ತುಮಕೂರು: ವಿವಾಹ ನೊಂದಣಿಗೆ ಲಂಚ ಪ್ರಕರಣ- ಅಧಿಕಾರಿಗೆ ಶಿಕ್ಷೆ ಪ್ರಕಟ

Update: 2019-06-09 17:24 GMT

ತುಮಕೂರು, ಜೂ.9: ವಿವಾಹ ನೋಂದಣಿ ಮಾಡಿಸಿ ಅದರ ರಿಜಿಸ್ಟ್ರೇಷನ್ ಪತ್ರ ನೀಡಲು ಅರ್ಜಿದಾರನಿಂದ ಲಂಚ ಸ್ವೀಕರಿಸಿದ್ದ ತುಮಕೂರು ಉಪ ನೋಂದಣಾಧಿಕಾರಿಗಳ ಕಚೇರಿಯ ಪ್ರಥಮ ದರ್ಜೆ ಗುಮಾಸ್ತರಿಗೆ ಇಲ್ಲಿನ ಲೋಕಾಯುಕ್ತ ವಿಶೇಷ ನ್ಯಾಯಾಲಯವು 4 ವರ್ಷಗಳ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.

ಪ್ರವೀಣ್ ಮತ್ತು ಅರ್ಚನ ದಂಪತಿಗಳು ತಮ್ಮ ವಿವಾಹ ನೋಂದಣಿಗಾಗಿ 2014ರ ಮೇ ತಿಂಗಳಿನಲ್ಲಿ ತುಮಕೂರಿನ ಉಪ ನೋಂದಣಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಿದ್ದರು. ಸದರಿ ಕಚೇರಿಯಲ್ಲಿ ವಿವಾಹ ನೋಂದಣಿಗಾಗಿಯೇ ಪ್ರತ್ಯೇಕ ಅಧಿಕಾರಿ ನೌಕರರಿದ್ದು, ಪ್ರಥಮ ದರ್ಜೆ ಗುಮಾಸ್ತರಾಗಿದ್ದ ಶ್ರೀನಿವಾಸ್ ಅವರು ವಿವಾಹ ನೋಂದಣಿ ಮಾಡಿಸಿ ಪತ್ರ ನೀಡಲು 4 ಸಾವಿರ ರೂ.ಗಳ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. 2500 ರೂ.ಗಳಿಗೆ ಮಾಡಿಕೊಡಲು ಅಂತಿಮವಾಗಿ ಒಪ್ಪಿಕೊಂಡಿದ್ದರು.

ಆದರೆ ಲಂಚ ನೀಡಲು ಇಷ್ಟವಿಲ್ಲದ ದಂಪತಿಗಳು ತುಮಕೂರು ಲೋಕಾಯುಕ್ತ ಅಧಿಕಾರಿಗಳನ್ನು ಸಂಪರ್ಕಿಸಿ ದೂರು ನೀಡಿದ್ದರು. ಮೇ 5, 2014 ರಂದು ಶ್ರೀನಿವಾಸ್ ಅವರು 2500 ರೂ.ಗಳ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತರು ದಾಳಿ ನಡೆಸಿ ಬಂಧಿಸಿದ್ದರು. ಆನಂತರ ತನಿಖಾ ಪ್ರಕ್ರಿಯೆ ಕೈಗೊಂಡು ಸಿಪಿಐ ಗೌತಮ್ ಅವರು ಲೋಕಾಯುಕ್ತ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಸದರಿ ವಿಚಾರಣೆಯು ನಡೆದು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಲೋಕಾಯುಕ್ತ ವಿಶೇಷ ನ್ಯಾಯಾಧೀಶರೂ ಆಗಿರುವ 7ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಎಸ್.ಸುಧೀಂದ್ರನಾಥ ಅವರ ಆರೋಪಿಗೆ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಕಲಂ 7ರ ಅಡಿಯಲ್ಲಿ 3 ವರ್ಷಗಳ ಶಿಕ್ಷೆ, 13(1) ಅಡಿಯಲ್ಲಿ 4 ವರ್ಷಗಳ ಶಿಕ್ಷೆ ಮತ್ತು 2500 ರೂ.ಗಳ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರಕಾರದ ಪರವಾಗಿ ಲೋಕಾಯುಕ್ತ ವಿಶೇಷ ಅಭಿಯೋಜಕರಾದ ಎನ್.ಬಸವರಾಜು ವಾದ ಮಂಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News