ಅಕ್ರಮ ಮರ ಸಾಗಾಟ: ಲಾರಿ ಸಹಿತ ನಾಲ್ವರು ಪೊಲೀಸ್ ವಶಕ್ಕೆ

Update: 2019-06-10 12:18 GMT

ಮಡಿಕೇರಿ, ಜೂ.10: ಅಕ್ರಮವಾಗಿ ಮಿಲ್‍ಗೆ ಸಾಗಾಟವಾಗುತ್ತಿದ್ದ ಮರಗಳನ್ನು ಲಾರಿ ಸಹಿತ ವಶ ಪಡಿಸಿಕೊಂಡಿರುವ ಜಿಲ್ಲಾ ಅಪರಾಧ ಪತ್ತೆ ದಳದ ಅಧಿಕಾರಿಗಳು ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸುಂಟಿಕೊಪ್ಪ ಸಮೀಪ ಬೋಯಿಕೇರಿ ಹೊರೂರು ವ್ಯಾಪ್ತಿಯ ತೋಟವೊಂದರಿಂದ ಮರಗಳನ್ನು ಸಾಗಿಸುತ್ತಿರುವ ಮಾಹಿತಿ ದೊರೆತ ಹಿನ್ನೆಲೆ ಡಿಸಿಐಬಿ ಮತ್ತು ಕುಶಾಲನಗರ ಪೊಲೀಸರು ಸಮೀಪದ ಮುಳ್ಳುಸೋಗೆ ಮಿಲ್‍ಗೆ ದಾಳಿ ಮಾಡಿದ್ದಾರೆ. ಈ ಸಂದರ್ಭ ಆರೋಪಿಗಳಾದ ಮುಳ್ಳುಸೋಗೆಯ ನಿಝಾಮುದ್ದಿನ್, ಚಾಲಕ ಹೊಸಕೋಟೆಯ ಹಂಝ, ಕೊಪ್ಪ ಗ್ರಾಮದ ನಿವಾಸಿ ಲತೀಫ್ ಮತ್ತು ಮಹಮ್ಮದ್ ಅಲಿ ಎಂಬವರನ್ನು ವಿಚಾರಣೆಗೆ ಒಳಪಡಿಸಿ ಬಂಧಿಸಿದ್ದಾರೆ. ಮರ ತುಂಬಿದ್ದ ಲಾರಿಯನ್ನು ವಶಪಡಿಸಿಕೊಳ್ಳಲಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪನ್ನೇಕರ್ ಅವರ ಮಾರ್ಗದರ್ಶನದಲ್ಲಿ ಡಿಸಿಐಬಿ ಇನ್ಸ್‍ಪೆಕ್ಟರ್ ನಾಗೇಶ್, ವೃತ್ತ ನಿರೀಕ್ಷಕ ದಿನೇಶ್ ಕುಮಾರ್ ನೇತೃತ್ವದಲ್ಲಿ ಕುಶಾಲನಗರ ಠಾಣಾಧಿಕಾರಿ ಪಿ.ಜಗದೀಶ್ ಹಾಗೂ ಡಿಸಿಐಬಿಯ ಸಹಾಯಕ ಸಬ್ ಇನ್ಸ್‍ಪೆಕ್ಟರ್ ಹಮೀದ್, ವೆಂಕಟೇಶ್, ಯೋಗೀಶ್, ನಿರಂಜನ್, ಅನಿಲ್, ವಸಂತ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News