ಕಾರ್ನಾಡ್ ನಿಧನ ವೈಚಾರಿಕ ಕ್ಷೇತ್ರಕ್ಕೆ ದೊಡ್ಡ ನಷ್ಟ: ಇಲ್ಯಾಸ್ ಮುಹಮ್ಮದ್ ತುಂಬೆ

Update: 2019-06-10 13:34 GMT

ಬೆಂಗಳೂರು, ಜೂ. 10: ದೇಶದ ಅಪ್ರತಿಮ ವೈಚಾರಿಕ ಸಾಹಿತಿ, ಸಿನಿಮಾ ಹಾಗೂ ನಾಟಕ ರಂಗದ ದಿಗ್ಗಜರೂ ಆದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್‌ರ ನಿಧನದಿಂದ ಸಾಹಿತ್ಯ ಹಾಗೂ ವೈಚಾರಿಕ ರಂಗಕ್ಕೆ ಬಹುದೊಡ್ಡ ನಷ್ಟವುಂಟಾಗಿದೆ ಎಂದು ಎಸ್‌ಡಿಪಿಐ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ಸಂತಾಪ ಸೂಚಿಸಿದ್ದಾರೆ.

ಕಾರ್ನಾಡ್‌ ರಚಿಸಿದ ಸಾಹಿತ್ಯ ಹಾಗೂ ಸಿನಿಮಾ ಮತ್ತು ನಾಟಕಗಳಲ್ಲಿ ಸಮಾಜದಲ್ಲಿ ಬೀಡುಬಿಟ್ಟಿರುವ ಅಂಧ ಶ್ರದ್ಧೆ, ಕಂದಾಚಾರ ಹಾಗೂ ಶೋಷಣೆಯ ವಿರುದ್ಧ ತೀವ್ರ ಪ್ರತಿರೋಧ ಹಾಗೂ ತೀಕ್ಷ್ಣ ಬಂಡಾಯದ ಸಂದೇಶವಿದೆ. ಸಮಾಜಕ್ಕೆ ಮನಮುಟ್ಟುವಂತೆ ಮಾನವೀಯತೆಯ ಸಂದೇಶ ನೀಡುತ್ತಿದ್ದ ಅವರ ಸಾಹಿತ್ಯ, ನಾಟಕ ಹಾಗೂ ಸಿನಿಮಾಗಳು ಕ್ರಾಂತಿಕಾರಕ ಬದಲಾವಣೆಯ ಪ್ರೇರಣಾ ಶಕ್ತಿಯಾಗಿದೆ ಎಂದಿದ್ದಾರೆ.

ಕಾರ್ನಾಡ್‌ರವರು ಬಹುತ್ವ, ಜಾತ್ಯತೀತತೆಯ ಪ್ರತಿಪಾದಕರಾಗಿದ್ದು ತನ್ನ ನಿರ್ಭಿತ ಹಾಗೂ ನೇರ ವಿಚಾರಗಳ ಪ್ರತಿಪಾದನೆಯಿಂದ ಮನೆಮಾತಾಗಿದ್ದರು. ಸಮಾಜದ ತಳಮಟ್ಟದ ಜನರ ಬದುಕು, ಬವಣೆ ಗ್ರಾಮೀಣ ಜನಜೀವನದ ಸೊಗಡು, ಪುರೋಹಿತಶಾಹಿಗಳ ಶೋಷಣೆ, ಊಳಿಗಮಾನ್ಯತೆ ವಿರುದ್ಧ ಅವರ ಸಿನಿಮಾ, ನಾಟಕ, ಸಾಹಿತ್ಯದ ಮೂಲಕ ಪರಿವರ್ತನೆಗೆ ಮಾರ್ಗದರ್ಶಿಯಾಗಿದ್ದವು ಎಂದು ಹೇಳಿದ್ದಾರೆ.

ಕನ್ನಡದ ಕಣ್ಮಣಿಯಾಗಿ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆಯನ್ನಿತ್ತು ಕಾರ್ನಾಡ್ 1998ರಲ್ಲಿ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟಿದ್ದಾರೆ. ರಾಜಕೀಯದಲ್ಲಿ ಭದ್ರವಾಗಿ ಬೇರುಬಿಟ್ಟಿರುವ ಕೋಮುವಾದ, ದ್ರುವೀಕರಣ, ಬಲಪಂಥೀಯ, ರಾಷ್ಟೀಯವಾದ ಹಾಗೂ ಫ್ಯಾಶಿಸಂನ್ನು ಅತ್ಯಂತ ಕಟುವಾಗಿ ವಿರೋಧಿಸುತ್ತಿದ್ದ ಕಾರ್ನಾಡ್‌ರದು ನಿರ್ಭೀತ, ನೇರ, ತೀಕ್ಷ್ಣ ವೈಚಾರಿಕ ವ್ಯಕ್ತಿತ್ವವಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಾಟಕಕಾರ ಗಿರೀಶ್‌ಕಾರ್ನಾಡ್ ನಾಟಕ ಪ್ರಪಂಚದ ಅನರ್ಘ್ಯ ರತ್ನ. ವಿದೇಶದಲ್ಲಿದ್ದಾಗಲೆ ಕನ್ನಡ ನಾಟಕಗಳನ್ನು ಬರೆದು ರಾಜ್ಯಕ್ಕೆ ಬಂದು ಹೊಸ ನಾಟಕಗಳ ಓದು ಪ್ರದರ್ಶನಕ್ಕೆ ದಾರಿ ಮಾಡಿಕೊಟ್ಟರು. ಕನ್ನಡವಲ್ಲದೆ ಹಿಂದಿ, ಪಂಜಾಬಿ, ಮರಾಠಿ ಹಾಗೂ ಹಲವು ಭಾರತೀಯ ಭಾಷೆಗಳಿಗೆ ಅವರ ನಾಟಕಗಳು ಅನುವಾದಗೊಂಡು, ಪ್ರದರ್ಶನಗೊಂಡಿವೆ. ಕನ್ನಡ ಮಟ್ಟಿಗೆ ನಾಟಕ ಪ್ರಕಾರದ ಸಾಹಿತ್ಯಕ್ಕೆ ಹೊಸ ಮೆರುಗು ನೀಡಿದ ಪ್ರಮುಖರಲ್ಲಿ ಅವರೂ ಒಬ್ಬರು. ಅವರ ನಿಧನದಿಂದಾಗಿ ಕನ್ನಡ ಸಾರಸ್ವತ ಲೋಕ ಅಮೂಲ್ಯ ಜೀವವೊಂದನ್ನು ಕಳೆದುಕೊಂಡಂತಾಗಿದೆ.

-ಅರವಿಂದ ಮಾಲಗತ್ತಿ, ಅಧ್ಯಕ್ಷ, ಕನ್ನಡ ಸಾಹಿತ್ಯ ಅಕಾಡೆಮಿ

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ನಾಟಕಕಾರ ಗಿರೀಶ್ ಕಾರ್ನಾಡ್ ರಂಗಭೂಮಿ ಹಾಗೂ ಸಿನೆಮಾ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿ ಕನ್ನಡ ಭಾಷೆ, ಸಂಸ್ಕೃತಿಗಳಿಗೆ ಜಾಗತಿಕ ಮನ್ನಣೆ ತಂದುಕೊಟ್ಟವರು. ಅವರು ಕೇವಲ ಸಾಂಸ್ಕೃತಿಕ ವ್ಯಕ್ತಿ ಮಾತ್ರವಲ್ಲದೆ ಪ್ರಗತಿಪರ ಚಿಂತಕರಾಗಿದ್ದರು. ಜಾತ್ಯತೀತ ಹಾಗೂ ಪ್ರಜಾಪ್ರಭುತ್ವ ಮೌಲ್ಯಗಳಿಗೆ ಬದ್ಧರಾಗಿದ್ದರು. ಸಂಘಪರಿವಾರದ ಕೋಮು ರಾಜಕಾರಣದ ತೀವ್ರ ಟೀಕಾಕಾರರಾಗಿದ್ದರು. ಅವರ ಅಗಲಿಕೆಯಿಂದಾಗಿ ನಾಡಿನ ಸಾಂಸ್ಕೃತಿಕ ರಂಗ ಬಡವಾಗಿದೆ.

-ಎಚ್.ವಿ.ಅನಂತಸುಬ್ಬರಾವ್, ಅಧ್ಯಕ್ಷ, ಎಐಟಿಯುಸಿ

ಹಿರಿಯ ನಾಟಕಕಾರ ಗಿರೀಶ್‌ ಕಾರ್ನಾಡ್ ಕನ್ನಡ ರಂಗಭೂಮಿ ಹಾಗೂ ಸಾಹಿತ್ಯ ಲೋಕದ ಅನರ್ಘ್ಯ ರತ್ನ. ನಾಟಕಕಾರರಾಗಿ, ಸಿನೆಮಾ ನಟರಾಗಿ ಕನ್ನಡ ಸಾಹಿತ್ಯ, ಸಿನೆಮಾ ಕ್ಷೇತ್ರಕ್ಕೆ ಅಪ್ರತಿಮ ಸೇವೆಗೈದ ಅಪರೂಪದ ವ್ಯಕ್ತಿತ್ವ. ಅವರು ಕೇವಲ ಕನ್ನಡಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ತೆಲುಗು, ತಮಿಳು ಹಾಗೂ ಹಿಂದಿ ಸಿನೆಮಾ ಕ್ಷೇತ್ರದಲ್ಲಿ ಅತ್ಯುತ್ತಮ ನಟನೆಂದು ಖ್ಯಾತಿ ಗಳಿಸಿದವರು. ಇಂತಹ ಬಹುಮುಖಿ ಪ್ರತಿಭೆಯ ಕಾರ್ನಾಡರ ನಿಧನದಿಂದಾಗಿ ಕನ್ನಡ ಸಾಹಿತ್ಯಲೋಕ ಶ್ರೇಷ್ಠ ಚಿಂತಕರೊಬ್ಬರನ್ನು ಕಳೆದುಕೊಂಡಂತಾಗಿದೆ.

-ಪ್ರಿಯಾಂಕ್ ಖರ್ಗೆ, ಸಚಿವರು, ಸಮಾಜ ಕಲ್ಯಾಣ ಇಲಾಖೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News