ಪಶ್ಚಿಮಬಂಗಾಳ ಹಿಂಸಾಚಾರ: ವರದಿ ಕೋರಿದ ಅಮಿತ್ ಶಾ

Update: 2019-06-09 15:44 GMT

ಹೊಸದಿಲ್ಲಿ, ಜೂ. 9: ಬಿಜೆಪಿಯ ಐವರು ಹಾಗೂ ಟಿಎಂಸಿಯ ಓರ್ವ ಕಾರ್ಯಕರ್ತ ಪ್ರಾಣ ಕಳೆದುಕೊಳ್ಳಲು ಕಾರಣವಾದ ಉತ್ತರಪರಗಣ ಜಿಲ್ಲೆಯಲ್ಲಿ ಶನಿವಾರ ನಡೆದ ಬಿಜೆಪಿ-ಟಿಎಂಸಿ ಕಾರ್ಯಕರ್ತರ ನಡುವಿನ ಘರ್ಷಣೆಯ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಪಶ್ಚಿಮಬಂಗಾಳ ಸರಕಾರದಿಂದ ವರದಿ ಕೋರಿದ್ದಾರೆ.

‘‘ಕೇಂದ್ರ ಗೃಹ ಸಚಿವಾಲಯ ರಾಜ್ಯ ಸರಕಾರದಿಂದ ವರದಿ ಕೋರಿದೆ. ಈ ಘರ್ಷಣೆಯನ್ನು ಕೇಂದ್ರ ಸರಕಾರ ಗಂಭೀರವಾಗಿ ತೆಗೆದುಕೊಳ್ಳಲಿದೆ ಎಂಬ ಭರವಸೆ ನನಗಿದೆ. ಈ ಘಟನೆ ಕುರಿತು ಜನರಿಗೆ ಆಕ್ರೋಶ ಇದೆ’’ ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗೀಯ ತಿಳಿಸಿದ್ದಾರೆ.

ಬಸಿರ್‌ ಹಾತ್‌ ನ ಸಂದೇಶಖಾಲಿಯಲ್ಲಿ ಬಿಜೆಪಿಯ ಮೂವರು ಕಾರ್ಯಕರ್ತರನ್ನು ಟಿಎಂಸಿ ಸದಸ್ಯರು ಗುಂಡು ಹಾರಿಸಿ ಹತ್ಯೆ ನಡೆಸಿದ್ದಾರೆ ಎಂದು ಬಿಜೆಪಿ ನಾಯಕ ಮುಕುಲ್ ರಾಯ್ ಆರೋಪಿಸಿದ್ದಾರೆ. ಉತ್ತರ 24 ಪರಗಣದಲ್ಲಿರುವ ನಗರದಲ್ಲಿ ಶನಿವಾರ ಎರಡು ಪಕ್ಷಗಳ ಕಾರ್ಯಕರ್ತರ ನಡುವಿನ ಘರ್ಷಣೆಯ ಸಂದರ್ಭ ಈ ಹತ್ಯೆ ನಡೆದಿದೆ ಎಂದು ಅವರು ಹೇಳಿದ್ದಾರೆ.

 ‘‘ಬಸಿರ್‌ ಹಾತ್‌ ನ ಸಂದೇಶಖಾಲಿಯಲ್ಲಿ ಟಿಎಂಸಿ ಗೂಂಡಾಗಳು ಬಿಜೆಪಿ ಕಾರ್ಯಕರ್ತರ ಮೇಲೆ ದಾಳಿ ನಡೆಸಿದ್ದಾರೆ ಹಾಗೂ ನಮ್ಮ ನಾಲ್ವರು ಕಾರ್ಯಕರ್ತರ ಮೇಲೆ ಗುಂಡು ಹಾರಿಸಿ ಹತ್ಯೆಗೈದಿದ್ದಾರೆ. ಅವರ ನಾಯಕ ಹಾಗೂ ಮುಖ್ಯಮಂತ್ರಿ ಭಯೋತ್ಪಾದನೆಯಲ್ಲಿ ತೊಡಗಿದ್ದಾರೆ. ಈ ಬಗ್ಗೆ ನಾವು ಗೃಹ ಸಚಿವ ಅಮಿತ್ ಶಾ ಜಿ, ಕೈಲಸ್ ವಿಜಯವರ್ಗೀಯ ಜಿ ಹಾಗೂ ನಮ್ಮ ರಾಜ್ಯ ನಾಯಕರಿಗೆ ಸಂದೇಶ ರವಾನಿಸಿದ್ದೆವು.’’ ಎಂದು ರಾಯ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News