ಭೂ ಸ್ವಾದೀನ ಕಾಯ್ದೆ ತಿದ್ದುಪಡಿ ವಿರೋಧಿಸಿ ರೈತರಿಂದ ಹೆದ್ದಾರಿ ತಡೆ: ಪ್ರತಿಭಟನೆಕಾರರ ಬಂಧನ, ಬಿಡುಗಡೆ
ಚಿಕ್ಕಮಗಳೂರು, ಜೂ.10: ಭೂಸ್ವಾಧೀನ ಕಾಯ್ದೆ ತಿದ್ದುಪಡಿ ಕೈಬಿಡುವುದು, ಸ್ವಾಮಿನಾಥನ್ ವರದಿ ಜಾರಿ, ರೈತರ ಸಂಪೂರ್ಣ ಸಾಲ ಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತಸಂಘ ಮತ್ತು ಹಸಿರುಸೇನೆ ಕಾರ್ಯಕರ್ತರು ಸೋಮವಾರ ನಗರ ಸಮೀಪದಲ್ಲಿ ಹೆದ್ದಾರಿ ತಡೆದು ಧರಣಿ ನಡೆಸಿದರು.
ರಾಷ್ಟ್ರೀಯ ಹೆದ್ದಾರಿ 173 ಕಡೂರು-ಚಿಕ್ಕಮಗಳೂರು ರಸ್ತೆಯ ಎಐಟಿ ವೃತ್ತದ ಬಳಿ ರಸ್ತೆ ತಡೆ ನಡೆಸಿ ಧರಣಿ ಹಮ್ಮಿಕೊಂಡಿದ್ದ ರೈತಸಂಘ ಮತ್ತು ಹಸಿರು ಸೇನೆಯ ಕಾರ್ಯಕರ್ತರು ಕೇಂದ್ರ ಹಾಗೂ ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ ಸ್ಥಳದಲಿದ್ದ ಪೊಲೀಸರು ರಸ್ತೆ ತಡೆ ನಡೆಸಿದ ಪ್ರತಿಭಟನಕಾರರನ್ನು ಬಂಧಿಸಿ ನಂತರ ಬಿಡುಗಡೆಗೊಳಿಸಿದರು.
ರಸ್ತೆ ತಡೆಯ ನೇತೃತ್ವ ವಹಿಸಿದ್ದ ರೈತಸಂಘದ ಜಿಲ್ಲಾಧ್ಯಕ್ಷ ದುಗ್ಗಪ್ಪಗೌಡ ಮಾತನಾಡಿ, ರಾಜ್ಯ ಸರಕಾರ ಉದ್ದೇಶಿಸಿರುವ ಭೂಸ್ವಾಧೀನ ಕಾಯಿದೆ ತಿದ್ದುಪಡಿ ವಾಪಾಸ್ ಪಡೆಯಬೇಕು. ಭೂಸ್ವಾಧೀನ ಕಾಯ್ದೆಗೆ 2013ರಲ್ಲಿ ಯುಪಿಎ ಸರಕಾರ ತಿದ್ದುಪಡಿ ತಂದಿದೆ. ಈ ತಿದ್ದುಪಡಿಯು ರೈತರಿಗೆ ಅನುಕೂಲವಾಗಿದೆ. ಆದರೆ ರಾಜ್ಯ ಸರಕಾರ ಹಿಂದಿನ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿರುವುದರಿಂದ ಭೂಸ್ವಾಧೀನ ಕಾಯ್ದೆಯು ರೈತರಿಗೆ ಮರಣ ಶಾಸನವಾಗಲಿದೆ ಎಂದ ಅವರು, ಭೂಸ್ವಾಧೀನ ಕಾಯ್ದೆಗೆ ಒಂದು ವೇಳೆ ತಿದ್ದುಪಡಿ ತಂದಲ್ಲಿ ಕಾಯ್ದೆಯಲ್ಲಿರುವ ಕೆಲವೊಂದು ಅಂಶಗಳನ್ನು ಜಿಲ್ಲಾಧಿಕಾರಿಯ ವಿವೇಚನೆಗೆ ಬಿಡಲಾಗುತ್ತದೆ. ಇದರಿಂದ ರೈತ ಸಮುದಾಯಕ್ಕೆ ಅನಾನುಕೂಲವಾಗಲಿದೆ. ಕೂಡಲೇ ರಾಜ್ಯ ಸರಕಾರ ಭೂಸ್ವಾಧೀನ ಕಾಯ್ದೆಗೆ ತಂದಿರುವ ತಿದ್ದುಪಡಿಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಸಂಘದ ಕಾರ್ಯಾಧ್ಯಕ್ಷ ದಯಾಕರ್ ಮಾತನಾಡಿ, ರೈತರಿಗೆ ಅಗತ್ಯವಾಗಿ ಬೇಕಾಗಿರುವ ವಿದ್ಯುತ್ ಸೌಲಭ್ಯವನ್ನು ಕಲ್ಪಿಸುವಲ್ಲಿ ರಾಜ್ಯ ಸರಕಾರ ವಿಫಲವಾಗಿದೆ. ತ್ರಿಫೇಸ್ ವಿದ್ಯುತ್‍ನ್ನು ಕೆಲವೇ ಗಂಟೆ ನೀಡುತ್ತಿದ್ದು ಇದರಿಂದ ಕುಡಿಯುವ ನೀರು ಸೇರಿದಂತೆ ರೈತನ ಹೊಲಗದ್ದೆಗಳಿಗೆ ತೀವ್ರ ತೊಂದರೆಯಾಗಿದೆ. ಹವಾಮಾನ ವೈಪರೀತ್ಯ, ಬೆಲೆ ಕುಸಿತ, ಇನ್ನಿತರೆ ಸಮಸ್ಯೆಗಳಿಂದಾಗಿ ರೈತರು ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆಯ ದಾರಿ ಹಿಡಿಯುತ್ತಿದ್ದಾರೆ. ಅತೀ ಹೆಚ್ಚು ರೈತರ ಆತ್ಮಹತ್ಯೆ ಪ್ರಕರಣ ನಡೆದಿರುವ 2ನೇ ರಾಜ್ಯ ಎಂಬ ಕುಖ್ಯಾತಿಗೆ ಕರ್ನಾಟಕ ಒಳಗಾಗಿದೆ. ಹೆಚ್.ಡಿ.ಕುಮಾರಸ್ವಾಮಿ ಅವರು ಚುನಾವಣಾ ಪೂರ್ವದಲ್ಲಿ ಅಧಿಕಾರಕ್ಕೆ ಬಂದ ಕೂಡಲೆ ರೈತರ ಎಲ್ಲ ಸಾಲವನ್ನೂ ಸಂಪೂರ್ಣ ಮನ್ನಾ ಮಾಡುವುದಾಗಿ ಘೋಷಿಸಿದ್ದರು. ಕೂಡಲೇ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಎಂ.ಮಹೇಶ್, ಕೆ.ನಾಗರಾಜ್, ಮಂಜೇಗೌಡ, ನಿರಂಜನ ಮೂರ್ತಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.