಕರಿಸಿದ್ದೇವೆ. ಎಂದಿನಂತೆ ಜಿಲ್ಲೆಯ ಸಮಗ್ರ ಅಭಿವೃದ್ದಿಗೆ ದುಡಿಯುತ್ತೇವೆ ಎಂದು ಅವರು ಹೇಳಿದರು.
ಗುಡಿಗೆರೆಯಲ್ಲಿ ಎಳನೀರು ಮಾರುಕಟ್ಟೆ ಇರದೆ ರೈತರಿಗೆ ತೊಂದರೆಯಾಗಿತ್ತು. ಇದನ್ನು ಮನಗಂಡು ಪಾಳುಬಿದಿದ್ದ ಸರಕಾರಿ ಜಮೀನಿನಲ್ಲಿ ಉಪಮಾರುಕಟ್ಟೆ ಸ್ಥಾಪನೆ ಮಾಡಿ ಅಭಿವೃದ್ದಿಪಡಿಸಲಾಯಿತು. ಇದರಿಂದ ಈ ಭಾಗದ ರೈತರು ಮದ್ದೂರು ಸೇರಿದಂತೆ ದೂರದ ಎಳನೀರು ಮಾರುಕಟ್ಟೆಗೆ ಅಲೆದಾಡುವುದು ತಪ್ಪಿದೆ ಎಂದರು.
ಮಂಡ್ಯಜಿಲ್ಲೆಯಲ್ಲಿ ರೈತರು ಕಬ್ಬು, ಭತ್ತ, ಇನ್ನಿತರ ಸಂಪ್ರದಾಯಿಕ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಸಕಾಲಕ್ಕೆ ನೀರು ದೊರಕದ ಕಾರಣ ಅವರು ನಷ್ಟದ ಸುಳಿಗೆ ಸಿಲುಕಿದ್ದಾರೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಕಲ್ಪವೃಕ್ಷ ರೈತರ ಕೈಹಿಡಿದಿದೆ ಎಂದು ಹೇಳಿದರು.
ಜೆಡಿಎಸ್ ತಾಲೂಕು ಅಧ್ಯಕ್ಷ ಚಿಕ್ಕತಿಮ್ಮೇಗೌಡ, ಎಪಿಎಂಸಿ ಅಧ್ಯಕ್ಷ ಶಿವಲಿಂಗೇಗೌಡ, ಸದಸ್ಯರಾದ ಸ್ವಾಮೀಗೌಡ, ಬೋರೇಗೌಡ, ಶಿವಣ್ಣ, ರಾಜು, ನಾರಾಯಣ್, ಸಹಾಯಕ ಕಾರ್ಯದರ್ಶಿ ಎನ್.ನಾಗೇಶ್, ಸಾಕಮ್ಮ, ವಾಸುದೇವಮೂರ್ತಿ, ಇಂಜಿನಿಯರ್ ಗಣೇಶ್‍ಹೆಗ್ಡೆ, ಇತರರು ಹಾಜರಿದ್ದರು.